ಕಟಕಟೆಯಲ್ಲಿ ಚುನಾವಣಾಧಿಕಾರಿ ನಿಲ್ಲಿಸಿ ಸುಪ್ರೀಂಕೋರ್ಟ್‌ ಛೀಮಾರಿ

KannadaprabhaNewsNetwork |  
Published : Feb 20, 2024, 01:46 AM ISTUpdated : Feb 20, 2024, 09:01 AM IST
ಸಿಸಿಟಿವಿಯಲ್ಲಿ ಅಕ್ರಮ ಬಯಲಿಗೆ  | Kannada Prabha

ಸಾರಾಂಶ

ಚಂಡೀಗಢ ಮೇಯರ್‌ ಚುನಾವಣೆ ವೇಳೆ ಮತ ಪತ್ರಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ಸೋಮವಾರ ಸರ್ವೋಚ್ಚ ನ್ಯಾಯಾಲಯ ಮುಂದೆ ವಿಚಾರಣೆಗೆ ಹಾಜರಾದರು. ಈ ವೇಳೆ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿತು.

ಪಿಟಿಐ ನವದೆಹಲಿ

ಚಂಡೀಗಢ ಮೇಯರ್‌ ಚುನಾವಣೆ ವೇಳೆ ಮತ ಪತ್ರಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಚುನಾವಣಾಧಿಕಾರಿ ಅನಿಲ್‌ ಮಸಿಹ್‌ ಸೋಮವಾರ ಸರ್ವೋಚ್ಚ ನ್ಯಾಯಾಲಯ ಮುಂದೆ ವಿಚಾರಣೆಗೆ ಹಾಜರಾದರು. 

ಈ ವೇಳೆ ಅವರಿಗೆ ನ್ಯಾಯಾಲಯ ಛೀಮಾರಿ ಹಾಕಿತು. ಚುನಾವಣಾಧಿಕಾರಿಯೊಬ್ಬರನ್ನು ಕಟಕಟೆಯಲ್ಲಿ ನಿಲ್ಲಿಸಿ ಸುಪ್ರೀಂಕೋರ್ಟ್‌ ಛೀಮಾರಿ ಹಾಕಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು. 

ಚಂಡೀಗಢ ಮೇಯರ್‌ ಚುನಾವಣೆಗೆ ಸಂಬಂಧಿಸಿದ ಎಲ್ಲ ಮತಪತ್ರಗಳು ಹಾಗೂ ಮತ ಎಣಿಕೆಯ ಸಂಪೂರ್ಣ ವಿಡಿಯೋ ಅನ್ನು ಮಂಗಳವಾರ ಹಾಜರುಪಡಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. 

ಇದಕ್ಕಾಗಿ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು, ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು ಪಂಜಾಬ್‌ ಹಾಗೂ ಹರ್ಯಾಣ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನ್ಯಾಯಾಲಯ ನಿರ್ದೇಶನ ನೀಡಿತು.

ಇದೇ ವೇಳೆ ಮತಪತ್ರ ತಿರುಚಿದ ಆರೋಪ ಎದುರಿಸುತ್ತಿರುವ ಅನಿಲ್‌ ಮಸಿಹ್‌ ಅವರನ್ನು ಪ್ರಶ್ನಿಸಿ ಕೋರ್ಟ್‌ ತರಾಟೆಗೆ ತೆಗದುಕೊಂಡಿತು. ಮತಪತ್ರ ತಿರುಚಿದ ಸಂಬಂಧ ಅನಿಲ್‌ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಗುಡುಗಿತು. 

ಈ ಮಧ್ಯೆ, ಮತಪತ್ರದ ಮೇಲೆ ಏಕೆ ‘ಎಕ್ಸ್‌’ ಎಂದು ಬರೆದಿರಿ ಎಂದು ನ್ಯಾಯಾಧೀಶರು ಕೇಳಿದರು. ಅದಕ್ಕೆ ಉತ್ತರಿಸಿದ ಮಸಿಹ್‌, 8 ಮತಪತ್ರಗಳು ಅದಾಗಲೇ ಕುಲಗೆಟ್ಟಿದ್ದವು. ಅವನ್ನು ಪ್ರತ್ಯೇಕವಾಗಿಡಲು ‘ಎಕ್ಸ್’ ಎಂದು ಬರೆದೆ. ಆಪ್‌ ಸದಸ್ಯರು ಗದ್ದಲ ಸೃಷ್ಟಿಸಿದ್ದರು. 

ಮತಪತ್ರಗಳನ್ನು ಕಸಿಯಲು ಯತ್ನಿಸಿದರು. ಹೀಗಾಗಿ ನಾನು ಸಿಸಿಟೀವಿಯತ್ತ ನೋಡಬೇಕಾಯಿತು ಎಂದು ಸಮರ್ಥನೆ ನೀಡಿದರು.ಅದಕ್ಕೆ ತಿರುಗೇಟು ನೀಡಿದ ನ್ಯಾಯಾಲಯ, ಮತಪತ್ರಗಳ ಮೇಲೆ ಸಹಿ ಮಾಡಲು ಮಾತ್ರವೇ ಅವಕಾಶವಿದೆ. 

ಬೇರೆ ಚಿಹ್ನೆಗಳನ್ನು ಬರೆಯಬಹುದು ಎಂದು ಯಾವ ನಿಯಮ ನಿಮಗೆ ಹೇಳುತ್ತದೆ ಎಂದು ಕಿಡಿಕಾರಿತು.ಏನಿದು ಪ್ರಕರಣ?:ಚಂಡೀಗಢ ಮೇಯರ್‌ ಸ್ಥಾನಕ್ಕೆ ಜ.30ರಂದು ಚುನಾವಣೆ ನಡೆದಿತ್ತು. 

ಆಪ್‌- ಕಾಂಗ್ರೆಸ್‌ಗೆ ಹೆಚ್ಚಿನ ಸದಸ್ಯರ ಬೆಂಬಲವಿದ್ದರೂ ಬಿಜೆಪಿ ಅಭ್ಯರ್ಥಿ ಜಯಿಸಿದ್ದರು. 8 ಮತಗಳು ಕುಲಗೆಟ್ಟಿವೆ ಎಂದು ಚುನಾವಣಾಧಿಕಾರಿ ಆದೇಶಿಸಿದ್ದರು. ಆದರೆ ಚುನಾವಣಾಧಿಕಾರಿ ಆಪ್‌ ಮತಪತ್ರಗಳ ಮೇಲೆ ‘ಎಕ್ಸ್‌’ ಎಂದು ಬರೆಯುತ್ತಿರುವುದು ಸಿಸಿಟೀವಿಯಲ್ಲಿ ದಾಖಲಾಗಿತ್ತು.

 ಚುನಾವಣಾಧಿಕಾರಿಯೇ ಮತಪತ್ರ ಕುಲಗೆಡಿಸಿದ್ದಾರೆ ಎಂದ ಆಪ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಫೆ.5ರಂದು ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಪ್ರಜಾಪ್ರಭುತ್ವದ ಅಣಕ, ಚುನಾವಣಾಧಿಕಾರಿಯ ಈ ಕೃತ್ಯ ಕೊಲೆಗೆ ಸಮ ಎಂದು ಟೀಕಿಸಿತ್ತಲ್ಲದೆ, ನ್ಯಾಯಾಲಯಕ್ಕೆ ಹಾಜರಾಗಲು ಚುನಾವಣಾಧಿಕಾರಿಗೆ ತಾಕೀತು ಮಾಡಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸರ್ಕಾರದ ವಿರುದ್ಧ ಭಾರಿ ಜನತಾ ದಂಗೆ
ಗಿಗ್‌ ಕಾರ್ಮಿಕರ ಸೇವಾ ಭದ್ರತೆಗೆ ಕೇಂದ್ರ ನಿಯಮ