ಭಕ್ತರ ಪಾಲಿಗೆ ಕುಂಭಮೇಳ ಭಾರಿ ದುಬಾರಿ! ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ವೆಚ್ಚ

KannadaprabhaNewsNetwork | Updated : Feb 24 2025, 05:23 AM IST

ಸಾರಾಂಶ

  ಈ ಬಾರಿಯ ಕುಂಭಮೇಳವು ಇದೇ ಬುಧವಾರ ಕೊನೆಗೊಳ್ಳಲಿದ್ದು, ಈಗಾಗಲೇ ಕೋಟ್ಯಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.

ಪ್ರಯಾಗ್‌ರಾಜ್‌: ಈ ಬಾರಿಯ ಕುಂಭಮೇಳವು ಇದೇ ಬುಧವಾರ ಕೊನೆಗೊಳ್ಳಲಿದ್ದು, ಈಗಾಗಲೇ ಕೋಟ್ಯಂತರ ಭಕ್ತರು ದೇಶ ವಿದೇಶಗಳಿಂದ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಆದರೆ ಅವರಿಗೆಲ್ಲ ಈ ಬಾರಿಯ ಕುಂಭ ಆರ್ಥಿಕವಾಗಿ ಅತಿ ದುಬಾರಿಯಾಗಿದೆ. ವಿಮಾನ ಪ್ರಯಾಣ ದರ ಹಾಗೂ ವಸತಿ ಶುಲ್ಕ ಶೇ.50ರಿಂದ 300ರಷ್ಟು ದುಬಾರಿ ಆಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಲೋಕಲ್‌ ಸರ್ಕಲ್‌ ಸಂಸ್ಥೆ ದೇಶದ 303 ಜಿಲ್ಲೆಗಳಿಂದ ಕುಂಭಮೇಳಕ್ಕೆ ಭೇಟಿ ನೀಡಿದ 49 ಸಾವಿರ ಭಕ್ತರಿಂದ ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿದೆ

ವಿಮಾನ ಪ್ರಯಾಣಕ್ಕೆ 300% ಅಧಿಕ ವೆಚ್ಚ:

ಕುಂಭಮೇಳದ ಪ್ರಯುಕ್ತ, ವಿವಿಧ ಕಡೆಗಳಿಂದ ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್‌ ದರವನ್ನು ಮನಸೋಇಚ್ಛೆ ಏರಿಸಲಾಗಿತ್ತು ಎಂಬ ಆರೋಪವಿದೆ. ಇದಕ್ಕೆ ಪೂರಕವೆಂಬಂತೆ, ಸಂದರ್ಶಿಸಲಾದ ಜನರಲ್ಲಿ ಶೇ.25ರಷ್ಟು ಮಂದಿ ವಿಮಾನಕ್ಕೆ ಮಾಮುಲಿ ದರಕ್ಕಿಂದ ಶೇ.300ಕ್ಕೂ ಅಧಿಕ ಪಾವತಿಸಿರುವುದಾಗಿ ತಿಳಿಸಿದ್ದಾರೆ. ಶೇ.13ರಷ್ಟು ಜನ ಮಾತ್ರ ಮೊದಲಿದ್ದ ದರದಲ್ಲೇ ಪ್ರಯಾಣಿಸಿದ್ದಾರೆ. ಒಟ್ಟು ಶೇ.87ರಷ್ಟು ಮಂದಿ ವಿಮಾನ ಪ್ರಯಾಣಕ್ಕೆ ಶೇ.50ರಿಂದ 300ರಷ್ಟು ಅಧಿಕ ವೆಚ್ಚ ಮಾಡಿದ್ದಾರೆ.

ವಸತಿಗೂ ಶೇ.300ರಷ್ಟು ಅಧಿಕ ಪಾವತಿ:

ಲಾಡ್ಜ್‌, ಹೋಟೆಲ್‌, ಟೆಂಟ್‌ಗಳಲ್ಲಿ ವಸತಿಗೂ ಅತಿ ಹೆಚ್ಚು ಶುಲ್ಕ ವಿಧಿಸಲಾಗಿತ್ತು. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ.67ರಷ್ಟು ಜನ ಮಾಮೂಲಿಗಿಂತ ಶೇ.50ರಿಂದ 300ರಷ್ಟು ಅಧಿಕ ಹಣ ಪಾವತಿಸಿದ್ದಾಗಿ ತಿಳಿಸಿದ್ದಾರೆ. ಕೇವಲ ಶೇ.26ರಷ್ಟು ಮಂದಿ ಯಾವುದೇ ಅಧಿಕ ಶುಲ್ಕ ಪಾವತಿಸಿರಲಿಲ್ಲ.

ಸ್ಥಳೀಯ ಸಂಚಾರ ಶುಲ್ಕವೂ ಅಧಿಕ:

ಪ್ರಯಾಗ್‌ರಾಜ್‌ನಲ್ಲಿ ಸ್ಥಳೀಯವಾಗಿ ಸಂಚರಿಸಲು ಹಾಗೂ ದೋಣಿಯಲ್ಲಿ ವಿಹರಿಸಲು ಶೇ.66ರಷ್ಟು ಜನ ಶೇ.50ರಿಂದ 300ರಷ್ಟು ಅಧಿಕ ಪಾವತಿಸಿರುವುದಾಗಿ ತಿಳಿಸಿದ್ದಾರೆ.

49 ಸಾವಿರ ಭಕ್ತರನ್ನು ಮಾತನಾಡಿಸಿ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನಕ್ಕೆ ಉತ್ತರಿಸಿದವರಲ್ಲಿ ಶೇ.62ರಷ್ಟು ಪುರುಷರಿದ್ದರೆ, ಶೇ.38ರಷ್ಟು ಮಹಿಳೆಯರಿದ್ದರು. ಶೇ.44ರಷ್ಟು ಟೈರ್‌ 1, ಶೇ.25ರಷ್ಟು ಟೈರ್‌ 2, ಶೇ.31ರಷ್ಟು ಟೈರ್‌ 3,4,5 ಹಾಗೂ ಗ್ರಾಮೀಣ ಪ್ರದೇಶದ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ.

Share this article