ಲೋಕಸಭೆ ಮೊದಲ ದಿನವೇ ಸಂಘರ್ಷ ಶುರು : ವಿಪಕ್ಷಗಳ ವಿರುದ್ಧ ಮೋದಿ ಚಾಟಿ

KannadaprabhaNewsNetwork |  
Published : Jun 25, 2024, 12:36 AM ISTUpdated : Jun 25, 2024, 04:59 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ ‘ಸಂಘರ್ಷದ ಚಾಲನೆ’ ಸಿಕ್ಕಿದೆ. ಸಂಸತ್ತಿನಲ್ಲಿ ವಿಪಕ್ಷಗಳ ನಡವಳಿಕೆ, ತುರ್ತುಪರಿಸ್ಥಿತಿ ವಿಷಯ ಮುಂದಿಟ್ಟುಕೊಂಡು ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ.

 ನವದೆಹಲಿ :  18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ಸೋಮವಾರ ಆರಂಭವಾಗಿದ್ದು, ಮೊದಲ ದಿನವೇ ‘ಸಂಘರ್ಷದ ಚಾಲನೆ’ ಸಿಕ್ಕಿದೆ. ಸಂಸತ್ತಿನಲ್ಲಿ ವಿಪಕ್ಷಗಳ ನಡವಳಿಕೆ, ತುರ್ತುಪರಿಸ್ಥಿತಿ ವಿಷಯ ಮುಂದಿಟ್ಟುಕೊಂಡು ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಚಾಟಿ ಬೀಸಿದ್ದಾರೆ. 

ಇದಕ್ಕೆ ಪ್ರತಿಯಾಗಿ ವಿಪಕ್ಷಗಳು ಕೂಡಾ ಸಂಸತ್‌ ಕಲಾಪಕ್ಕೆ ಪ್ರಧಾನಿ ಮೋದಿ ಗೈರು ವಿಷಯ ಪ್ರಸ್ತಾಪಿಸುವುದರ ಜೊತೆಗೆ, ಕಳೆದ 10 ವರ್ಷದಲ್ಲಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಟೀಕಿಸುವ ಮೂಲಕ ತಿರುಗೇಟು ನೀಡಿವೆ. ಅಲ್ಲದೆ ಮೋದಿ ಪ್ರಮಾಣ ವಚನ ಸ್ವೀಕರಿಸುವಾಗ ಅವರಿಗೆ ಸಂವಿಧಾನದ ಪ್ರತಿ ತೋರಿಸುವ ಮೂಲಕ ಬಿಜೆಪಿ ಸಂವಿಧಾನ ತಿರುಚಲು ಯತ್ನಿಸುತ್ತಿದೆ ಎಂಬ ತನ್ನ ಆರೋಪವನ್ನು ಮತ್ತೆ ಎಲ್ಲರ ಎದುರು ತೆರೆದಿಡುವ ಯತ್ನ ಮಾಡಿವೆ.

ಅಧಿವೇಶನದ ಮೊದಲ ದಿನವೇ ಎನ್‌ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟದ ಸದಸ್ಯರು ತೋರಿಸಿದ ಈ ವರ್ತನೆ, ಪ್ರಸಕ್ತ ಅಧಿವೇಶನದ ಉಳಿದ ಭಾಗ ಮತ್ತು ಮುಂದಿನ ದಿನಗಳಲ್ಲಿ ಸಂಸತ್ತು ಸಾಗಬಹುದಾದ ದಾರಿಯ ಸುಳಿವು ನೀಡಿದೆ.

ಸೋಮವಾರ ಕಲಾಪ ಆರಂಭಕ್ಕೂ ಮುನ್ನ ಸಂಸತ್ತಿನ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ, ‘ಸಂಸತ್ತಲ್ಲಿ ಸತ್ವ (ಚರ್ಚೆ) ಬೇಕು, ಗಲಾಟೆ ಅಲ್ಲ. ಈವರೆಗೂ ಪ್ರತಿಪಕ್ಷಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿವೆ. ಈಗಲಾದರೂ ಸುಧಾರಿಸಿಕೊಳ್ಳಲಿ’ ಎಂದರು. 

ಅಲ್ಲದೆ, ‘1975ರಲ್ಲಿ ಹೇರಲಾಗಿದ್ದ ತುರ್ತುಸ್ಥಿತಿಗೆ ಜೂ.25ರಂದು 50 ವರ್ಷ ಆಗಲಿದೆ. ತುರ್ತುಸ್ಥಿತಿಯು ದೇಶಕ್ಕೆ ಒಂದು ಕಪ್ಪುಚುಕ್ಕೆ. ಏಕೆಂದರೆ ಸಂವಿಧಾನವನ್ನೇ ಆಗ ಕಿತ್ತೆಸೆಯಲಾಗಿತ್ತು’ ಎಂದು ಅಂದಿನ ಇಂದಿರಾ ಗಾಂಧಿ ಸರ್ಕಾರವನ್ನು ಟೀಕಿಸಿದರು. ಇದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ರಾಜ್ಯಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕರು ತಿರುಗೇಟು ನೀಡಿ, ‘ಕಳೆದ 10 ವರ್ಷ ಅಘೋಷಿತ ತುರ್ತುಸ್ಥಿತಿ ಇತ್ತು’ ಎಂದು ಚಾಟಿ ಬೀಸಿದರು.

ಇದಿಷ್ಟು ಸಂಸತ್ತಿನ ಹೊರಗೆ ಆದರೆ ಸಂಸತ್ತಿನ ಒಳಗೂ ಕಾವೇರಿದ ವಾತಾವರಣ ಉಂಟಾಯಿತು. ಚುನಾವಣೆ ವೇಳೆ ಸಂವಿಧಾನ ತಿರುಚುವಿಕೆ ಬಗ್ಗೆ ವಾಕ್ಸಮರ ನಡೆದಿದ್ದನ್ನೇ ಕಾರಣವಾಗಿ ಇಟ್ಟುಕೊಂಡ ವಿಪಕ್ಷಗಳ ಸಂಸದರು ಪಾಕೆಟ್‌ ಗಾತ್ರದ ಚಿಕ್ಕ ಸಂವಿಧಾನ ಪುಸ್ತಕ ಹಿಡಿದೇ ಸಂಸತ್‌ ಸಭಾಂಗಣ ಪ್ರವೇಶಿಸಿದರು. ‘ನಾವು ಸಂವಿಧಾನ ರಕ್ಷಣೆ ಮಾಡುತ್ತೇವೆ’ ಎಂದು ಪ್ರತಿಜ್ಞೆಗೈದರು.ಬಳಿಕ ಮೋದಿ ಸಂಸತ್‌ ಸದಸ್ಯರಾಗಿ ‘ಶ್ರೀರಾಮ’ನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವಾಗ ರಾಹುಲ್‌ ಗಾಂಧಿಯೂ ಸೇರಿದಂತೆ ವಿಪಕ್ಷಗಳ ಬಹುತೇಕ ಸದಸ್ಯರು ಮೋದಿಯತ್ತ ಸಂವಿಧಾನದ ಪುಸ್ತಕವನ್ನು ಪ್ರದರ್ಶಿಸಿದರು. ಆಡಳಿತ ಪಕ್ಷಗಳ ಸದಸ್ಯರು ಜೈಶ್ರೀರಾಂ ಘೋಷಣೆಯನ್ನು ಕೂಗಿ ಗಮನ ಸೆಳೆದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ