ತಿರುಚಿರಾಪಳ್ಳಿ: ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹಲವು ಬಾರಿ ಸೂಟ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ತಮಿಳುನಾಡು ಸಿಎಂ ವಿಜಯ್, ಅದರ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ನಾನು ಎಲ್ಲವನ್ನೂ ಕಪ್ಪು ಬಿಳುಪಾಗಿ (ಅಕ್ರಮ ಹಾಗೂ ಸಕ್ರಮ) ನೋಡುವುದರ ಸಂಕೇತವಿದು ಎಂದಿದ್ದಾರೆ.ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ಸಾರ್ವಜನಿಕರ ಎದುರು ತಮ್ಮ ಕ್ಷೇತ್ರವಾದ ತಿರುಚಿರಾಪಳ್ಳಿಯಲ್ಲಿ ಮಾತನಾಡಿದ ಅವರು, ‘ನನ್ನ ಸೂಟ್ ಬಣ್ಣ ಯಾವಾಗಲೂ ಕಪ್ಪು ಮತ್ತು ಬಿಳಿ ಆಗಿರುತ್ತದೆ.
ಕಾರಣ ನಾನು ಎಲ್ಲವನ್ನು ಈ ಎರಡು ಬಣ್ಣಗಳಲ್ಲಷ್ಟೇ ನೋಡುತ್ತೇನೆ. ಅದರ ನಡುವಿನ ಯಾವ ಬಣ್ಣವನ್ನೂ ಧರಿಸುವುದಿಲ್ಲ ಹಾಗೂ ನೋಡುವುದಿಲ್ಲ’ ಎಂದಿದ್ದಾರೆ.
ಇದೇ ವೇಳೆ ಚೊಚ್ಚಲ ಚುನಾವಣೆಯಲ್ಲಿ ತಮ್ಮ ಕೈಹಿಡಿದು ಅಧಿಕಾರಕ್ಕೇರಿಸಿದ ಮತದಾರರಿಗೆ ಧನ್ಯವಾದವನ್ನು ಅರ್ಪಿಸಿದ ವಿಜಯ್, ‘ಇಷ್ಟು ವರ್ಷ ನಿಮಗೆ ಮೋಸ ಮಾಡಿದ ಇಬ್ಬರನ್ನು (ಡಿಎಂಕೆ ಮತ್ತು ಅಣ್ಣಾಡಿಎಂಕೆ) ನಿರ್ಲಕ್ಷಿಸಿ ನನ್ನನ್ನು ಬೆಂಬಲಿಸಿದ್ದಕ್ಕೆ ಶಿರಬಾಗಿ ವಂದಿಸುತ್ತೇನೆ’ ಎಂದರು. ಜತೆಗೆ, ‘ನನ್ನ ಆಡಳಿತವನ್ನು ನೀವೆಲ್ಲಾ ಮೆಚ್ಚುತ್ತೀರಿ ಹಾಗೂ ಮುಂದೆಯೂ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿದೆ’ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.