ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಪವಿತ್ರ ಶಬರಿಮಲೆಯಲ್ಲಿ ಮಂಗಳವಾರ ಭಕ್ತರ ಭಕ್ತಿಗೆ ಪಾರವೇ ಇರಲಿಲ್ಲ. ಇಲ್ಲಿನ ಪೊನ್ನಂಬಾಲಮೇಡು ಬೆಟ್ಟದಲ್ಲಿ ಪ್ರತಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುವ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಅಯ್ಯಪ್ಪನ ಭಕ್ತರು ಶಬರಿಮಲೆಯಲ್ಲಿ ನೆರೆದಿದ್ದರು. ಸಂಜೆ ವೇಳೆ ಬೆಟ್ಟದಲ್ಲಿ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪ ಭಕ್ತರು ಪುನೀತರಾದರು.

ಪತನಂತಿಟ್ಟ: ಪವಿತ್ರ ಶಬರಿಮಲೆಯಲ್ಲಿ ಮಂಗಳವಾರ ಭಕ್ತರ ಭಕ್ತಿಗೆ ಪಾರವೇ ಇರಲಿಲ್ಲ. ಇಲ್ಲಿನ ಪೊನ್ನಂಬಾಲಮೇಡು ಬೆಟ್ಟದಲ್ಲಿ ಪ್ರತಿ ಮಕರ ಸಂಕ್ರಾಂತಿಯಂದು ಕಾಣಿಸಿಕೊಳ್ಳುವ ಮಕರಜ್ಯೋತಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಅಯ್ಯಪ್ಪನ ಭಕ್ತರು ಶಬರಿಮಲೆಯಲ್ಲಿ ನೆರೆದಿದ್ದರು. ಸಂಜೆ ವೇಳೆ ಬೆಟ್ಟದಲ್ಲಿ ಮಕರ ಜ್ಯೋತಿ ಕಣ್ತುಂಬಿಕೊಂಡ ಅಯ್ಯಪ್ಪ ಭಕ್ತರು ಪುನೀತರಾದರು.

ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಾ ಮಣಿಕಂಠನ ನಾಮ ಜಪಿಸುತ್ತಾ ಮಾಲಾಧಾರಿಗಳು ಭಕ್ತಿ ಭಾವದಲ್ಲಿ ಮಿಂದೆದ್ದರು. ಶಬರಿಮಲೆ ದೇಗುಲದಲ್ಲಿ ದೀಪಾರಾಧನೆಯ ನಂತರ ಬೆಟ್ಟದಲ್ಲಿ ಮಕರಜ್ಯೋತಿ ಕಾಣಿಸಿಕೊಂಡಿತು. ಈ ಸಂದರ್ಭದಲ್ಲಿ ಅಯ್ಯಪ್ಪನ ವಿಗ್ರಹವನ್ನು ಪಂದಳಂ ಅರಮನೆಯಿಂದ ತಂದ ಪವಿತ್ರ ಆಭರಣಗಳಿಂದ ಅಲಂಕರಿಸಲಾಯಿತು. ಸುಮಾರು 1.5ಲಕ್ಷಕ್ಕೂ ಅಧಿಕ ಭಕ್ತರು ನೆರೆದಿದ್ದರು. ಭಕ್ತರು ಸನ್ನಿಧಾನ ಮತ್ತು ದೇವಾಲಯದ ಸುತ್ತಮುತ್ತಲಿನ 18 ಪವಿತ್ರ ಬೆಟ್ಟಗಳಾದ್ಯಂತ ಆಶ್ರಯ ಪಡೆದು ದಿವ್ಯ ಕ್ಷಣವನ್ನು ಕಣ್ತುಂಬಿಕೊಂಡರು.

==

ಶೀಘ್ರ ಬೆಂಗಳೂರಿನಲ್ಲಿ ಸ್ಪೇನ್ ಕಾನ್ಸುಲೇಟ್‌ ಕಚೇರಿ: ಜೈಶಂಕರ್‌

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶೀಘ್ರವೇ ಸ್ಪೇನ್‌ನ ಕಾನ್ಸುಲೇಟ್‌ (ದೂತಾವಾಸ) ಕಚೇರಿ ಆರಂಭವಾಗಲಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಘೋಷಿಸಿದ್ದಾರೆ. ಸ್ಪೇನ್ ಪ್ರವಾಸದಲ್ಲಿ ಜೈಶಂಕರ್ ಮ್ಯಾಡ್ರಿಡ್‌ನಲ್ಲಿ ನಡೆದ ಅನಿವಾಸಿ ಭಾರತೀಯರ ಜೊತೆಗಿನ ಕಾರ್ಯಕ್ರಮವೊಂದರಲ್ಲಿ ಈ ಮಾಹಿತಿ ನೀಡಿದ್ದಾರೆ.‘ಎರಡು ದೇಶಗಳ ನಡುವಿನ ಜನರ ಅನುಕೂಲಕ್ಕಾಗಿ ಬಾರ್ಸಿಲೋನಾದಲ್ಲಿ ಭಾರತದ ರಾಯಭಾರಿ ಕಚೇರಿ ಆರಂಭವಾಗಲಿದೆ. ಅದೇ ರೀತಿ ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿಯೂ ಸ್ಪೇನ್‌ನ ರಾಯಭಾರ ಕಚೇರಿ ಪ್ರಾರಂಭವಾಗಲಿದೆ. ಇದು ಎರಡು ದೇಶಗಳ ನಡುವಿರುವ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ವ್ಯಾಪಾರ. ಸಂಸ್ಕೃತಿ, ಪ್ರವಾಸೋದ್ಯಮ ದೃಷ್ಟಿಯಿಂದ ರಾಯಭಾರ ಕಚೇರಿಗಳು ಮಹತ್ವದ್ದಾಗಿರಲಿದೆ’ ಎಂದರು.

==

ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿದ ಅರ್ಧ ಕೆಜಿ ಚಿನ್ನ ಕಳವು: ನೌಕರ ಸೆರೆ

ತಿರುಪತಿ: ಭಕ್ತರಿಂದ ತಿರುಪತಿಯ ಬಾಲಾಜಿ ಸನ್ನಿಧಿಗೆ ಕಾಣಿಕೆ ರೂಪದಲ್ಲಿ ಬಂದಿದ್ದ ಸುಮಾರು ಅರ್ಧ ಕೇಜಿ ಚಿನ್ನವನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ತಿರುಮಲ ತಿರುಪತಿ ದೇವಸ್ಥಾನಮ್‌ ( ಟಿಟಿಡಿ)ಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬನನ್ನುಬಂಧಿಸಿದ್ದಾರೆ.ವಿ. ಪೆಂಚಲಯ್ಯ ಬಂಧಿತ ಆರೋಪಿ. ಈತ ಕಳೆದ ಒಂದು ವರ್ಷದಲ್ಲಿ 10 ರಿಂದ 15 ಸಲ ಚಿನ್ನದ ಬಿಸ್ಕೆಟ್‌ ಮತ್ತು ಇತರ ಆಭರಣಗಳು ಸೇರಿದಂತೆ 46 ಲಕ್ಷ ರು. ಮೌಲ್ಯದ 650 ಗ್ರಾಂ ಚಿನ್ನವನ್ನು ಕಳವು ಮಾಡಿದ ಆರೋಪ ಕೇಳಿ ಬಂದಿದೆ. ವೆಂಕಟೇಶ್ವರನ ಸನ್ನಿಧಿಗೆ ಭಕ್ತರು ನೀಡುವ ಕಾಣಿಕೆಯನ್ನು ಪರಕಾಮಣಿಯಲ್ಲಿ ವಿಂಗಡಿಸಲಾಗುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದ ಪೆಂಚಲಯ್ಯ ಚಿನ್ನವನ್ನು ಕಳ್ಳತನ ಮಾಡಿದ್ದಾನೆ. ಚಿನ್ನದ ಬಿಸ್ಕೆಟ್‌ ಕದಿಯಲು ಯತ್ನಿಸುತ್ತಿದ್ದಾಗ ಆತ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದು, ಜ.12ರಂದು ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

==

ಕಾಶ್ಮೀರದ ಪಾಕ್‌ ಗಡಿ ಬಳಿ ನೆಲಬಾಂಬ್ ಸ್ಫೋಟ: 6 ಯೋಧರಿಗೆ ಗಾಯ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನೆಲ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 6 ಸೇನಾ ಸಿಬ್ಬಂದಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಗಡಿ ನಿಯಂತ್ರಣ ರೇಖೆಯ ( ಎಲ್‌ಒಸಿ)ಬಳಿಯ ನೌಶೇರಾ ಖಂಬಾ ಕೋಟೆಯ ಬಳಿ ಮಂಗಳವಾರ ಬೆಳಿಗ್ಗೆ ಯೋಧರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಸೈನಿಕರು ಆಕಸ್ಮಿಕವಾಗಿ ನೆಲಬಾಂಬ್ ಮೇಲೆ ನಡೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಸ್ಪೋಟಗೊಂಡು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದ್ದು ಯೋಧರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

==

ವಿಶ್ವದ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಜಿಯೋ 5ಜಿ

ಲೇಹ್‌: ರಿಲಯನ್ಸ್ ಜಿಯೋ ತನ್ನ 5ಜಿ ಸೇವೆಯನ್ನು ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಪ್ರಾರಂಭಿಸಿದೆ. ಭಾರತೀಯ ಸೇನೆಯ ‘ಫೈರ್ ಅಂಡ್ ಫ್ಯೂರಿ ಕಾರ್ಪ್ಸ್’ ಎಕ್ಸ್‌ ಖಾತೆ ಮೂಲಕ ಈ ಮಾಹಿತಿಯನ್ನು ನೀಡಿದೆ. ಸಿಯಾಚಿನ್ ಹಿಮನದಿಯಲ್ಲಿ ಸೇವೆಯನ್ನು ಪ್ರಾರಂಭಿಸಿದ ದೇಶದ ಮೊದಲ ನೆಟ್‌ವರ್ಕ್‌ ಕಂಪನಿ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ. ಹಿಮಾಲಯದ ಕಾರಕೋರಂ ಶ್ರೇಣಿಯಲ್ಲಿ 16,000 ಅಡಿ ಎತ್ತರದಲ್ಲಿ ಈ 5ಜಿ ಸಂಪರ್ಕ ಸಾಧ್ಯವಾಗಿದೆ. ಜನವರಿ 15 ರಂದು ಸೇನಾ ದಿನಾಚರಣೆಯ ಮೊದಲು ಸಿಯಾಚಿನ್ ಗ್ಲೇಸಿಯರ್‌ನಲ್ಲಿ 4ಜಿ ಮತ್ತು 5ಜಿ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಜಿಯೋ ಅಭೂತಪೂರ್ವ ಮೈಲುಗಲ್ಲನ್ನು ಸಾಧಿಸಿದೆ.

==

77 ಯೋಧರ ಹತ್ಯೆ ಕೇಸಲ್ಲಿ ಭಾಗಿಯಾಗಿದ್ದ ನಕ್ಸಲ್‌ ಮಹೇಶ್‌ ಎನ್ಕೌಂಟರ್‌ಗೆ ಬಲಿ

ಸುಕ್ಮಾ: ಕಳೆದ ವಾರ ಭದ್ರತಾಪಡೆಗಳ ಜೊತೆ ನಡೆದ ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ ನಕ್ಸಲ್‌ ಮಹೇಶ್‌ ಕೋರ್ಸಾ, ರಾಜ್ಯದಲ್ಲಿ ಇತ್ತೀಚಿನ ವರ್ಷದಲ್ಲಿ ನಡೆದ 77 ಭದ್ರತಾ ಸಿಬ್ಬಂದಿಗಳ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ವಾರದ ನಡೆದ ಎನ್ಕೌಂಟರ್‌ನಲ್ಲಿ ಮೂವರು ನಕ್ಸಲರು ಬಲಿಯಾಗಿದ್ದರು. ಅದರಲ್ಲಿ ಮಹೇಶ್‌ ಕೂಡಾ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹೇಶ್ ಕೊರ್ಸಾ 2017ರಲ್ಲಿ 25, 2020ರಲ್ಲಿ 17, 2021ರಲ್ಲಿ 22 ಭದ್ರತಾ ಸಿಬ್ಬಂದಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಕೊರ್ಸಾ, ಸಿಪಿಐಎಂನ ನಿಷೇಧಿತ ಸಶಸ್ತ್ರ ವಿಭಾಗವಾದ ಪೀಪಲ್ಸ್‌ ಲಿಬರೇಶನ್ ಗೆರಿಲ್ಲಾ ಆರ್ಮಿಯಲ್ಲಿ ಉಪ ದಳದ ಕಮಾಂಡರ್‌ ಆಗಿದ್ದ.

==

ಮಂದಿರ ಉದ್ಘಾಟನೆ ದಿನ ಸ್ವಾತಂತ್ರ್ಯದ ದಿನವೆಂದ ಭಾಗವತ್‌ ಬಗ್ಗೆ ಸೇನೆ ಕಿಡಿ

ಮುಂಬೈ: ‘ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ದಿನವೇ ಭಾರತದ ನೈಜ ಸ್ವಾತಂತ್ರ್ಯ’ ಎಂದಿದ್ದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಶಿವಸೇನೆ(ಯುಬಿಟಿ) ನಾಯಕ ಸಂಜಯ್‌ ರಾವುತ್‌ ತಿರುಗೇಟು ನೀಡಿದ್ದು, ‘ಭಾಗವತ್‌ ಸಂವಿಧಾನದ ರಚನೆಕಾರರಲ್ಲ’ ಎಂದಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಸಂವಿಧಾನ ಸಿದ್ಧಪಡಿಸಿಲ್ಲ. ಆರ್‌ಎಸ್‌ಎಸ್‌ ಮುಖ್ಯಸ್ಥರು ಗೌರವಾನ್ವಿತ ವ್ಯಕ್ತಿ. ಆದರೆ ಅವರು ಸಂವಿಧಾನದ ರಚನೆಕಾರರಲ್ಲ. ರಾಮ ಮಂದಿರರ ಉದ್ಘಾಟನೆಯು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಪ್ರತಿಯೊಬ್ಬರು ಕೊಡುಗೆ ನೀಡಿದ್ದಾರೆ. ಆದರೆ ಅದರಿಂದ ಮಾತ್ರ ದೇಶ ಸ್ವತಂತ್ರವಾಯಿತು ಎಂದು ಹೇಳಿಕೊಳ್ಳುವುದು ಸರಿಯಲ್ಲ’ ಎಂದಿದ್ದಾರೆ.

==

ಕೇರಳ: ದಲಿತ ಬಾಲಕಿಗೆ ಲೈಂಗಿಕ ದೌರ್ಜನ್ಯ ಕೇಸ್‌: 64 ಪೈಕಿ 44 ಜನರ ಸೆರೆ

ಪಟ್ಟಣಂತಿಟ್ಟ: ಜಿಲ್ಲೆಯಲ್ಲಿ ದಲಿತ ಅಥ್ಲೀಟ್‌ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕೇರಳ ಪೊಲೀಸರ ವಿಶೇಷ ತನಿಖಾ ದಳ (ಎಸ್‌ಐಟಿ) ಇದುವರೆಗೆ 44 ಮಂದಿಯನ್ನು ಬಂಧಿಸಿದೆ. ಆರೋಪಕ್ಕೆ ಸಂಬಂಧಿಸಿ 30 ಪ್ರಕರಣ ದಾಖಲಿಸಿದ್ದು, ಇದರಲ್ಲಿ ಹೆಸರಿಸಿದ 59ರಲ್ಲಿ 44 ಮಂದಿಯನ್ನು ಬಂಧಿಸಲಾಗಿದ್ದು ಇಬ್ಬರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಇನ್ನೂ 13 ಮಂದಿಯನ್ನು ಬಂಧಿಸಬೇಕಿದೆ. ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿ ಎಸ್‌.ಅಜೀತಾ ಬೇಗಂ ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಗೆ ಕಳೆದ 5 ವರ್ಷಗಳ ಅವಧಿಯಲ್ಲಿ 64 ಜನರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಇತ್ತೀಚೆಗೆ ಪ್ರಕರಣ ದಾಖಲಿಸಲಾಗಿತ್ತು.

Share this article