ಆಪರೇಷನ್ ಲಂಗ್ಡಾ: ಯುಪಿಯಲ್ಲಿ ಒಂದೇ ದಿನ 8 ಕಡೆ 10 ಎನ್‌ಕೌಂಟರ್

KannadaprabhaNewsNetwork |  
Published : May 30, 2025, 12:37 AM ISTUpdated : May 30, 2025, 04:39 AM IST
KSRP

ಸಾರಾಂಶ

ಉತ್ತರ ಪ್ರದೇಶದ ಪೊಲೀಸರು ರಾಜ್ಯದಲ್ಲಿ ಅಪರಾಧ ಮಟ್ಟಹಾಕಲು ಆಪರೇಷನ್ ಲಾಂಗ್ಡಾ ಕಾರ್ಯಾಚರಣೆ ಮುಂದುವರೆಸಿದ್ದು ಬುಧವಾರ ಒಂದೇ ದಿನ ರಾಜ್ಯದ 8 ಕಡೆ 10 ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಅವರನ್ನು ಬಂಧಿಸಿದ್ದಾರೆ.

ಲಖನೌ: ಉತ್ತರ ಪ್ರದೇಶದ ಪೊಲೀಸರು ರಾಜ್ಯದಲ್ಲಿ ಅಪರಾಧ ಮಟ್ಟಹಾಕಲು ಆಪರೇಷನ್ ಲಂಗ್ಡಾ ಕಾರ್ಯಾಚರಣೆ ಮುಂದುವರೆಸಿದ್ದು ಬುಧವಾರ ಒಂದೇ ದಿನ ರಾಜ್ಯದ 8 ಕಡೆ 10 ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ ಅವರನ್ನು ಬಂಧಿಸಿದ್ದಾರೆ.

 ಲಖನೌ, ಗಾಜಿಯಾಬಾದ್, ಶಾಮ್ಲಿ, ಝಾನ್ಸಿ, ಬುಲಂದರ್‌ಶಹರ್‌, ಭಾಗ್‌ಪತ್, ಬಲ್ಲಿಯಾ, ಆಗ್ರಾ, ಜುಲಾನ್, ಉನ್ನಾವೋದಲ್ಲಿ ಅತ್ಯಾಚಾರ, ಕೊಲೆ, ದರೋಡೆ, ಕಳ್ಳತನ, ಹಸು ಕಳ್ಳಸಾಗಣೆ ಸೇರಿದಂತೆ ಹಲವು ಕ್ರಿಮಿನಲ್ ಆರೋಪ ಹೊತ್ತಿರುವವರ ಕಾಲಿಗೆ ಪೊಲೀಸರ ಗುಂಟೇಟು ಬಿದ್ದಿದೆ.

 ಆಪರೇಷನ್ ಲ್ಯಾಂಗ್ಡಾ ಎನ್ನುವುದು ಉತ್ತರ ಪ್ರದೇಶ ಪೊಲೀಸರು ಅಪರಾಧಿಗಳ ವಿರುದ್ಧ ನಡೆಸುತ್ತಿರುವ ಅಭಿಯಾನ. ಇದರಲ್ಲಿ ಆರೋಪಿಗಳು ತಪ್ಪಿಸಿಕೊಳ್ಳಲು, ಪೊಲೀಸರ ಮೇಲೆ ದಾಳಿಗೆ ಯತ್ನಿಸಿದರೆ ಅವರ ಕಾಲಿಗೆ ಗುಂಡು ಹಾರಿಸಿ, ದೈಹಿಕವಾಗಿ ಅಶಕ್ತರನ್ನಾಗಿ ಮಾಡಲಾಗುತ್ತದೆ.

ಪಹಲ್ಗಾಂ ಘಟನೆ: ಈ ಸಲ ಅಮರನಾಥ ಯಾತ್ರಿಕರ ರಕ್ಷಣೆಗೆ 42000 ಯೋಧರು

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 42,000 ಸಿಬ್ಬಂದಿಗಳನ್ನು ಒಳಗೊಂಡ 580 ತುಕಡಿ ನಿಯೋಜನೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. 424 ತುಕಡಿಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಕಳಿಸಲಾಗುತ್ತದೆ. 

ಆಪರೇಷನ್ ಸಿಂದೂರ್ ಸಮಯದಲ್ಲಿ ಕೇಂದ್ರಾಡಳಿತ ಪ್ರದೇಶಗಳಿಗೆ ಕಳಿಸಲ್ಪಟ್ಟ 80 ಸೇರಿದಂತೆ ಉಳಿದ ಕಂಪನಿಗಳನ್ನು ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶ್ರೀನಗರ ಸೇರಿದಂತೆ ಇತರ ಪ್ರದೇಶಗಳಿಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮರನಾಥ ಯಾತ್ರೆ ಜು.3ರಂದು ಪ್ರಾರಂಭವಾಗಿ ಆ.9ರಂದು ಕೊನೆಗೊಳ್ಳಲಿದೆ. ಏ.22ರಂದು ಪಹಲ್ಗಾಂ ಉಗ್ರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಬಳಿಕ ಪ್ರವಾಸಿಗರ ಹೆಚ್ಚಿನ ಸುರಕ್ಷತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್‌ ರೋಗಿ ಕೊಂದು ಬಿಡಿ ಎಂದ ವೈದ್ಯನ ವಿರುದ್ಧ ಕೇಸು ದಾಖಲು

ಮುಂಬೈ: 2021ರಲ್ಲಿ ಕೋವಿಡ್‌ ಭಾರೀ ತೀವ್ರವಾಗಿದ್ದ ವೇಳೆ ಮಹಿಳೆಯೊಬ್ಬರನ್ನು ಕೊಂದುಬಿಡಿ ಎಂದಿದ್ದ ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2021ರಲ್ಲಿ ಕೌಸರ್‌ ಫಾತೀಮಾ ಎಂಬ ಮಹಿಳೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.

 ಈ ವೇಳೆ ಲಾಥೂರ್‌ನ ಉದ್ಗೀರ್‌ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಸರ್ಜನ್ ಡಾ. ಶಶಿಕಾಂತ್ ದೇಶಪಾಂಡೆ, ಕೋವಿಡ್‌- 19 ಆರೈಕೆ ಕೇಂದ್ರದಲ್ಲಿ ನಿಯೋಜಿತರಾಗಿದ್ದ ಡಾ. ಶಶಿಕಾಂತ್‌ ಡಾಂ ಅವರಿಗೆ ‘ಯಾರನ್ನೂ ಒಳಗೆ ಹೋಗಲು ಬಿಡಬೇಡಿ. ಆ ಮಹಿಳೆಯನ್ನು ಕೊಂದು ಬಿಡಿ’ ಎಂದು ದೂರವಾಣಿ ಸಂಭಾಷಣೆಯಲ್ಲಿ ಹೇಳಿರುವುದು ಇದೀಗ ವೈರಲ್ ಆಗಿದೆ. ಈ ಸಂಬಂಧ ಮಹಿಳೆ ಕುಟುಂಬಸ್ಥರ ದೂರಿನ ಮೇರೆಗೆ ಡಾ. ದೇಶಪಾಂಡೆ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಮಿಸ್ಡ್ ಕಾಲ್ ಕೊಟ್ಟು ಯುಪಿಯ 53000 ಜನ ಸಂಸ್ಕೃತ ಕಲಿತರು!

ಲಖನೌ: ಉತ್ತರ ಪ್ರದೇಶದಲ್ಲಿ ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ವಿಶೇಷ ಮಿಸ್ಡ್ ಕಾಲ್ ಯೋಜನೆಯ ಭಾಗವಾಗಿ 53,000ಕ್ಕೂ ಹೆಚ್ಚು ಜನ ಸಂಸ್ಕೃತದಲ್ಲಿ ಮಾತನಾಡುವ ತರಬೇತಿ ಪಡೆದಿದ್ದಾರೆ, ಅವರಲ್ಲಿ ಅರ್ಧದಷ್ಟು ಮಹಿಳೆಯರು ಎಂದು ರಾಜ್ಯ ಸರ್ಕಾರ ತಿಳಿಸಿದೆ. 

‘2018ರ ಫೆ.7ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಪ್ರತಿ ಶಾಲೆಯ ವಿದ್ಯಾರ್ಥಿಗೆ ಮೂಲ ಸಂಸ್ಕೃತ ಕಲಿಕೆಯನ್ನು ಕಡ್ಡಾಯಗೊಳಿಸಿದ್ದರು. ಈ ಹಿನ್ನೆಲೆ ಆರಂಭಿಸಿದ ‘ಮಿಸ್ಡ್ ಕಾಲ್ ಯೋಜನೆ’ ಸಂಸ್ಕೃತವನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗಿಸಿತು. ಸರ್ಕಾರ ಗೊತ್ತುಪಡಿಸಿದ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟು, ಫಾರ್ಮ್ ತುಂಬಿ, ಇಲ್ಲಿಯವರೆಗೆ 1.21 ಲಕ್ಷಕ್ಕೂ ಹೆಚ್ಚು ಜನ ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. 53,000ಕ್ಕೂ ಹೆಚ್ಚು ಜನ ಸಂಸ್ಕೃತ ಸಂಭಾಷಣೆಯ ನೇರ ತರಬೇತಿ ಪಡೆದಿದ್ದಾರೆ. ಇವರಲ್ಲಿ ಶೇ.50 ಮಹಿಳೆಯರು’ ಎಂದು ಸರ್ಕಾರ ತಿಳಿಸಿದೆ.

ಎನ್‌ಡಿಎ ಪದವಿ ಪಡೆದ 17 ಮಹಿಳಾ ಕೆಡೆಟ್‌: ಇದೇ ಮೊದಲ ಸಲ

ಪುಣೆ: ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ)ಯಿಂದ 17 ಮಹಿಳಾ ಕೆಡೆಟ್‌ಗಳು ಪದವಿ ಪಡೆದು ಗಮನ ಸೆಳೆದಿದ್ದಾರೆ. ಒಮ್ಮೆಗೆ ಇಷ್ಟು ಮಹಿಳೆಯರು ಈ ಪ್ರಮಾಣದಲ್ಲಿ ಪರೀಕ್ಷೆ ಉತ್ತೀರ್ಣರಾಗಿದ್ದು ಇದೇ ಮೊದಲು. ಗುರುವಾರ ಎನ್‌ಡಿಎನ 148ನೇ ಘಟಿಕೋತ್ಸವದಲ್ಲಿ 300ಕ್ಕೂ ಹೆಚ್ಚು ಪುರುಷ ಕೆಡೆಟ್‌ಗಳೊಂದಿಗೆ 17 ಮಹಿಳಾ ಕೆಡೆಟ್‌ಗಳು ಪದವಿ ಪಡೆದಿದ್ದಾರೆ.

 ಈ ಮೂಲಕ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಕಾಯಂ ನೇರ ನೇಮಕಾತಿಗೆ ಅವಕಾಶ ಪಡೆದಿದ್ದಾರೆ. ಈ ಮೊದಲು ಎನ್‌ಡಿಎ ಸೇರ್ಪಡೆಗೆ ಪುರುಷರಿಗೆ ಮಾತ್ರ ಅವಕಾಶವಿತ್ತು. ಇದು ಲಿಂಗತಾರತಮ್ಯ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾದ ಬಳಿಕ, ಮಹಿಳೆಯರಿಗೂ ಅವಕಾಶ ಕೊಡುವಂತೆ ಸುಪ್ರೀಂ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಬಳಿಕ ಎನ್‌ಡಿಗೆ ಪ್ರವೇಶ ಪಡೆದ ಮೊದಲ ಬ್ಯಾಚ್‌ನ ಮಹಿಳಾ ಕೆಡೆಟ್‌ಗಳು ಈಗ ಪದವಿ ಪೂರೈಸಿದ್ದಾರೆ.

PREV
Read more Articles on

Recommended Stories

ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್
ಭಾರತಕ್ಕೆ ಸೇನೆಯೇ ಬೇಡ ಎಂದು ನೆಹರು ಹೇಳಿದ್ದರು : ಸಂಸದ ತೇಜಸ್ವಿ ಸೂರ್ಯ