ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರನ್ನು ಮಂಗಳವಾರ ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಮುಖಂಡ ಬಿ.ಎಲ್. ಸಂತೋಷ್ ಅವರನ್ನು ಮಂಗಳವಾರ ಭೇಟಿ ಮಾಡಿ ಪಕ್ಷಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಅವರನ್ನು ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರಿಂದ ಅಂತಿಮ ಕ್ಷಣದವರೆಗೆ ಪ್ರಯತ್ನಗಳು ನಡೆದರೂ, ಅವ್ಯಾವವೂ ಫಲ ಕೊಡದೆ ಅವರು ಪಕ್ಷವನ್ನು ತೊರೆಯುವ ಮಾತನ್ನು ಪುನರುಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಅಣ್ಣಾಮಲೈ ಮಂಗಳವಾರ ಬೆಳಿಗ್ಗೆ ನಿತಿನ್ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾದರು. ಸ್ವತಂತ್ರವಾಗಿ ರಾಜಕೀಯವಾಗಿ ಮುನ್ನಡೆಯುವ ಅಭಿಲಾಷೆ ವ್ಯಕ್ತಪಡಿಸಿದ ಅವರು, ಸೌಹಾರ್ದಯುತವಾಗಿ ಪಕ್ಷದಿಂದ ಹೊರನಡೆಯುತ್ತಿರುವುದಾಗಿ ತಿಳಿಸಿದರು. ನಂತರ ಪಕ್ಷದ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿ ಮಾಡಿ, ‘ಪಕ್ಷದಲ್ಲಿ ಇನ್ನು ಮುಂದುವರಿಯಲು ಆಗದು’ ಎಂದು ಬರೆದಿದ್ದ ಕಾಗದ ನೀಡಿದರು ಎಂದು ಗೊತ್ತಾಗಿದೆ, ಆದರೆ ಇದು ರಾಜೀನಾಮೆ ಪತ್ರವಲ್ಲ ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.
ಬಳಿಕ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಅಣ್ಣಾಮಲೈ ಭೇಟಿಯಾಗಿ ತಾವು ಪಕ್ಷ ಬಿಡಬೇಕಾದ ಅನಿವಾರ್ಯ ಪರಿಸ್ಥಿತಿ ಬಗ್ಗೆ ವಿವರ ನೀಡಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷಗೆ ಬುಲಾವ್:
ಈ ನಡುವೆ, ಭೇಟಿ ವೇಳೆ ನಾಯಕರು ಪಕ್ಷದಲ್ಲೇ ಉಳಿಯಿರಿ ಎಂದು ಅಣ್ಣಾಮಲೈಗೆ ಕೋರಿದರು ಎನ್ನಲಾಗಿದೆ. ಹೀಗಾಗಿ ಅಣ್ಣಾಮಲೈ ರಾಜೀನಾಮೆ ಬಗ್ಗೆ ಮಾತನಾಡಲು, ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್‌ಗೆ ಬುಲಾವ್ ನೀಡಿದ್ದಾರೆ. ಈ ವೇಳೆ ಅಣ್ಣಾಮಲೈರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಬಗ್ಗೆ ಮಾತುಕತೆಗಳು ನಡೆಯುವ ಸಾಧ್ಯತೆಯಿದೆ. ಆರ್‌ಎಸ್‌ಎಸ್ ಮಧ್ಯಸ್ಥಿಕೆ ವಿಫಲ:
ಅಣ್ಣಾಮಲೈ ಪಕ್ಷ ತೊರೆಯುವ ನಿರ್ಧಾರದಿಂದ ಆರ್‌ಎಸ್‌ಎಸ್ ನಿರಾಶೆಗೊಂಡಿದೆ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಆರ್‌ಎಸ್‌ಎಸ್ ನಾಯಕರು ಮಧ್ಯಸ್ಥಿಕೆ ವಹಿಸಿದ್ದರು. ಆದರೂ ಅಣ್ಣಾಮಲೈ ನಿರ್ಧಾರ ಬದಲಿಸಲಿಲ್ಲ. ಆದಾಗ್ಯೂ ಅವರು ಹೊಸ ಚಳವಳಿಯನ್ನು ಆರಂಭಿಸಿದರೆ, ಆರ್‌ಎಸ್‌ಎಸ್ ತಾತ್ವಿಕ ಬೆಂಬಲ ನೀಡಲು ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ತೊರೆಯಲು ಕಾರಣ:ತಮಿಳುನಾಡಿನಲ್ಲಿ ಬಿಜೆಪಿಯು ಅಣ್ಣಾಡಿಎಂಕೆ ಜತೆ ಮೈತ್ರಿ ಮಾಡಿಕೊಳ್ಳುವುದು ಅಣ್ಣಾಮಲೈಗೆ ಇಷ್ಟವಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂಬುದು ಅವರ ಇಚ್ಛೆಯಾಗಿತ್ತು. ಆದರೆ ಬಿಜೆಪಿ ಮೈತ್ರಿ ಮಾಡಿಕೊಂಡಿತು. ಆಗಿನಿಂದಲೇ ಬಿರುಕು ಆರಂಭವಾಯಿತು. ನಂತರ ಅವರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು. ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ ಎಂದು ಅಣ್ಣಾಮಲೈ ಅಸಮಾಧಾನಗೊಂಡಿದ್ದರು. ಇತ್ತೀಚೆಗೆ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರವನ್ನು ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರದ ಕ್ರಮವನ್ನೂ ಅವರು ವಿರೋಧಿಸಿದ್ದರು.ಅಣ್ಣಾಮಲೈ ಮುಂದಿನ ನಡೆ?:ಅಣ್ಣಾಮಲೈ ಈಗಾಗಲೇ ‘ವಿ ದ ಲೀಡರ್ಸ್’ ಎಂಬ ಲಾಭರಹಿತ ಸಂಘಟನೆಯೊಂದನ್ನು ನಡೆಸುತ್ತಿದ್ದಾರೆ. ಹೊಸ ಪಕ್ಷವನ್ನು ಸ್ಥಾಪಿಸುವ ಮೊದಲ ಈ ಸಂಘಟನೆಯನ್ನು ಬಲಪಡಿಸಿ, ಬೃಹತ್ ಚಳವಳಿಯನ್ನು ಆರಂಭಿಸುವ ಸಾಧ್ಯತೆಯಿದೆ. ರಾಷ್ಟ್ರೀಯತೆ ಮತ್ತು ತಮಿಳು ತತ್ವಜ್ಞಾನವನ್ನು ಒಳಗೊಂಡ ಸಿದ್ಧಾಂತದ ಮೇಲೆ ಅವರ ಚಳವಳಿ ನಡೆಯಲಿದೆ.
ಇದಲ್ಲದೆ ಅಣ್ಣಾಮಲೈ ಹೊಸ ಪಕ್ಷದ ಹೆಸರು ‘ತಮಿಳಗ ಮಕ್ಕಳ್ ಶಕ್ತಿ ಕಚ್ಚಿ’ (ಟಿಎಂಎಸ್‌ಕೆ) ಎಂದಾಗಬಹುದು ಎಂಬ ಎಂಬ ವರದಿಗಳಿವೆ, ಆದರೆ ಆ ಮಾಹಿತಿಯು ಅಧಿಕೃತವೇ ಎಂಬುದು ಸ್ಪಷ್ಟವಾಗಿಲ್ಲ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.