;Resize=(412,232))
ನವದೆಹಲಿ: ಅಪ್ರಾಪ್ತೆಯೊಬ್ಬಳು ಗರ್ಭ ಧರಿಸುವಂತೆ ಬಲವಂತ ಮಾಡಲಾಗದು ಎಂದಿರುವ ಸುಪ್ರೀಂಕೋರ್ಟ್, ಅತ್ಯಾ*ರ ಪ್ರಕರಣಗಳಲ್ಲಿ ಗರ್ಭಪಾತಕ್ಕೆ 20 ವಾರಗಳ ಕಾಲಮಿತಿ ಹೇರಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಈ ಸಂಬಂಧ ಕಾನೂನಿಗೆ ಸೂಕ್ತ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಅತ್ಯಾ*ರಕ್ಕೊಗಾಗಿ ಇದೀಗ 31 ವಾರಗಳ ಗರ್ಭವತಿಯಾಗಿರುವ 15ರ ಬಾಲಕಿಗೆ ಗರ್ಭಪಾತಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಏಮ್ಸ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಸೂಚನೆ ನೀಡಿತು.
ಅತ್ಯಾ*ರ ಪ್ರಕರಣದಲ್ಲಿ ಸಂತ್ರಸ್ತೆಯರು ಗರ್ಭಿಣಿಯಾದಾಗ ಗರ್ಭಪಾತಕ್ಕಿರುವ ಕಾಲಮಿತಿ ತೆಗೆದುಹಾಕುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಬೇಕು. ಕಾನೂನು, ಸಮಯಕ್ಕೆ ತಕ್ಕಂತೆ ಬದಲಾಗಬೇಕು. ಜತೆಗೆ ಈ ರೀತಿಯ ಪ್ರಕರಣಗಳ ವಿಚಾರಣೆ ವಾರದೊಳಗೆ ಪೂರ್ಣಗೊಳ್ಳುವ ರೀತಿಯಲ್ಲಿ ಕಾನೂನು ರೂಪಿಸಬೇಕು. ವಿಚಾರಣೆ ವಿಳಂಬದಿಂದಾಗಿ ಅತ್ಯಾಚಾರಕ್ಕೊಳಗಾದ ಬಾಲಕಿಯರು ಯಾಕೆ ಮಾನಸಿಕ ಆಘಾತ ಅನುಭವಿಸಬೇಕು ಎಂದು ಕೋರ್ಟ್ ಪ್ರಶ್ನಿಸಿತು.
ಅಲ್ಲದೆ ಇಂಥ ಪ್ರಕರಣದಲ್ಲಿ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಸಂತ್ರಸ್ತೆ, ಜೀವನಪೂರ್ತಿ ಆತಂಕ ಮತ್ತು ಆಘಾತ ಅನುಭವಿಸಲು ಅವಕಾಶ ನೀಡಿದಂತಾಗುತ್ತದೆ. ಗರ್ಭಪಾತದ ನಿರ್ಧಾರ ಸಂಪೂರ್ಣವಾಗಿ ಸಂತ್ರಸ್ತ ಬಾಲಕಿ ಮತ್ತು ಆಕೆಯ ಪೋಷಕರದ್ದಾಗಿರಬೇಕು. ಸರ್ಕಾರವು ನಾಗರಿಕರಿಗೆ ಗೌರವ ನೀಡಬೇಕು. ಏಮ್ಸ್ ಕೇವಲ ಅವರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನೆರವು ನೀಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತು.
ಜೊತೆಗೆ, ಈ ರೀತಿಯ ಕ್ಯುರೇಟಿವ್ ಅರ್ಜಿ ಪೋಷಕರಿಂದ ಬರಬೇಕೇ ಹೊರತು ಸರ್ಕಾರದಿಂದಲ್ಲ. ಈ ರೀತಿಯ ಅರ್ಜಿಯ ಮೂಲಕ ರಾಜ್ಯ ಮತ್ತು ನಾಗರಿಕರ ನಡುವೆ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದು ತಿಳಿಸಿತು.
ಇದಕ್ಕೂ ಮೊದಲು ಏಮ್ಸ್ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಟ್ಟಿ ಅವರು, ಪ್ರಕರಣದಲ್ಲಿ ಗರ್ಭಪಾತ ಸಾಧ್ಯವಿಲ್ಲ ಎಂದು ನೋವಿನಿಂದ ಹೇಳುತ್ತಿದ್ದೇವೆ. ಇದು 30 ವಾರಗಳ ಭ್ರೂಣ. ಹಾಗಾಗಿ ಇದು ಬದುಕಬಲ್ಲ ಜೀವವಾಗಿದೆ ಎಂದು ತಿಳಿಸಿದರು. ಆಗ ಪೀಠವು, ಈ ಪ್ರಕರಣದಲ್ಲಿ ಬಾಲಕಿ ಮತ್ತು ಪೋಷಕರಿಗೆ ಎಲ್ಲವನ್ನೂ ವಿವರಿಸಿ. ಒಂದು ವೇಳೆ ಅವರು ತಮ್ಮ ನಿರ್ಧಾರ ಬದಲಾಯಿಸಿದರೆ ಆಗ ನೋಡೋಣ ಎಂದು ತಿಳಿಸಿತು.
- ಅತ್ಯಾಚಾರಕ್ಕೆ ಒಳಗಾಗಿ 31 ವಾರಗಳ ಗರ್ಭವತಿಯಾಗಿರುವ 15 ವರ್ಷದ ಬಾಲಕಿ
- ಗರ್ಭಪಾತ ಮಾಡಿಸಿಕೊಳ್ಳಲು ಸುಪ್ರೀಂಕೋರ್ಟ್‌ನಿಂದ ಬಾಲಕಿಗೆ ಅನುಮತಿ
- ಇದನ್ನು ಪ್ರಶ್ನಿಸಿ ಕೋರ್ಟ್ ಕದ ಬಡಿದಿದ್ದ ದೆಹಲಿಯ ಏಮ್ಸ್. ಸುಪ್ರೀಂ ವಿಚಾರಣೆ
- ಈ ರೀತಿಯ ಅರ್ಜಿ ಪೋಷಕರಿಂದ ಬರಬೇಕೇ ಹೊರತು ಸರ್ಕಾರದಿಂದಲ್ಲ: ತರಾಟೆ