ಜನಗಣತಿಯಲ್ಲಿ ಕೇಳ್ತಾರೆ 40 ಪ್ರಶ್ನೆ: ಮೊದಲ ಸಲ ಜಾತಿಗಣತಿ

Published : Aug 15, 2026, 01:49 PM IST
census

ಸಾರಾಂಶ

ಹಿಮಬೀಳುವ ಪ್ರದೇಶಗಳಲ್ಲಿ ಇದೇ ವರ್ಷ ಸೆ.1ರಿಂದ ಹಾಗೂ ದೇಶದ ಉಳಿದೆಡೆ ಮುಂದಿನ ವರ್ಷ ನಡೆಯಲಿರುವ 2027ರ ಜನಗಣತಿ ವೇಳೆ ಕೇಳಲಾಗುವ 40 ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿ ಅಧಿಸೂಚನೆ ಪ್ರಕಟಿಸಿದೆ.

 ನವದೆಹಲಿ : ಹಿಮಬೀಳುವ ಪ್ರದೇಶಗಳಲ್ಲಿ ಇದೇ ವರ್ಷ ಸೆ.1ರಿಂದ ಹಾಗೂ ದೇಶದ ಉಳಿದೆಡೆ ಮುಂದಿನ ವರ್ಷ ನಡೆಯಲಿರುವ 2027ರ ಜನಗಣತಿ ವೇಳೆ ಕೇಳಲಾಗುವ 40 ಪ್ರಶ್ನೆಗಳನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿ ಅಧಿಸೂಚನೆ ಪ್ರಕಟಿಸಿದೆ. ಜಾತಿಗಣತಿಗೆ ಆಗ್ರಹ ಕೇಳಿಬಂದಿರುವ ಕಾರಣ ಇದೇ ಮೊದಲ ಬಾರಿ ಜಾತಿ ಕುರಿತೂ ಪ್ರಶ್ನೆ ಕೇಳಲಾಗುತ್ತದೆ. ಜತೆಗೆ ಕೋವಿಡ್‌ ಲಸಿಕೆ ತೆಗೆದುಕೊಂಡ ಸ್ಥಳ, ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌ ವಿವರಗಳೂ ಸೇರಿ 40 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಈ ಪ್ರಶ್ನೆಗಳಲ್ಲಿ ನೀವು ಪರಿಶಿಷ್ಟ ಜಾತಿಗೆ ಸೇರಿದವರೇ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರೇ ಅಥವಾ ಬೇರೆ ಜಾತಿಗೆ ಸೇರಿದವರೇ ಎಂಬ ಪ್ರಶ್ನೆಯೂ ಇರಲಿದೆ. ಆದರೆ ಪ್ರಶ್ನಾವಳಿಯಲ್ಲಿ ಜಾತಿಗಳ ಪಟ್ಟಿ ಇರುವ ಸಾಧ್ಯತೆ ಕಡಿಮೆ ಇದೆ. ಇದರ ಬದಲು ನಾಗರಿಕರು ನೀಡಿದ ಜಾತಿ ವಿವರ ಮಾತ್ರ ದಾಖಲು ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಸರ್ಕಾರದ ರಿಜಿಸ್ಟ್ರಾರ್‌ ಜನರಲ್‌ ಮೃತ್ಯುಂಜಯ ಕುಮಾರ್‌ ನಾರಾಯಣ್‌ ಅವರು ಅಧಿಸೂಚನೆ ಹೊರಡಿಸಿದ್ದು, ಅದರಂತೆ ಲಡಾಖ್‌ ಹಾಗೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡದ ಹಿಮಚ್ಛಾದಿತ ಪ್ರದೇಶದಲ್ಲಿ ಸೆ.1ರಿಂದ 30ರ ವರೆಗೆ ಜನಗಣತಿ ನಡೆಯಲಿದೆ ಎಂದು ತಿಳಿಸಲಾಗಿದೆ. ಇದಕ್ಕೂ ಮೊದಲು ಅಂದರೆ ಈ ಪ್ರದೇಶಗಳಲ್ಲಿ ಜಾತಿಗಣತಿ ಆರಂಭಿಸುವ ಹಾಗೂ ಮನೆ ಮನೆ ಗಣತಿ ಆರಂಭಕ್ಕೂ ಮೊದಲು ಸ್ವಯಂ ಗಣತಿಗೆ ಆ.17ರಿಂದ ಆ.31ರ ವರೆಗೆ ಆಯ್ಕೆ ನೀಡಲಾಗುತ್ತದೆ.

ಮೊದಲ ಬಾರಿಗೆ ಜಾತಿ ಮಾಹಿತಿ ಸಂಗ್ರಹ:

ಕಳೆದ ವರ್ಷ ಏ.30ರಂದು ನಡೆದಿದ್ದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಅದರಂತೆ ಜನಗಣತಿ ವೇಳೆ ಜಾತಿಗಣತಿಯನ್ನೂ ನಡೆಸಲಾಗುತ್ತಿದೆ. ಇದೀಗ ಸಿದ್ಧಪಡಿಸಲಾಗಿರುವ ಪ್ರಶ್ನಾವಳಿಗಳಲ್ಲಿ ಜಾತಿಗಳ ಪಟ್ಟಿ ಇರುವುದು ಅನುಮಾನ ಎಂದು ಹೇಳಲಾಗಿದ್ದು, ಸಾರ್ವಜನಿಕರು ಹೇಳುವ ಜಾತಿಯನ್ನೇ ದಾಖಲು ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ವೈಯಕ್ತಿಕ ಮಾಹಿತಿಯೂ ಸಂಗ್ರಹ:

ಗಣತಿ ವೇಳೆ ವೈಯಕ್ತಿಕ ಮಾಹಿತಿಗಳಾದ ಮದುವೆ, ಮದುವೆಯಾದಾಗಿನ ವಯಸ್ಸು, ಪತಿ, ಪತ್ನಿ ಹೆಸರು, ರಾಷ್ಟ್ರೀಯತೆ, ಧರ್ಮ, ಎಸ್ಸಿ, ಎಸ್ಟಿಗೆ ಸಮುದಾಯಕ್ಕೆ ಸೇರಿದವೇ? ಜಾತಿ, ಪೋಷಕರ ಮಾಹಿತಿ, ಅಂಗವೈಕಲ್ಯ, ಮಾತೃಭಾಷೆ ಮತ್ತು ತಿಳಿದಿರುವ ಭಾಷೆಗಳು, ಸಾಕ್ಷರತೆ, ಡಿಜಿಟಲ್‌ ಸಾಕ್ಷರತೆಯ ಸ್ಥಿತಿಗಳ ಕುರಿತೂ ಮಾಹಿತಿ ಸಂಗ್ರಹಿಸಲಾಗುವುದು.

ಇಷ್ಟೇ ಅಲ್ಲದೆ, ಓದಿದ/ಓದುತ್ತಿರುವ ಶಿಕ್ಷಣ ಸಂಸ್ಥೆ ಯಾವುದು? ಗರಿಷ್ಠ ಶೈಕ್ಷಣಿಕ ಅರ್ಹತೆ, ಉದ್ಯೋಗದಲ್ಲಿದ್ದರೆ ಆ ಕುರಿತ ವಿವರ, ಸ್ವಂತ ಉದ್ಯಮ, ವ್ಯಾಪಾರ ಹೊಂದಿದ್ದರೆ ಆ ಕುರಿತ ವಿವರ, ಮುಖ್ಯ ಕೆಲಸಗಾರರೇ?, ಆರ್ಥಿಕೇತರ ಚಟುವಟಿಕೆಯಲ್ಲಿ ತೊಡಿಸಿಕೊಂಡಿದ್ದಾರೆಯೇ? ನಿರುದ್ಯೋಗಿಯೇ, ಪಾರ್ಟ್‌ ಟೈಂ ಕೆಲಸ ಮಾಡುತ್ತಿದ್ದಾರೆಯೇ ಎಂಬಿತ್ಯಾದಿ ಮಾಹಿತಿಗಳನ್ನೂ ಸಂಗ್ರಹಿಸಲಾಗುವುದು. ಇದರ ಜತೆಗೆ ಬೇರೆಡೆ ಕೆಲಸ ಮಾಡಲು ಸಿದ್ಧರಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಕೇಳಲಾಗುವುದು.

ಹುಟ್ಟಿದ ಸ್ಥಳ, ಹಿಂದಿನ ವಾಸಸ್ಥಳ, ವಲಸೆಗೆ ಕಾರಣ, ಹಾಲಿ ಇರುವ ಸ್ಥಳದಲ್ಲಿ ನೆಲೆನಿಂತ ಅವಧಿ, ಶಾಶ್ವತ ನಿವಾಸ ವಿಳಾಸ ಸೇರಿದಂತೆ ಇತರೆ ಮಾಹಿತಿಯನ್ನೂ ಸಂಗ್ರಹಿಸಲಾಗುವುದು.

ಮದುವೆಯಾದ, ವಿಧವೆಯರು, ವಿಚ್ಛೇದಿತರು ಹಾಗೂ ಗಂಡನಿಂದ ಪ್ರತ್ಯೇಕವಾದ ಮಹಿಳೆಯರಿಗೆ ಎಷ್ಟು ಮಂದಿ ಮಕ್ಕಳಿದ್ದಾರೆ, ಹಾಲಿ ಮದುವೆಯಿಂದ ಎಷ್ಟು ಮಕ್ಕಳಿದ್ದಾರೆ ಮತ್ತಿತರ ಮಾಹಿತಿ ಕೇಳಲಾಗುತ್ತದೆ.

ಕೋವಿಡ್‌ ಲಸಿಕೆಯ ಮಾಹಿತಿಯೂ ಸಂಗ್ರಹ

ವೈಯಕ್ತಿಕ, ಜಾತಿ ಮಾಹಿತಿಗಳ ಜತೆಗೆ ಕೋವಿಡ್‌-19 ವ್ಯಾಕ್ಸಿನ್‌ ಪಡೆದ ಸ್ಥಳ, ಹೊಂದಿರುವ ಬ್ಯಾಂಕ್‌ ಖಾತೆಗಳ ಸಂಖ್ಯೆ, ಮೊಬೈಲ್‌ ಸಂಖ್ಯೆ, ವೋಟರ್‌ ಐಟಿ, ಆಧಾರ್‌ ನಂಬರ್‌, ಪಾಸ್‌ಪೋರ್ಟ್‌ ಸಂಖ್ಯೆ ಮತ್ತು ಡ್ರೈವಿಂಗ್‌ ಲೈಸೆನ್ಸ್‌ ಹೊಂದಿದ್ದಾರೆಯೇ ಇಲ್ಲವೇ ಎಂಬ ಮಾಹಿತಿಗಳನ್ನೂ ಕೇಳಲಾಗುತ್ತದೆ.

ಗಣತಿ ಪ್ರಕ್ರಿಯೆ:

ಹಿಮಬೀಳುವ ಪ್ರದೇಶಗಳಲ್ಲಿ (ಮೊದಲ ಹಂತದಲ್ಲಿ) ಸೆ.30ರ ವರೆಗೆ ಮನೆ ಗಣತಿ (ಎಚ್‌ಎಲ್‌ಒ) ನಡೆಯಲಿದೆ. ಇದಕ್ಕಾಗಿ ಹಲವು ರಾಜ್ಯಗಳಲ್ಲಿ ಫೀಲ್ಡ್‌ ವಿಸಿಟ್‌ ಏ.16ರಿಂದಲೇ ಆರಂಭವಾಗಿದೆ. ಮನೆ, ಕಟ್ಟಡಗಳ ಪಟ್ಟಿ ಮಾಡಿದ ಬಳಿಕ ಜನಗಣತಿ ನಡೆಸಲಾಗುತ್ತದೆ.

ಮನೆ ಗಣತಿ ವೇಳೆ ಗಣತಿ ಸಿಬ್ಬಂದಿ ಮನೆಯ ವಿವರಗಳಿಗೆ ಸಂಬಂಧಿಸಿದ ಮಾಹಿತಿ ಹಾಗೂ ಮಾಲೀಕತ್ವದ ವಿವರಗಳನ್ನು ಸಂಗ್ರಹಿಸಲಿದ್ದಾರೆ.

ಈ ಜನಗಣತಿಯೂ 2021ರಲ್ಲೇ ನಡೆಯಬೇಕಿತ್ತಾದರೂ ಕೋವಿಡ್‌ ಹಿನ್ನೆಲೆಯಲ್ಲಿ ಐದು ವರ್ಷ ವಿಳಂಬವಾಗಿ ನಡೆಯುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್‌ ಆಗಿ ನಡೆಯುತ್ತಿರುವ ಈ ಗಣತಿಗೆ ಕೇಂದ್ರ ಸರ್ಕಾರ 11,718 ಕೋಟಿ ರು.ಗೆ ಅನುಮೋದನೆ ನೀಡಿದೆ.

ಜಾತಿ ಪಟ್ಟಿ ಏಕಿಲ್ಲ?: ಕಾಂಗ್ರೆಸ್ ಕಿಡಿ

ಆದರೆ, ‘ಜಾತಿಗಳ ಪಟ್ಟಿಯನ್ನು ಪ್ರಕಟಿಸದಿರುವುದು ಜಾತಿಗಣತಿ ಕುರಿತ ಕೇಂದ್ರದ ಉದ್ದೇಶದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಲ್ಪಸಂಖ್ಯಾತರ ಮಕ್ಕಳು ರಫೇಲನ್ನೇ ಬಿಚ್ಚಿ ಜೋಡಿಸಬಲ್ಲರು, ಆದರೆಓದಿದ್ದು ಮರೀತಾರೆ: ರೇವಂತ್
ಕೆಂಪುಕೋಟೆಯಲ್ಲಿಂದು ಮೋದಿ 13ನೇ ಸಲ ಧ್ವಜಾರೋಹರಣ