ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ನೂತನ ಮುಖ್ಯಸ್ಥರಾಗಿ ವಿ. ನಾರಾಯಣನ್ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಯ ತನಕ ಇಸ್ರೋದ ಮುಖ್ಯಸ್ಥರಾಗಿದ್ದ ವಿ. ಸೋಮನಾಥನ್ ಮಂಗಳವಾರ ನಿವೃತ್ತಿಯಾಗಿದ್ದಾರೆ. 1984ರಲ್ಲಿ ಇಸ್ರೋ ಸೇರ್ಪಡೆಯಾಗಿದ್ದ ನಾರಾಯಣನ್ ನಂತರದ ವರ್ಷಗಳಲ್ಲಿ ಇಸ್ರೋದ ಪ್ರಮುಖ ಯೋಜನೆಗಳಾದ ರಾಕೆಟ್ ಅಭಿವೃದ್ಧಿ, ಕ್ರಯೋಜನಿಕ್ ಎಂಜಿನ್‌ಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗಗನಯಾನ, ಶುಕ್ರನ ಅಧ್ಯಯನ,ಚಂದ್ರಯಾನ-4, ಭಾರತೀಯ ಅಂತರಿಕ್ಷ ನಿಲ್ದಾಣದಂತಹ ಇಸ್ರೋದ ಯೋಜನೆಗಳು ನಾರಾಯಣನ್ ಅವರ ಮುಂದಿನ ಪ್ರಮುಖ ಗುರಿಗಳಾಗಿರಲಿದೆ.
ಆತಿಶಿ ಬಳಿಕ ಮಾಜಿ ಸಚಿವ ಜೈನ್‌ರಿಂದ ಚುನಾವಣಾ ದೇಣಿಗೆ ಸಂಗ್ರಹ ಆರಂಭ
ನವದೆಹಲಿ: ದೆಹಲಿ ಸಿಎಂ ಆತಿಶಿ ಬಳಿಕ ಮಾಜಿ ಸಚಿವ ಸತ್ಯೇಂದ್ರ ಜೈನ್ ಕೂಡಾ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಜನರಿಗೆ ದೇಣಿಗೆ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಈ ಕುರಿತು ಮಂಗಳವಾರ ಮಾತನಾಡಿದ ಅವರು, ‘ನಾನು ಜೈಲಿನಲ್ಲಿದ್ದಾಗ ಚುನಾವಣೆಗೂ ಮುನ್ನ ಹೊರಗೆ ಬರುತ್ತೇನೋ, ಇಲ್ಲವೋ ಎಂದು ಯೋಚಿಸಿದ್ದೆ. ಜೈಲಿನಲ್ಲಿದ್ದ ಪಕ್ಷದ ಎಲ್ಲ ನಾಯಕರು ಹೊರಗೆ ಬಂದರು. ಜನ ಸಿಟ್ಟು ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೆ ಆದರೆ ಜನರ ಬಳಿ ಹೋದಾಗ ಬಿಜೆಪಿ ಬಗ್ಗೆ ಅವರಿಗಿರುವ ಸಿಟ್ಟು ಕಂಡಿತು. ಯಾವ ರಾಜಕಾರಣಿಗಳು ಹೆಚ್ಚು ಕೆಲಸ ಮಾಡುತ್ತಾರೆ ಅವರ ನಡುವೆ ಪೈಪೋಟಿಯಿರಲಿ ಎಂದು ಜನ ಹೇಳಿದ್ದರು. ಅದಕ್ಕಾಗಿ ಕಣಕ್ಕೆ ಇಳಿದಿದ್ದೇನೆ. ದೇಣಿಗೆ ನೀಡಿ ಎಂದು ಮನವಿ ಮಾಡಿದರು.
ವರನಿಲ್ಲದ ದಿಬ್ಬಣದಂತಿದೆ ದಿಲ್ಲಿ ಬಿಜೆಪಿ: ಸಿಎಂ ಅಭ್ಯರ್ಥಿ ಘೋಷಿಸದ್ದಕ್ಕೆ ಆಪ್ ಟಾಂಗ್
ನವದೆಹಲಿ: ದೆಹಲಿಯಲ್ಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಪಕ್ಷದ ಸಿಎಂ ಅಭ್ಯರ್ಥಿ ಘೋಷಣೆ ಮಾಡದಿರುವುದಕ್ಕೆ ‘ವರನಿಲ್ಲದ ದಿಬ್ಬಣದಂತೆ ದಿಲ್ಲಿ ಬಿಜೆಪಿ ಇದೆ’ ಎಂದು ಆಪ್ ಗೇಲಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಪ್ ಸಂಸದ ಸಂಜಯ್ ಸಿಂಗ್ ‘ ರಮೇಶ್ ಬಿಧೂರಿಯನ್ನು ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯಾಗಿ ಪರಿಗಣಿಸಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಬಿಜೆಪಿ ನಾಯಕರಲ್ಲೇ ಒಳಜಗಳದ ಬಳಿಕ ಸ್ವತಃ ಬಿಧೂರಿ ನಾನು ಸಿಎಂ ಅಭ್ಯರ್ಥಿ ಅಲ್ಲ ಎಂದು ಹೇಳಿಕೊಳ್ಳುವ ಒತ್ತಡಕ್ಕೆ ಸಿಲುಕಿದ್ದಾರೆ. ಅವರಲ್ಲದಿದ್ದರೆ ಸಿಎಂ ಅಭ್ಯರ್ಥಿ ಯಾರು? ವರ ಇಲ್ಲದೇ ಬಿಜೆಪಿ ದಿಬ್ಬಣ ತೆಗೆದುಕೊಳ್ಳುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಉದ್ಧವ್ ಸೇನೆಯ ಬಳಿಕ ಶರದ್ ಪವಾರ್‌ರಿಂದಲೂ ಏಕಾಂಗಿ ಸ್ಪರ್ಧೆ ಸುಳಿವು
==