ಬೈ-ಎಲೆಕ್ಷನ್‌: ಎನ್‌ಡಿಎಗೆ ಈಗ ರಾಜ್ಯಸಭೆಯಲ್ಲೂ ಬಹುಮತ!

KannadaprabhaNewsNetwork |  
Published : Aug 28, 2024, 01:34 AM IST
ಸಂಸತ್‌ | Kannada Prabha

ಸಾರಾಂಶ

ರಾಜ್ಯಸಭೆ ಉಪ-ಚುನಾವಣೆಯಲ್ಲಿ ಮಂಗಳವಾರ 12 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅದರಲ್ಲಿ ಬಿಜೆಪಿಯ 9 ಮಂದಿ, ಎನ್‌ಡಿಎ ಮಿತ್ರಪಕ್ಷದ ಇಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು ಇದ್ದಾರೆ.

ನವದೆಹಲಿ: ರಾಜ್ಯಸಭೆ ಉಪ-ಚುನಾವಣೆಯಲ್ಲಿ ಮಂಗಳವಾರ 12 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅದರಲ್ಲಿ ಬಿಜೆಪಿಯ 9 ಮಂದಿ, ಎನ್‌ಡಿಎ ಮಿತ್ರಪಕ್ಷದ ಇಬ್ಬರು ಮತ್ತು ಕಾಂಗ್ರೆಸ್‌ನಿಂದ ಒಬ್ಬರು ಇದ್ದಾರೆ. ಇದರೊಂದಿಗೆ ಮೇಲ್ಮನೆಯಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರಳ ಬಹುಮತ ಪ್ರಾಪ್ತವಾಗಿದೆ. ಹೀಗಾಗಿ ಮಹತ್ವದ ಮಸೂದೆಗಳನ್ನು ಅಡ್ಡಿ ಇಲ್ಲದೇ ಅಂಗೀಕರಿಸಿಕೊಳ್ಳುವುದು ಸುಲಭವಾಗಲಿದೆ.

ರಾಜ್ಯಸಭೆಯಲ್ಲಿ ಒಟ್ಟು 245 ಸಂಖ್ಯಾಬಲ ಇದೆ. ಆ ಪೈಕಿ ಸದ್ಯ ಜಮ್ಮು-ಕಾಶ್ಮೀರದ 4 ಮತ್ತು ನಾಮನಿರ್ದೇಶಿತ 4 ಸ್ಥಾನಗಳು ಖಾಲಿ ಇವೆ. ಹೀಗಾಗಿ ಪ್ರಸ್ತುತ ಸಂಖ್ಯಾಬಲ 237. ಬಹುಮತ ಬೇಕಿದ್ದರೆ 119 ಸ್ಥಾನ ಅಗತ್ಯ. ಇದೀಗ ಉಪಚುನಾವಣೆಯಲ್ಲಿ ಬಿಜೆಪಿ 9 ಸ್ಥಾನದಲ್ಲಿ ಅವಿರೋಧ ಆಯ್ಕೆ ಆಗಿದ್ದಾರೆ ಹಾಗೂ ಮೈತ್ರಿಕೂಟವಾದ ಎನ್‌ಸಿಪಿ (ಅಜಿತ್‌ ಬಣ) ಹಾಗೂ ರಾಷ್ಟ್ರೀಯ ಲೋಕ ಮಂಚ್‌ 2ರಲ್ಲಿ ಗೆದ್ದಿವೆ. ಇದರಿಂದ ಬಿಜೆಪಿ ಬಲ 96ಕ್ಕೆ ಹಾಗೂ ಎನ್‌ಡಿಎ ಬಲ 112ಕ್ಕೆ ಏರಿದೆ. ಇದೇ ವೇಳೆ 6 ನಾಮನಿರ್ದೇಶಿತ ಹಾಗೂ ಒಬ್ಬ ಸ್ವತಂತ್ರ ಅಭ್ಯರ್ಥಿಯ ಬೆಂಬಲ ಇರುವ ಕಾರಣ ಎನ್‌ಡಿಎ ಬಲ 119ಕ್ಕೆ ಏರಿದೆ. ಹೀಗಾಗಿ ಎನ್‌ಡಿಎ ಸರಳ ಬಹುಮತ ಮುಟ್ಟಿದಂತಾಗಿದೆ.

ಗೆದ್ದವರು ಇವರು:

ಮಂಗಳವಾರ ಬಿಜೆಪಿ ಅಭ್ಯರ್ಥಿಗಳಲ್ಲಿ ಅಸ್ಸಾಂನಿಂದ ರಂಜನ್ ದಾಸ್ ಮತ್ತು ರಾಮೇಶ್ವರ್ ತೇಲಿ, ಬಿಹಾರದಿಂದ ಮನನ್ ಕುಮಾರ್ ಮಿಶ್ರಾ, ಹರ್ಯಾಣದಿಂದ ಕಿರಣ್ ಚೌಧರಿ, ಮಧ್ಯಪ್ರದೇಶದಿಂದ ಜಾರ್ಜ್ ಕುರಿಯನ್, ಮಹಾರಾಷ್ಟ್ರದಿಂದ ಧೈರ್ಯಶೀಲ್ ಪಾಟೀಲ್, ಒಡಿಶಾದಿಂದ ಮಮತಾ ಮೊಹಾಂತ, ರಾಜಸ್ಥಾನದಿಂದ ರವನೀತ್ ಸಿಂಗ್ ಬಿಟ್ಟು ಮತ್ತು ತ್ರಿಪುರಾದಿಂದ ರಾಜೀವ್, ಭಟ್ಟಾಚಾರ್ಯ ಆಯ್ಕೆ ಆಗಿದ್ದಾರೆ.

ಎನ್‌ಡಿಎ ಅಂಗಪಕ್ಷಗಳಾದ ಎನ್‌ಸಿಪಿ (ಅಜಿತ್ ಪವಾರ್) ಬಣದ ನಿತಿನ್ ಪಾಟೀಲ್ ಮಹಾರಾಷ್ಟ್ರದಿಂದ ಮತ್ತು ಆರ್‌ಎಲ್‌ಎಂನ ಉಪೇಂದ್ರ ಕುಶ್ವಾಹಾ ಬಿಹಾರದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ.

ತೆಲಂಗಾಣದಿಂದ ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ 84 ಇದ್ದ ಇಂಡಿಯಾ ಕೂಟದ ಬಲ 85ಕ್ಕೆ ಏರಿದೆ.

ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ 12 ರಾಜ್ಯಸಭೆ ಸದಸ್ಯರು ಗೆದ್ದ ಕಾರಣ ಅವರು ರಾಜೀನಾಮೆ ನೀಡಿದ್ದರು. ಹೀಗಾಗಿ ಉಪಚುನಾವಣೆ ನಡೆದಿದ್ದವು.

PREV

Recommended Stories

ಕೇರಳದ ಈ ಗ್ರಾಮದ ಹೆಸರು ಪಾಕಿಸ್ತಾನ ಜಂಕ್ಷನ್‌: ವಿವಾದ
ತಮಿಳ್ನಾಡಲ್ಲಿ ಹಿಂದಿ ಸಿನೆಮಾ, ಹಾಡು, ಬೋರ್ಡ್‌ಗೆ ನಿಷೇಧ?