ನವದೆಹಲಿ : ‘ಆ್ಯಪಲ್ ಐಫೋನ್ ತಯಾರಿಸುವ ಫಾಕ್ಸ್‌ಕಾನ್ ಕಂಪನಿಯ ಚೆನ್ನೈ ಘಟಕದಲ್ಲಿ ವಿವಾಹಿತ ಮಹಿಳೆಯರಿಗೆ ಅವಕಾಶ ಇಲ್ಲ’ ಎಂಬ ಇತ್ತೀಚಿನ ಮಾಧ್ಯಮ ವರದಿಗಳನ್ನು ಫಾಕ್ಸ್‌ಕಾನ್ ತಳ್ಳಿಹಾಕಿದೆ.
ಈ ಸಂಬಂಧ ಅದು ಕೇಂದ್ರ ಸರ್ಕಾರಕ್ಕೆ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.‘ಫಾಕ್ಸ್‌ಕಾನ್‌ನ ಒಟ್ಟು 45 ಸಾವಿರ ನೌಕರರಲ್ಲಿ ಶೇ.30 ಪುರುಷರು ಹಾಗೂ ಶೇ.70 ಜನರು ಮಹಿಳೆಯರಿದ್ದಾರೆ.
ಮಹಿಳೆಯರಲ್ಲಿ ಶೇ.25 ಮಂದಿ ವಿವಾಹಿತೆಯರಿದ್ದಾರೆ. ಅವಿವಾಹಿತರಿಗೆ ಮಾತ್ರ ಇಲ್ಲಿ ನೌಕರಿ ನೀಡಲಾಗುತ್ತದೆ. ಲಿಂಗ ತಾರತಮ್ಯ ಮಾಡಲಾಗುತ್ತಿದೆ ಎಂಬ ವರದಿಗಳು ಕಂಪನಿಗೆ ಕೆಟ್ಟ ಹೆಸರು ತರಲು ಮಾಡಿದ ಸಂಚು’ ಎಂದು ಅದು ಸ್ಪಷ್ಟಪಡಿಸಿದೆ ಎಂದು ಅವು ತಿಳಿಸಿವೆ.‘ವಿವಾಹಿತೆಯರಿಗೆ ಅವಕಾಶವಿಲ್ಲ ಎಂದು ಮಾಧ್ಯಮಗಳ ಮುಂದೆ ಆರೋಪಿಸಿರುವ ಮಹಿಳೆಯರು ಬಹುಶಃ ಕೆಲಸ ಸಿಗದೇ ನಿರಾಶರಾಗಿ ಈ ರೀತಿ ಆರೋಪ ಮಾಡಿರಬಹುದು ಅಥವಾ ಅವರು ನೌಕರಿ ಕಾಯಂ ಮಾಡಿಕೊಳ್ಳುವಲ್ಲಿ ವಿಫಲ ಆಗಿರಬಹುದು.
ಹೀಗಾಗಿ ಈ ಆರೋಪ ಮಾಡಿದ್ದಾರೆ’ ಎಂದು ಕಂಪನಿ ಸ್ಪಷ್ಟಪಡಿಸಿದೆ.ಇನ್ನು ಕಂಪನಿಗೆ ಆಗಮಿಸುವ ವಿವಾಹಿತೆಯರಿಗೆ ಮಂಗಳಸೂತ್ರ, ಓಲೆ, ಕಾಲುಂಗುರ ಬಿಚ್ಚಿಸಿಡಲಾಗುತ್ತದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಂಪನಿ, ‘ಸುರಕ್ಷತಾ ದೃಷ್ಟಿಯಿಂದ ಕಂಪನಿಯಲ್ಲಿ ಯಾವುದೇ ಲೋಹದ ವಸ್ತುಗಳನ್ನು ಧರಿಸುವಂತಿಲ್ಲ. ಹಿಂದೂ ಧರ್ಮೀಯರಷ್ಟೇ ಅಲ್ಲ, ಯಾವ ಧರ್ಮದ ನೌಕರರು ಬಂದರೂ ಅವರು ಲೋಹದ ವಸ್ತುಗಳನ್ನು ಕೆಲಸದ ವೇಳೆ ಬಿಚ್ಚಿಡಬೇಕು ಎಂಬ ನಿಯಮವಿದೆ’ ಎಂದು ಫಾಕ್ಸ್‌ಕಾನ್ ಹೇಳಿಕೆ ನೀಡಿದೆ ಎಂದು ಮೂಲಗಳು ಹೇಳಿವೆ.
ಫಾಕ್ಸ್‌ಕಾನ್‌ನಲ್ಲಿ ವಿವಾಹಿತೆಯರಿಗೆ ನೌಕರಿ ನೀಡುಕೂಡದು ಎಂಬ ಅಘೋಷಿತ ನಿಯಮವಿದೆ ಎಂದು ಇತ್ತೀಚೆಗೆ ಕೆಲವು ಮಹಿಳೆಯರನ್ನು ಉಲ್ಲೇಖಿಸಿ ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಫಾಕ್ಸ್‌ಕಾನ್‌ನಿಂದ ಸ್ಪಷ್ಟನೆ ಕೇಳಿತ್ತು.