ರಿಯಾದ್: ಮರುಭೂಮಿ ದೇಶ ಸೌದಿ ಅರೇಬಿಯಾದಲ್ಲಿ ಅಪರೂಪದ ಹಿಮಪಾತ ಮತ್ತು ಗುಡುಗುಸಹಿತ ಮಳೆಯಾಗಿದೆ. ಉತ್ತರದ ತಬೂಕ್ ಪ್ರದೇಶದ ಜಬಲ್ ಅಲ್ ಲಾವ್ಜ್ ಬೆಟ್ಟ ಮತ್ತು ಇತರ ಬೆಟ್ಟಗಳು ಹಿಮದಿಂದ ಆವೃತವಾದ ಅದ್ಭುತ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಬೂಕ್, ಹೈಲ್, ಅಲ್ ಖಾಸಿಂ, ರಿಯಾದ್‌ನ ಉತ್ತರ ಭಾಗ ಮತ್ತು ಮದೀನಾ ಪ್ರದೇಶಗಳಲ್ಲಿ ಹಿಮಪಾತ ಮತ್ತು ಗುಡುಗುಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಸೌದಿ ಹವಾಮಾನ ಇಲಾಖೆ ತಿಳಿಸಿದೆ.
ಕೆಲವೆಡೆ ತಾಪಮಾನ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬಿರುಗಾಳಿ, ಆಲಿಕಲ್ಲು, ಹಠಾತ್ ಪ್ರವಾಹ ಮತ್ತು ಸಮುದ್ರದಲ್ಲಿ ಎತ್ತರದ ಅಲೆಗಳ ಸಾಧ್ಯತೆ ಇದೆ. ಹಾಗಾಗಿ ಸರ್ಕಾರದ ಅಧಿಕೃತ ಮಾಹಿತಿಯನ್ನು ಅನುಸರಿಸಿ ಸುರಕ್ಷಿತವಾಗಿರಿ ಎಂದು ಅಧಿಕಾರಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ಮರುಭೂಮಿ ಪ್ರದೇಶದಲ್ಲಿ ಹಿಮ ಬೀಳುವುದು ಬಹಳ ಅಪರೂಪದ ಘಟನೆಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.