ನವದೆಹಲಿ: ದೇಶದ ಅತ್ಯಂತ ಹಳೆಯ ಪಕ್ಷಗಳ ಪೈಕಿ ಒಂದಾದ ಕಾಂಗ್ರೆಸ್, ಬುಧವಾರ ನೂತನ ಕಟ್ಟಡಕ್ಕೆ ತನ್ನ ಕಚೇರಿಯನ್ನು ಬದಲಿಸುತ್ತಿದೆ. ಕಳೆದ 5 ದಶಕಗಳಿಂದ ಅಕ್ಬರ್ ರೋಡ್‌ನಲ್ಲಿದ್ದ ಪಕ್ಷದ ಹಳೆಯ ಕಚೇರಿ ತೊರೆದು ಕೋಟ್ಲಾ ರಸ್ತೆಯಲ್ಲಿನ ನೂತನ ಕಟ್ಟಡಕ್ಕೆ ತೆರಳುತ್ತಿದೆ.
ಬುಧವಾರ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ಸೋನಿಯಾ, ರಾಹುಲ್ ಸೇರಿದಂತೆ 400ಕ್ಕೂ ಹೆಚ್ಚು ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡದ ಉದ್ಘಾಟನೆ ನಡೆಯಲಿದೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಹಲವು ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
==24 ಅಕ್ಬರ್ ರೋಡ್ ಬಂಗಲೆ ಇತಿಹಾಸ:ಬರೋಬ್ಬರಿ 7 ಕಾಂಗ್ರೆಸ್ ಅಧ್ಯಕ್ಷರನ್ನು ಕಂಡಿರುವ ಅಕ್ಬರ್ ರೋಡ್‌ನಲ್ಲಿರುವ, 47 ವರ್ಷಗಳಿಂದ ಪಕ್ಷದ ಮುಖ್ಯ ಕಚೇರಿಯಾಗಿದ್ದ ಕಟ್ಟಡಕ್ಕೆ ದೊಡ್ಡ ಇತಿಹಾಸವಿದೆ. ಸರ್ ಎಡ್ವಿನ್ ಲ್ಯುಟಿಯೆನ್ಸ್ 1911ರಿಂದ 1925ರ ಅವಧಿಯಲ್ಲಿ ಕಟ್ಟಿಸಿದ ಈ ಕಟ್ಟಡವು ಬ್ರಿಟಿಷ್ ವಸಾಹತುಶಾಹಿ ವಾಸ್ತುಶಿಲ್ಪ ಹಾಗೂ ಆಧುನಿಕ ಶೈಲಿಯ ಮಿಶ್ರಣವಾಗಿದೆ.
ಸ್ವಾತಂತ್ರ್ಯಕ್ಕೂ ಮೊದಲು, ಜವಾಹರಲಾಲ್ ನೆಹರು ಅವರ ಅಲಹಾಬಾದ್‌ನ ಆನಂದ ಭವನ ನಿವಾಸವೇ ಪಕ್ಷದ ಪ್ರಧಾನ ಕಚೇರಿಯಾಗಿತ್ತು. 1969ರ ನವೆಂಬರ್‌ನಲ್ಲಿ ಕಾಂಗ್ರೆಸ್ ಪಕ್ಷ ಇಬ್ಭಾಗವಾದಾಗ ಇಂದಿರಾ ಗಾಂಧಿಯವರ ಗುಂಪು ಎಂ.ವಿ. ಕೃಷ್ಣಪ್ಪ ಎಂಬುವವರ ನಿವಾಸವನ್ನು ತನ್ನ ಕಚೇರಿಯಾಗಿಸಿಕೊಂಡಿತ್ತು. ಬಳಿಕ 1978ರಲ್ಲಿ ಅದನ್ನು 24 ಅಕ್ಬರ್ ರೋಡ್‌ಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಇಂದಿನವರೆಗೆ ಅದೇ ಕಾಂಗ್ರೆಸ್‌ನ ಪ್ರಧಾನ ಕಚೇರಿಯಾಗಿತ್ತು.