ನವದೆಹಲಿ: ವಿವಾಹೇತರ ಪ್ರೇಮ, ದೈಹಿಕ ಸಂಬಂಧಗಳೂ, ವೈವಾಹಿಕ ಜೀವನ ಹಾಳು ಮಾಡುತ್ತಿರುವ ಹೊತ್ತಿನಲ್ಲೇ, ವಿವಾಹೇತರ ಸಂಬಂಧ ಬೆಸೆಯಲು ಇರುವ ಗ್ಲೀಡನ್ ಎಂಬ ಆ್ಯಪ್‌ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ಶೇ.20ರಷ್ಟು ಬಳಕೆದಾರರೊಂದಿಗೆ ನಂ.1 ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ.
ಗ್ಲೀಡನ್ ಬಿಡುಗಡೆ ಮಾಡಿರುವ ವರದಿ ಅನ್ವಯ, 2024ರಲ್ಲಿ ಶೇ.270ರಷ್ಟು ಜನ ಹೊಸದಾಗಿ ಆ್ಯಪ್‌ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಶೇ.128 ಹೊಸ ಮಹಿಳೆಯರು. ಒಟ್ಟು ಬಳಕೆದಾರರ ಪೈಕಿ ಶೇ.40ರಷ್ಟು ವಿವಾಹಿತ ಸ್ತ್ರೀಯರೇ ಇದ್ದಾರೆ. ಅವರಲ್ಲಿ ಬಹುತೇಕರು 30ರಿಂದ 45 ವಯಸ್ಸಿನವರಾಗಿದ್ದು, ಶೇ.40ರಷ್ಟು ಮಂದಿ ಅನುದಿನ ಸರಾಸರಿ 45 ನಿಮಿಷವನ್ನು ಈ ಆ್ಯಪ್‌ನಲ್ಲಿ ಕಳೆಯುತ್ತಾರೆ ಎಂದು ವರದಿ ಹೆಳಿದೆ.
ಈ ಬೆಳವಣಿಗೆಯನ್ನು ಗ್ಲೀಡನ್‌ನ ಭಾರತದ ವ್ಯವಸ್ಥಾಪಕ ಸಿಬಿಲ್ ಶಿಡ್ಡೆಲ್, ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಎಂದು ಬಣ್ಣಿಸಿದ್ದು, ‘ಗ್ಲೀಡನ್‌ಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಇದು ಸಂಬಂಧಗಳ ಕುರಿತು ಬದಲಾಗುತ್ತಿರುವ ದೃಷ್ಟಿಕೋನದ ಸಂಕೇತವಾಗಿದೆ. ಮಹಿಳಾ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವರ ಸುರಕ್ಷತೆ, ವಿವೇಚನೆ ಹಾಗೂ ಆಯ್ಕೆ ಸ್ವಾತಂತ್ರ್ಯದ ಕಡೆ ಹೆಚ್ಚು ಗಮನಹರಿಸಬೇಕು’ ಎಂದರು.
ಮೆಟ್ರೋ ನಗರಗಳಾದ ಬೆಂಗಳೂರಿನಲ್ಲಿ ಶೇ.20, ಮುಂಬೈನಲ್ಲಿ ಶೇ.19, ಕೋಲ್ಕತಾದಲ್ಲಿ ಶೇ.18, ದೆಹಲಿಯಲ್ಲಿ ಶೇ.15ರಷ್ಟು ಗ್ಲೀಡನ್ ಬಳಕೆದಾರರಿದ್ದಾರೆ. ಉಳಿದಂತೆ ಭೋಪಾಲ್, ವಡೋದರಾ, ಕೊಚ್ಚಿ ನಗರಗಳಲ್ಲೂ ಗ್ಲೀಡನ್ ಬಳಕೆದಾರರು ಅಧಿಕವಿದ್ದಾರೆ. ಅತ್ತ ಗ್ಲೀಡನ್ ಮುಂದಿನ ದಿನಗಳಲ್ಲಿ ಇನ್ನೂ ಅಧಿಕ ನಗರಗಳಿಗೆ ವಿಸ್ತರಿಸಿ, 5 ದಶಲಕ್ಷ ಬಳಕೆದಾರರನ್ನು ಹೊಂದುವ ಗುರಿ ಇಟ್ಟುಕೊಂಡಿದೆ.