ನವದೆಹಲಿ: ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿ, ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹರಿಹಾಯುತ್ತಿರುವ ನಡುವೆ ಅಚ್ಚರಿಯೆಂಬಂತೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.
ಜೂ. 21ರಂದು ನಡೆಯಲಿರುವ ಮರುಪರೀಕ್ಷೆಯ ಸಿದ್ಧತೆ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಸಿಂಗ್, ‘ನಾವು ಪ್ರಧಾನಿ ಹಾಗೂ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟಿದ್ದೇವೆ. ನೀಟ್ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯವಾಗದು ಎಂಬುದು ನಮ್ಮ ವಿಶ್ವಾಸ’ ಎಂದರು.
ಸಭೆಗೂ ಮುನ್ನ ನಡೆದ ಅನೌಪಚಾರಿಕ ಚರ್ಚೆಯ ವೇಳೆ ಈ ವಿವಾದವನ್ನು ರಾಜಕೀಯಗೊಳಿಸಲಾಗುತ್ತಿದೆ ಎಂಬ ಆಡಳಿತ ಪಕ್ಷದವರ ಕಳವಳಕ್ಕೆ ಪ್ರತಿಕ್ರಿಯಿಸಿದ ಸಿಂಗ್, ‘ಇದು ರಾಜಕೀಯ ವಿಷಯವಲ್ಲ. ಬದಲಿಗೆ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಪರಿಣಾಮ ಬೀರಿರುವ ಘಟನೆ. ಸಮಿತಿಯ ಉದ್ದೇಶವು ಪರೀಕ್ಷೆ ಬಗೆಗಿನ ಕಳವಳಗಳನ್ನು ಇತ್ಯರ್ಥಗೊಳಿಸಿ ನ್ಯಾಯಯುತವಾಗಿ ಪರೀಕ್ಷೆ ನಡೆಸುವುದಾಗಿದೆ’ ಎಂದರು. ಜತೆಗೆ ಇದಕ್ಕಾಗಿ ಅವರು ಶಿಕ್ಷಣ ಸಚಿವಾಲಯ ಮತ್ತು ಅಧಿಕಾರಿಗಳಿಗೆ ಶುಭ ಕೋರಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೇಳಿದ್ದ ಕಾಂಗ್ರೆಸ್ ಪಕ್ಷದ ಹಿರಿಯರೊಬ್ಬರ ಈ ನಡೆ ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.