;Resize=(412,232))
ಬೆಂಗಳೂರು : ರಾಜ್ಯ ಸೈಬರ್ ಕಮಾಂಡ್ ಘಟಕ (ಸಿಸಿಯು) ಇಂಡಿಯನ್ ಸೈಬರ್ ಕ್ರೈಂ ಕೋ ಆರ್ಡಿನೇಷನ್ ಸೆಂಟರ್ (ಐ4ಸಿ) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ದೇಶಾದ್ಯಂತ 8,750 ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಹಾಗೂ ಬೆಟ್ಟಿಂಗ್ ಯುಆರ್‌ಎಲ್ ಜಾಲ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಇತ್ತೀಚೆಗೆ ಐಪಿಎಲ್ ಪಂದ್ಯಾವಳಿ ವೇಳೆ ಭಾರೀ ಕ್ರಿಕೆಟ್ ಬೆಟ್ಟಿಂಗ್ ವಹಿವಾಟು ನಡೆದಿತ್ತು. ಇದರ ಬೆನ್ನಲ್ಲೇ ರಾಜ್ಯ ಸೈಬರ್ ಕಮಾಂಡ್ ಘಟಕ ಈ ಕಾರ್ಯಾಚರಣೆ ನಡೆಸಿದೆ. ಗುಪ್ತಚರ ಮಾಹಿತಿ ಆಧರಿಸಿ ವಿಶೇಷ ಸೈಬರ್ ತಂಡಗಳು ತನಿಖೆ ನಡೆಸಿ, ಕ್ರಿಕೆಟ್ ಬೆಟ್ಟಿಂಗ್ ವೇದಿಕೆಗಳನ್ನು ನಿರ್ವಹಿಸುತ್ತಿದ್ದ ಸಂಘಟಿತ ಗುಂಪುಗಳನ್ನು ಪತ್ತೆ ಹಚ್ಚಿದೆ. ಈ ವೇದಿಕೆಗಳು ಮಿರರ್ ಡೊಮೇನ್, ಸಬ್ ಡೊಮೇನ್‌ಗಳ ಮತ್ತು ನಕಲಿ ಯುಆರ್‌ಎಲ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ಸಿ, 66ಡಿ ಹಾಗೂ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 318 (4) ಮತ್ತು 319 (2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಂತಿ, ಡಿಐಜಿಪಿ ಎಚ್.ಡಿ.ಆನಂದ್ ಕುಮಾರ್ ನೇತೃತ್ವದಲ್ಲಿ ಮತ್ತು ಸೈಬರ್ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಈ ಅಕ್ರಮ ಬೆಟ್ಟಿಂಗ್ ಜಾಲಗಳ ಪರಿಣಾಮ ಸಾವಿರಾರು ನಾಗರಿಕರು ಆರ್ಥಿಕ ಸಂಕಷ್ಟ, ಮಾನಸಿಕ ಕಿರುಕುಳ, ಸಾಲದ ಒತ್ತಡದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ದಾಳಿಯಿಂದಾಗಿ ಹಲವರಿಗೆ ಆರ್ಥಿಕ ನಷ್ಟ ಉಂಟಾಗುವುದನ್ನು ತಡೆಯಲಾಗಿದೆ. ಬೆಟ್ಟಿಂಗ್‌ಗೆ ತೊಡಗಿಸುತ್ತಿದ್ದ ಹಣದ ಮೂಲ, ಬೆಟ್ಟಿಂಗ್ ನಿರ್ವಾಹಕರ ಪತ್ತೆ ಮಾಡುವುದು ಸೇರಿ ಸುಧಾರಿತ ತಾಂತ್ರಿಕ ತನಿಖೆಗಳು ಪ್ರಗತಿಯಲ್ಲಿವೆ ಎಂದು ಸೈಬರ್ ಕಮಾಂಡ್ ಸೆಂಟರ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.