ಬಾಯ್ಕಾಟ್‌ ಅಭಿಯಾನಕ್ಕೆ ಮಾಲ್ಡೀವ್ಸ್‌ ಕಂಗಾಲು!

KannadaprabhaNewsNetwork | Updated : Jan 09 2024, 10:46 AM IST

ಸಾರಾಂಶ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಆಕ್ಷೇಪಾರ್ಹ ಹೇಳಿಕೆಗೆ ಪ್ರತಿಯಾಗಿ ಮಾಲ್ಡೀವ್ಸ್‌ ಭಾರಿ ನಷ್ಟ ಅನುಭವಿಸುತ್ತಿದೆ. ಭಾರತೀಯರ ಬಾಯ್ಕಾಟ್‌ ಅಭಿಯಾನಕ್ಕೆ ಅಕ್ಷರಶಃ ನಲುಗಿದೆ. ನಾವು ಕ್ಷಮೆ ಕೇಳುತ್ತೇವೆ ಮಾಲ್ಡೀವ್ಸ್‌ಗೆ ಮರಳಿ ಎಂದು ಅಲ್ಲಿನ ಜನಪ್ರತಿನಿಧಿಗಳು ದುಂಬಾಲು ಬಿದ್ದಿದ್ದಾರೆ. 

ನವದೆಹಲಿ/ಮಾಲೆ: 

ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲೇ ಭಾರತದಲ್ಲಿ ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಅಭಿಯಾನ ಜೋರಾಗಿದೆ. ಭಾರತದ ಟೂರಿಸಂ ಕಂಪನಿಯೊಂದು ಮಾಲ್ಡೀವ್ಸ್‌ಗೆ ಪ್ರವಾಸ ರದ್ದು ಮಾಡುವುದಾಗಿ ಘೋಷಿಸಿದೆ. 

ಅಲ್ಲದೆ, ಭಾರತದ ವಿಮಾನಯಾನ ಕಂಪನಿಗಳೂ ಮಾಲ್ಡೀವ್ಸ್‌ಗೆ ವಿಮಾನ ಹಾರಾಟಕ್ಕೆ ಹಿಂದೆ ಮುಂದೆ ನೋಡತೊಡಗಿವೆ. ಇದರಿಂದ ಕಂಗೆಟ್ಟಿರುವ ಮಾಲ್ಡೀವ್ಸ್‌ನ ಸಂಸದರು ಹಾಗೂ ಇತರ ರಾಜಕೀಯ ನಾಯಕರು ಬಹಿಷ್ಕಾರ ಕೈಬಿಟ್ಟು ಪ್ರವಾಸ ಕೈಗೊಳ್ಳುವಂತೆ ಭಾರತೀಯರಿಗೆ ಮನವಿ ಮಾಡಿದ್ದಾರೆ.

ಮಾಲ್ಡೀವ್ಸ್‌ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಳಿಕ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಭಿಯಾನ ಭಾರತದಲ್ಲಿ ಹೆಚ್ಚಾಗಿದೆ. 

ಆದರೆ, 2023ರ ಅಂಕಿ-ಅಂಶಗಳ ಪ್ರಕಾರ ಮಾಲ್ಡೀವ್ಸ್‌ಗೆ ಭೇಟಿ ನೀಡುವಲ್ಲಿ ಭಾರತದ ಪ್ರವಾಸಿಗರು ನಂ.1 ಸ್ಥಾನ ಗಳಿಸಿದ್ದಾರೆ. ಹೀಗಾಗಿ ಭಾರತೀಯರ ಬಹಿಷ್ಕಾರ ಅಭಿಯಾನದಿಂದ ಸಹಜವಾಗಿಯೇ ಮಾಲ್ಡೀವ್ಸ್‌ ಕಂಗೆಟ್ಟಿದೆ.

ಕ್ಷಮೆ ಕೇಳುತ್ತೇವೆ, ಬಹಿಷ್ಕಾರ ಕೈಬಿಡಿ: ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಲ್ಡೀವ್ಸ್‌ನ ಮಾಜಿ ಸ್ಪೀಕರ್‌, ಹಾಲಿ ಸಂಸದೆ ಇವಾ ಅಬ್ದುಲ್ಲಾ, ‘ಭಾರತೀಯರು ಕೋಪಗೊಂಡಿರುವುದು ಸರಿಯಾಗಿದೆ. ನಮ್ಮ ಹೇಳಿಕೆ ಅವರನ್ನು ಕೆರಳಿಸಿದೆ. ಆದರೆ ಈ ಹೇಳಿಕೆಗಳು ಮಾಲ್ಡೀವ್ಸ್ ಜನರ ಹೇಳಿಕೆಗಳಲ್ಲ. 

ಈ ಘಟನೆಗೆ ಸಂಬಂಧಿಸಿದಂತೆ ನಾನು ವೈಯಕ್ತಿಕವಾಗಿ ಭಾರತೀಯರ ಕ್ಷಮೆ ಕೇಳುತ್ತೇನೆ. ಭಾರತೀಯರು ಪ್ರವಾಸ ಕೈಗೊಳ್ಳುವುದನ್ನು ಕೈಬಿಡಬಾರದು’ ಎಂದು ಮನವಿ ಮಾಡಿದ್ದಾರೆ.

ಮಾಜಿ ಸಚಿವ ಅಹ್ಮದ್‌ ಮಹ್‌ಲೂಫ್‌ ಸಹ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ‘ಭಾರತೀಯರು ಪ್ರವಾಸವನ್ನು ಬಹಿಷ್ಕರಿಸುವುದು ನಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಇಂತಹ ಅಭಿಯಾನದಿಂದ ಸುಧಾರಿಸಿಕೊಳ್ಳುವುದು ನಮಗೆ ಕಷ್ಟವಾಗಲಿದೆ’ ಎಂದು ಹೇಳಿದ್ದಾರೆ. 

ಈಸ್ ಮೈ ಟ್ರಿಪ್‌ನಿಂದ ಬುಕ್ಕಿಂಗ್‌ ರದ್ದು: ಭಾರತದ ಸಾರ್ವಭೌಮತೆಯನ್ನು ಗೌರವಿಸಿ ಮಾಲ್ಡೀವ್ಸ್‌ ಪ್ರಯಾಣದ ಎಲ್ಲಾ ವಿಮಾನಗಳ ಬುಕ್ಕಿಂಗ್‌ ರದ್ದು ಮಾಡಿರುವುದಾಗಿ ಭಾರತದ ‘ಈಸ್‌ ಮೈ ಟ್ರಿಪ್‌’ ಟೂರಿಸಂ ಏಜೆನ್ಸಿ ಘೋಷಿಸಿದೆ.

ಈ ಕುರಿತಾಗಿ ಟ್ವೀಟ್‌ ಮಾಡಿರುವ ಕಂಪನಿಯ ಸಿಇಒ ನಿಶಾಂತ್‌ ಪಿಟ್ಟಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಲಕ್ಷದ್ವೀಪ ಪ್ರವಾಸ ಕೈಗೊಳ್ಳಲು ಈಸ್‌ ಮೈ ಟ್ರಿಪ್‌ ವಿಶೇಷ ಆಫರ್‌ಗಳನ್ನು ನೀಡುತ್ತಿದೆ. 

ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡಿ, ನಮ್ಮದೇ ದೇಶದಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿ. ಭಾರತದ ಸಾರ್ವಭೌಮತೆಯ ಜೊತೆ ನಿಲ್ಲಲು ಈಸ್‌ ಮೈ ಟ್ರಿಪ್‌ ಮಾಲ್ಡೀವ್ಸ್‌ಗೆ ಹೋಗುವ ಎಲ್ಲಾ ವಿಮಾನಗಳ ಬುಕ್ಕಿಂಗ್‌ಗಳನ್ನು ರದ್ದು ಮಾಡಿದೆ’ ಎಂದು ಹೇಳಿದ್ದಾರೆ.

ಕ್ಷಮೆ ಕೇಳುತ್ತೇವೆ: ಭಾರತೀಯರು ಕೋಪಗೊಂಡಿರುವುದು ಸರಿಯಾಗಿದೆ. ನಮ್ಮ ಹೇಳಿಕೆ ಅವರನ್ನು ಕೆರಳಿಸಿದೆ. ಆದರೆ ಈ ಹೇಳಿಕೆಗಳು ಮಾಲ್ಡೀವ್ಸ್ ಜನರ ಹೇಳಿಕೆಗಳಲ್ಲ. ಈ ಘಟನೆಗೆ ಸಂಬಂಧಿಸಿದಂತೆ ನಾನು ವೈಯಕ್ತಿಕವಾಗಿ ಭಾರತೀಯರ ಕ್ಷಮೆ ಕೇಳುತ್ತೇನೆ.  ಭಾರತೀಯರು ಪ್ರವಾಸ ಕೈಗೊಳ್ಳುವುದನ್ನು ಕೈಬಿಡಬಾರದು ಎಂದು ಸಂಸದೆ ಇವಾ ಅಬ್ದುಲ್ಲಾ ಹೇಳಿದ್ದಾರೆ.

ಸಚಿವರ ಸಸ್ಪೆಂಡ್ ಸಾಲದು, ವಜಾ ಮಾಡಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು ಸಾಲದು. ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ಭಾರತ ಸರ್ಕಾರ ಆಗ್ರಹಿಸಿದೆ. ಸೋಮವಾರ ಮಾಲ್ಡೀವ್ಸ್‌ನ ಭಾರತದ ಪ್ರತಿನಿಧಿಯನ್ನು ಕರೆಸಿ ವಿದೇಶಾಂಗ ಸಚಿವಾಲಯ ಈ ಆಗ್ರಹವನ್ನು ವ್ಯಕ್ತಪಡಿಸಿದೆ.

Share this article