2024ರಲ್ಲಿ ಮೋದಿಗೆ ಸೋಲು: ಜುಕರ್‌ಬರ್ಗ್‌ ಹೇಳಿಕೆ ವಿವಾದ

KannadaprabhaNewsNetwork | Published : Jan 15, 2025 12:47 AM

ಸಾರಾಂಶ

ಕೋವಿಡ್‌ ಸಾಂಕ್ರಾಮಿಕ ನಿರ್ವಹಣೆಯಲ್ಲಿನ ವೈಫಲ್ಯವು, ಕೋವಿಡ್‌ ನಂತರದ ಅವಧಿಯಲ್ಲಿ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿನ ಆಡಳಿತಾರೂಢ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯಲು ಕಾರಣವಾಯ್ತು ಎಂಬ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ನಿರ್ವಹಣೆಯಲ್ಲಿನ ವೈಫಲ್ಯವು, ಕೋವಿಡ್‌ ನಂತರದ ಅವಧಿಯಲ್ಲಿ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶಗಳಲ್ಲಿನ ಆಡಳಿತಾರೂಢ ಸರ್ಕಾರಗಳನ್ನು ಅಧಿಕಾರದಿಂದ ಕಿತ್ತೊಗೆಯಲು ಕಾರಣವಾಯ್ತು ಎಂಬ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ.

ಈ ಹೇಳಿಕೆ ವಾಸ್ತವಕ್ಕೆ ವಿರುದ್ಧವಾದುದು ಎಂದು ಕೇಂದ್ರ ಸರ್ಕಾರದ ಹಲವು ಸಚಿವರು ಜುಕರ್‌ಬರ್ಗ್ ಕಿಡಿಕಾರಿದ್ದಾರೆ. ಮತ್ತೊಂದೆಡೆ ಹೇಳಿಕೆ ಸಂಬಂಧ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾಗೆ ನೋಟಿಸ್‌ ನೀಡಲು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿ ನಿರ್ಧರಿಸಿದೆ.

ಏನಿದು ವಿವಾದ?: ಇತ್ತೀಚೆಗೆ ಪೋಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ್ದ ಜುಕರ್‌ಬರ್ಗ್‌, ಕೋವಿಡ್‌ ನಿರ್ವಹಣೆ ವಿಷಯದಲ್ಲಿ ವಿಶ್ವದ ಬಹುತೇಕ ದೇಶಗಳು ತಮ್ಮ ನಾಗರಿಕರ ವಿಶ್ವಾಸ ಕಳೆದುಕೊಂಡವು. ಸಾಂಕ್ರಾಮಿಕ ಕುರಿತ ಸರ್ಕಾರದ ನೀತಿಗಳು ಮತ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಅಸಮರ್ಥವಾಗಿದ್ದು ಇದಕ್ಕೆ ಕಾರಣವಾಯ್ತು. ಇದರ ಪರಿಣಾಮ, ನಂತರದ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಭಾರತ ಸೇರಿದಂತೆ ಬಹುತೇಕ ದೇಶಗಳಲ್ಲಿ ಆಡಳಿತಾರೂಢ ಸರ್ಕಾರಗಳು ಅಧಿಕಾರ ಕಳೆದುಕೊಂಡವು ಎಂದು ಹೇಳಿದ್ದರು.

ಆದರೆ ಕೋವಿಡ್‌ ನಂತರದಲ್ಲಿ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜಪಿ ಗೆಲುವು ಸಾಧಿಸಿತ್ತು. ಹೀಗಾಗಿ ಜುಕರ್‌ಬರ್ಗ್‌ ಹೇಳಿಕೆ ಕುರಿತು ಹಲವು ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಹಿತಿ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸಂಸದೀಯ ಸಮಿತಿಯ ಮುಖ್ಯಸ್ಥ ನಿಶಿಕಾಂತ್‌ ದುಬೆ, ಪ್ರಜಾಪ್ರಭುತ್ವ ದೇಶವೊಂದರ ಕುರಿತ ತಪ್ಪು ಮಾಹಿತಿ ದೇಶದ ಘನತೆಗೆ ಧಕ್ಕೆ ತರುತ್ತದೆ. ಈ ಕುರಿತು ಮೆಟಾ ಕ್ಷಮೆ ಹೇಳಬೇಕು. ಭಾರತದ ಚುನಾವಣೆ ಕುರಿತಂತೆ ತಪ್ಪು ಮಾಹಿತಿ ಹರಡಿದ್ದಕ್ಕಾಗಿ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾಗೆ ನೋಟಿಸ್‌ ನೀಡುವುದಾಗಿ ಹೇಳಿದ್ದಾರೆ.

Share this article