ಪ್ರಯಾಗ್‌ರಾಜ್: ಉತ್ತರಪ್ರದೇಶದಲ್ಲಿ ಸೋಮವಾರದಿಂದ ಆರಂಭವಾಗಿರುವ ಕುಂಭಮೇಳ ಎರಡನೇ ದಿನವೇ ಮತ್ತಷ್ಟು ಕಳೆಗಟ್ಟಿದೆ. ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮುಳುಗು ಹಾಕಿ ಕುಂಭಮೇಳದ ಮೊದಲ ‘ಅಮೃತ ಸ್ನಾನ’ ಮಾಡಿದ್ದಾರೆ.
ಮೊದಲಿಗೆ ಶ್ರೀ ಪಂಚಯತಿ ಅಖಾಡ ಮಹಾನಿರ್ವಾಣಿ ಹಾಗೂ ಶ್ರೀ ಶಂಭು ಪಂಚಯತಿ ಅಟಲ್ ಅಖಾಡವರು ಅಮೃತ ಸ್ನಾನ ಮಾಡಿದರು. ಬಳಿಕ ಅನ್ಯ ಅಖಾಡದವರು, ಭಸ್ಮ ಲೇಪಿತ ನಾಗಾ ಸಾಧುಗಳು, ಸಂತರು, ಕಲ್ಪವಾಸಿಗಳು ಹಾಗೂ ಭಕ್ತಾದಿಗಳು ಸಂಗಮದಲ್ಲಿ ಸ್ನಾನ ಮಾಡಿದರು. ಈ ವೇಳೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಲಾಯಿತು.ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ‘ಮಕರ ಸಂಕ್ರಾಂತಿಯಂದು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪುಣ್ಯ ಪ್ರಾಪ್ತಿ ಮಾಡಿಕೊಂಡ ಭಕ್ತರಿಗೆ ಅಭಿನಂದನೆ. ಇದು ನಂಬಿಕೆ, ಸಮಾನತೆ, ಏಕತೆಯ ಸಂಗಮವಾಗಿದೆ’ ಎಂದರು. ಅಂತೆಯೇ, ಕುಂಭದ ಆಡಳಿತ, ಸ್ಥಳೀಯ ಆಡಳಿತ, ಸ್ವಚ್ಛತಾ ಕರ್ಮಿಗಳು, ಸ್ವಯಂಸೇವಕರು, ಧಾರ್ಮಿಕ ಸಂರ್ಸತೆಗಳು, ನಾವಿಕರು, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅವರು ಧನ್ಯವಾದ ಸಲ್ಲಿಸಿದರು. ಕುಂಭದ ಮೊದಲ ದಿನವಾದ ಸೋಮವಾರ 1.5 ಕೋಟಿ ಮಂದಿ ಪೌಶ್ ಸ್ನಾನ ಮಾಡಿದ್ದರು.
ಕುಂಭದಲ್ಲಿ ಸ್ಟೀವ್ ಪತ್ನಿ ಅಸ್ವಸ್ಥ:ಗಂಗಾ ಸ್ನಾನ ಬಳಿಕ ಚೇತರಿಕೆಪ್ರಯಾಗ್ರಾಜ್: ಮಹಾಕುಂಭಮೇಳಕ್ಕೆ ಆಗಮಿಸಿರುವ ಆ್ಯಪಲ್ ಸ್ಥಾಪಕ ಸ್ಟೀವ್ ಜಾಬ್ಸ್‌ರ ಪತ್ನಿ ಲಾರೆನ್ ಪೊವೆಲ್ ಸೋಮವಾರ ಜನಸಂದಣಿಯಿಂದಾಗಿ ಕೊಂಚ ಅಸ್ವಸ್ಥರಾಗಿದ್ದು, ಗಂಗಾ ಸ್ನಾನದ ಬಳಿಕ ಚೇತರಿಸಿಕೊಂಡಿದ್ದಾರೆ.ಇದೇ ಮೊದಲ ಬಾರಿಗೆ ಇಷ್ಟೊಂದು ಜನಸಂದಣಿಯಲ್ಲಿ ಬೆರೆತ ಕಾರಣ ಅವರಿಗೆ ಅಲರ್ಜಿ ಉಂಟಾಗಿತ್ತು ಎನ್ನಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಉತ್ತರಪ್ರದೇಶ ಸರ್ಕಾರ, ‘ಅಸ್ವಸ್ಥರಾಗಿದ್ದ ಲಾರೆನ್ ಗಂಗೆಯಲ್ಲಿ ಮಿಂದೆದ್ದು, ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಸನಾತನ ಧರ್ಮದ ಕುರಿತು ಆಳವಾಗಿ ಅಧ್ಯಯನ ಮಾಡುವ ಉತ್ಸಾಹ ಅವರಲ್ಲಿ ಬಲವಾಗಿದೆ’ ಎಂದು ಸ್ವಾಮಿ ಕೈಲಾಸಾನಂದರ ಹೇಳಿಕೆಯನ್ನು ಉಲ್ಲೇಖಿಸಿದೆ.
ಲಾರೆನ್‌ರನ್ನು ಸರಳ, ಪುಣ್ಯವಂತೆ ಹಾಗೂ ನಮ್ರ ಎಂದಿರುವ ಕೈಲಾಸಾನಂದರು, ‘ಅವರಲ್ಲಿ ಅಹಂ ಇಲ್ಲ. ಗುರುಗಳ ಪ್ರತಿ ಸಂಪೂರ್ಣ ಸಮರ್ಪಣಾ ಭಾವವನ್ನು ಹಿಂದಿದ್ದಾರೆ. ಆಕೆಯ ಎಲ್ಲಾ ಪ್ರಶ್ನೆಗಳು ಸನಾತನ ಧರ್ಮದ ಕುರಿತಾಗಿಯೇ ಇದ್ದು, ಅವುಗಳಿಗೆ ಉತ್ತರ ಕಂಡುಕೊಂಡು ಆಕೆ ತೃಪ್ತರಾಗಿದ್ದಾರೆ’ ಎಂದರು.ಅಖಿಲ ಭಾರತೀಯ ಅಖಾಡ ಪರಿಷತ್‌ನ ಅಧ್ಯಕ್ಷರೂ ಆಗಿರುವ ಪಂಚಯತಿ ಅಖಾಡದ ಮುಖ್ಯಸ್ಥರಾದ ಮಹಾಂತ ರವೀಂದ್ರ ಪುರಿ ಮಾತನಾಡಿ, ‘ಅವರು ಸನಾತನ ಸಂಸ್ಕೃತಿಯಿಂದ ಸ್ಫೂರ್ತಿ ಪಡೆದಿದ್ದಾರೆ. ಆಧ್ಯಾತ್ಮದ ಕುರಿತ ದಾಹ ಅವರನ್ನಿಲ್ಲಿಗೆ ಕರೆತಂದಿತು. ವಿಶ್ವದ ಶ್ರೀಮಂತರಲ್ಲೊಬ್ಬರಾದರೂ ಸರಳವಾಗಿದ್ದಾರೆ’ ಎಂದರು.ಲಾರೆನ್‌ರಿಗೆ ಕೈಲಾಸಾನಂದ ಸ್ವಾಮಿಗಳು ‘ಕಮಲಾ‘ ಎಂದು ಮರುನಾಮಕರಣ ಮಾಡಿದ್ದರು.