ಮತ್ತೆ ರೈಲು ದುರಂತ: ತಮಿಳುನಾಡಿನಲ್ಲಿ ಮೈಸೂರು ರೈಲು ಭೀಕರ ಅಪಘಾತ - 12 ಬೋಗಿಗಳು ಹಳಿತಪ್ಪಿ 1 ಬೋಗಿಗೆ ಬೆಂಕಿ

KannadaprabhaNewsNetwork |  
Published : Oct 13, 2024, 01:10 AM ISTUpdated : Oct 13, 2024, 04:22 AM IST
ರೈಲು ದುರಂತ | Kannada Prabha

ಸಾರಾಂಶ

ಈ ಹಿಂದೆ 300ಕ್ಕೂ ಹೆಚ್ಚು ಜನರ ಬಲಿಪಡೆದ ಒಡಿಶಾದ ಬಾಹಾನಗಾ ರೈಲು ದುರಂತವನ್ನು ನೆನಪಿಸುವಂಥ ರೈಲ್ವೆ ಅಪಘಾತ ತಮಿಳುನಾಡಿನಲ್ಲಿ ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಸಂಭವಿಸಿದೆ.

ಚೆನ್ನೈ: ಈ ಹಿಂದೆ 300ಕ್ಕೂ ಹೆಚ್ಚು ಜನರ ಬಲಿಪಡೆದ ಒಡಿಶಾದ ಬಾಹಾನಗಾ ರೈಲು ದುರಂತವನ್ನು ನೆನಪಿಸುವಂಥ ರೈಲ್ವೆ ಅಪಘಾತ ತಮಿಳುನಾಡಿನಲ್ಲಿ ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಸಂಭವಿಸಿದೆ. ಗಂಟೆಗೆ 75 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್‌ ರೈಲು, ಒಡಿಶಾ ಘಟನೆಯಂತೆಯೇ ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ಪ್ರವೇಶಿಸಿ ಅಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಆಗ 12 ಬೋಗಿಗಳು ಹಳಿತಪ್ಪಿವೆ ಹಾಗೂ 1 ಬೋಗಿಗೆ ಬೆಂಕಿ ಹೊತ್ತಿಕೊಂಡಿದೆ.

ಸುದೈವವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ. ಆದರೆ 19 ಪ್ರಯಾಣಿಕರು ಗಾಯಗೊಂಡಿದ್ದಾರೆ.ಈ ಘಟನೆ ರೈಲ್ವೆ ಸಿಗ್ನಲಿಂಗ್‌ ವ್ಯವಸ್ಥೆಯ ವೈಫಲ್ಯದಿಂದ ಆಗಿದೆ ಎಂಬ ಸಂದೇಹ ಇದೆ. ಹೀಗಾಗಿ ಸಿಗ್ನಲಿಂಗ್‌ ವ್ಯವಸ್ಥೆ ಬಗ್ಗೆ ಮತ್ತೆ ನಾನಾ ಪ್ರಶ್ನೆ ಎದ್ದಿವೆ. ಹೀಗಾಗಿ ಘಟನೆ ಹೇಗೆ ಸಂಭವಿಸಿತು ಎಂದು ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ ಹಾಗೂ ಸುರಕ್ಷತಾ ಆಯುಕ್ತರು ಶನಿವಾರ ಆಗಮಿಸಿ ತಪಾಸಣೆ ಮಾಡಿದ್ದಾರೆ. ಉಗ್ರರ ಕೃತ್ಯ ಇರಬಹುದೇ ಎಂಬ ಶಂಕೆಯೂ ಇದೆ. ಹೀಗಾಗಿ ಸ್ಥಳಕ್ಕೆ ಎನ್‌ಐಎ ತಂಡ ಕೂಡ ಆಗಮಿಸಿ ತಪಾಸಣೆ ನಡೆಸುತ್ತಿದೆ.

ಆಗಿದ್ದೇನು?:

ಶುಕ್ರವಾರ ರಾತ್ರಿ ಚೆನ್ನೈನಿಂದ 40 ಕಿ.ಮೀ. ದೂರದಲ್ಲಿರುವ ತಿರುವಳ್ಳೂರು ಜಿಲ್ಲೆಯ ಕವರೈಪೆಟ್ಟೈ ರೈಲು ನಿಲ್ದಾಣದಲ್ಲಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಮೈಸೂರು-ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್ (ಸಂಖ್ಯೆ 12578) ರೈಲು ಸಾಗುತ್ತಿತ್ತು. ಆದರೆ ಏಕಾಏಕಿ ಈ ರೈಲು ಮುಖ್ಯ ಮಾರ್ಗದ ಬದಲು ಸ್ಟೇಷನ್‌ನಲ್ಲಿನ ಲೂಪ್‌ ಲೈನ್‌ಗೆ (ಪಕ್ಕದ ಮಾರ್ಗ) ತನ್ನ ಪಥ ಬದಲಾಯಿಸಿದೆ. ಆಗ ಆ ಮಾರ್ಗದಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ 12 ಬೋಗಿಗಳು ಹಳಿ ತಪ್ಪಿದರೆ 1 ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸುದೈವವಶಾತ್ 19 ಪ್ರಯಾಣಿಕರಿಗೆ ಮಾತ್ರ ಗಾಯವಾಗಿದ್ದು, ಮಿಕ್ಕ ಪ್ರಯಾಣಿಕರು ಬಚಾವಾಗಿದ್ದಾರೆ.

ಮುಖ್ಯ ಮಾರ್ಗಕ್ಕೇ ಇತ್ತು ಸಿಗ್ನಲ್‌:

ಘಟನೆ ಬಗ್ಗೆ ಮಾತನಾಡಿದ ದಕ್ಷಿಣ ರೈಲ್ವೆ ಜನರಲ್ ಮ್ಯಾನೇಜರ್ ಆರ್‌.ಎನ್. ಸಿಂಗ್, ಬಾಗ್ಮತಿ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್‌ ರೈಲು ಒಂದೇ ದಿಕ್ಕಿನಲ್ಲಿ (ಚೆನ್ನೈ ಕಡೆಗೆ) ಸಾಗುತ್ತಿದ್ದವು. ಹೀಗಾಗಿ ಕವರೈಪೆಟ್ಟೈ ರೈಲು ನಿಲ್ದಾಣದ ಲೂಪ್‌ ಲೈನಿಗೆ ಗೂಡ್ಸ್‌ ರೈಲನ್ನು ಹಾಕಲಾಗಿತ್ತು ಹಾಗೂ ಮುಖ್ಯ ಮಾರ್ಗಕ್ಕೆ ಬಾಗ್ಮತಿ ಎಕ್ಸ್‌ಪ್ರೆಸ್‌ ಸಾಗಲು ಗ್ರೀನ್‌ ಸಿಗ್ನಲ್‌ ನೀಡಲಾಗಿತ್ತು. ಆದರೆ ಬಾಗ್ಮತಿ ಎಕ್ಸ್‌ಪ್ರೆಸ್‌ ಮುಖ್ಯ ಮಾರ್ಗ ಬದಲಿಸಿ ಲೂಪ್‌ ಲೈನ್‌ಗೆ ನುಗ್ಗಿದೆ ಹಾಗೂ ಅಲ್ಲಿ ನಿಂತಿದ್ದ ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದಿದೆ. ಮುಖ್ಯ ಮಾರ್ಗಕ್ಕೆ ಸಿಗ್ನಲ್‌ ಇದ್ದರೂ ಬಾಗ್ಮತಿ ರೈಲು ಲೂಪ್‌ಲೈನ್‌ಗೆ ನುಗ್ಗಿದ್ದು ಅಚ್ಚರಿಯ ವಿಚಾರ. ಇಲ್ಲಿ ಏನೋ ತಪ್ಪಾಗದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಅಪಘಾತದ ನೈಜ ಕಾರಣ ತಿಳಿಯಲಿದೆ’ ಎಂದರು.

ಡಾಟಾ ಲಾಗರ್‌ನಲ್ಲಿ ವಿಡಿಯೋ:

ರೈಲ್ವೆ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಅಪಘಾತದ ‘ಡಾಟಾ ಲಾಗರ್’ ವಿಡಿಯೋ ಹರಿದಾಡುತ್ತಿದೆ. ಇದರಲ್ಲಿ ರೈಲು ಮುಖ್ಯ ಮಾರ್ಗ ಬದಲಿಸಿ ಲೂಪ್‌ ಲೈನ್‌ಗೆ ನುಗ್ಗುವುದು ಕಾಣಿಸುತ್ತಿದೆ. ಹೀಗಾಗಿ ಖುದ್ದು ರೈಲ್ವೆ ಸಿಬ್ಬಂದಿಯೇ ಸಿಗ್ನಲಿಂಗ್‌ ವ್ಯವಸ್ಥೆಯ ಸುಧಾರಣೆಗೆ ಆಗ್ರಹಿಸಿದ್ದಾರೆ.ಡಾಟಾ ಲಾಗರ್‌ ಎಂಬುದು ರೈಲು ನಿಲ್ದಾಣಗಳಲ್ಲಿ ಅಳವಡಿಸಿರುವ ಸಾಧನ. ಇದು ರೈಲು ಸಂಚಾರ ಹಾಗೂ ಸಿಗ್ನಲಿಂಗ್‌ನ ಪ್ರತಿ ಕ್ಷಣವನ್ನೂ ಸೆರೆ ಹಿಡಿಯುತ್ತದೆ.

ಬಸ್ ಮೂಲಕ ಪ್ರಯಾಣಿಕರು ಚೆನ್ನೈಗೆ:

ಗಾಯಾಳುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಿಂದ ಅತಂತ್ರರಾದ 1800 ಪ್ರಯಾಣಿಕರನ್ನು ರಾಜ್ಯದ ರಾಜಧಾನಿ ಚೆನ್ನೈಗೆ ಬಸ್‌ಗಳ ಮೂಲಕ ಕರೆದೊಯ್ಯಲಾಯಿತು ಮತ್ತು ತಾತ್ಕಾಲಿಕ ವಸತಿ ಕಲ್ಪಿಸಲಾಯಿತು. ಅವರನ್ನು ವಿಶೇಷ ರೈಲಿನಲ್ಲಿ ಅಥವಾ ಮುಂದಿನ ರೈಲುಗಳಲ್ಲಿ ಆಯಾ ಸ್ಥಳಗಳಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ.

ಇಂದು ರಿಪೇರಿ ಪೂರ್ಣ:

ಹಳಿತಪ್ಪುವಿಕೆ ಮತ್ತು ನಡೆಯುತ್ತಿರುವ ದುರಸ್ತಿ ಕಾರ್ಯದ ಪರಿಣಾಮವಾಗಿ ಬಹು ರೈಲುಗಳನ್ನು ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ. ದಿನಕ್ಕೆ ನಿಗದಿಯಾಗಿದ್ದ ಕನಿಷ್ಠ 18 ರೈಲುಗಳನ್ನು ರದ್ದುಗೊಳಿಸಲಾಗಿದೆ. ಭಾನುವಾರ ಹಳಿ ದುರಸ್ತಿ ಪೂರ್ಣವಾಗಲಿದ್ದು, ನಂತರ ಸಂಚಾರ ಸುಗಮವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಸಚಿವರ ರಾಜೀನಾಮೆಗೆ ವಿಪಕ್ಷ ಆಗ್ರಹ

ನವದೆಹಲಿ: ಸತತ ರೈಲು ಅಪಘಾತಗಳ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್‌ ಆಗ್ರಹಿಸಿದೆ. ಇನ್ನು ರೈಲು ಅಪಘಾತದ ಬಗ್ಗೆ ಕಿಡಿಕಾರಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ. ‘ರೈಲ್ವೆ ಸುರಕ್ಷತೆ ಬಗ್ಗೆ ಏಕೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ? ಇಷ್ಟು ಜೀವಗಳು ಬಲಿಯಾದರೂ ಇನ್ನೂ ಸುರಕ್ಷತಾ ಕ್ರಮ ಏಕಿಲ್ಲ? ಸರ್ಕಾರ ಎಚ್ಚರಗೊಳ್ಳಲು ಇನ್ನೆಷ್ಟು ಜನರ ಬಲಿ ಬೇಕು?’ ಎಂದು ಪ್ರಶ್ನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದ ವಿಮಾನ ಸಂಸ್ಥೆ ಸಂಕಷ್ಟದಲ್ಲಿ