ದೇಶವನ್ನೇ ಬೆಚ್ಚ ಬೀಳಿಸಿದ ಕೋಟೆಯಲ್ಲೊಂದು ಕೊ* !

Published : Jun 28, 2026, 11:15 AM IST
ketan agarwal death case fiancee siya goyal lohagad fort murder plot police investigation

ಸಾರಾಂಶ

ತನ್ನ ಬಾಳಸಂಗಾತಿಯಾಗಬೇಕಿದ್ದವನನ್ನು ಪುಣೆಯ ಬಳಿಯ ಲೋಹಗಢ ಕೋಟೆಯಿಂದ ದಬ್ಬಿ ವಧುವೇ ಕೊಂದುಬಿಟ್ಟಿದ್ದಾಳೆ. ಇದಕ್ಕೆ ಕಾರಣ- ಆಕೆ ಮತ್ತೊಬ್ಬನನ್ನು ಪ್ರೀತಿ ಮಾಡುತ್ತಿದ್ದದ್ದು! ದೇಶಾದ್ಯಂತ ಚರ್ಚೆಯಾಗುತ್ತಿರುವ ಕೇತನ್‌ ಅಗರ್ವಾಲ್‌ ಎಂಬ ಯುವಕನ ದುರಂತ ಅಂತ್ಯದ ಕತೆ

 ರುದ್ರಯ್ಯ ಎಸ್‌.ಎಸ್‌.

 600 ಕೋಟಿ ರು.ಗೂ ಅಧಿಕ ಆಸ್ತಿ ಹೊಂದಿದ್ದ ಕುಟುಂಬಕ್ಕೆ ಆತ ಒಬ್ಬನೇ ಮಗ. ಜತೆಗೆ ರಿಯಲ್‌ ಎಸ್ಟೇಟ್‌ ಉದ್ಯಮಿ. ಮನೆಯವರೇ ತೋರಿಸಿದ, ತಮ್ಮ ಕುಟುಂಬದಷ್ಟೇ ಸರಿಸಮಾನ ಆಸ್ತಿ ಹೊಂದಿದ್ದ ಸಿಯಾ ಗೋಯಲ್‌ ಎಂಬಾಕೆಯನ್ನು ವಿವಾಹವಾಗಲು ಒಪ್ಪಿಕೊಂಡಿದ್ದ. ರಾಜಸ್ಥಾನದ ಅರಮನೆಯಲ್ಲಿ ವೈಭವೋಪೇತವಾಗಿ ಮದುವೆ ನೆರವೇರಬೇಕಿತ್ತು. ವಿವಾಹಕ್ಕೆ ಇನ್ನೂ ಐದು ತಿಂಗಳಿದೆ. ಆದರೆ ವರ ಇಲ್ಲ!  

ತನ್ನ ಬಾಳಸಂಗಾತಿಯಾಗಬೇಕಿದ್ದವನನ್ನು ಪುಣೆಯ ಬಳಿಯ ಲೋಹಗಢ ಕೋಟೆಯಿಂದ ದಬ್ಬಿ ವಧುವೇ ಕೊಂದುಬಿಟ್ಟಿದ್ದಾಳೆ. ಇದಕ್ಕೆ ಕಾರಣ- ಆಕೆ ಮತ್ತೊಬ್ಬನನ್ನು ಪ್ರೀತಿ ಮಾಡುತ್ತಿದ್ದದ್ದು!  

 ದೇಶಾದ್ಯಂತ ಚರ್ಚೆಯಾಗುತ್ತಿರುವ ಕೇತನ್‌ ಅಗರ್ವಾಲ್‌ ಎಂಬ ಯುವಕನ ದುರಂತ ಅಂತ್ಯದ ಕತೆ ಇದು. ಪ್ರೀತಿ, ಪ್ರೇಮ, ಸಂಬಂಧ, ಬಾಂಧವ್ಯ, ವಿವಾಹ, ಕೌಟುಂಬಿಕ ವ್ಯವಸ್ಥೆಯ ಬಗ್ಗೆ ಅನುಮಾನ ಹುಟ್ಟಿಸಿದ ಪ್ರಕರಣದ ಬಗ್ಗೆ ಕಿರು ಮಾಹಿತಿ ಇಲ್ಲಿದೆ. 

400 ಅಡಿಯ ಪ್ರಪಾತಕ್ಕೆ ನೂಕಿದಳು

 ಮಹಾರಾಷ್ಟ್ರದ  ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್‌ ಅಗರ್ವಾಲ್ (26) ಹಾಗೂ ಸಿಯಾ ಗೋಯಲ್ (20) ವಿವಾಹ ಕಳೆದ ಫೆಬ್ರವರಿಯಲ್ಲಿ ನಿಶ್ಚಯವಾಗಿತ್ತು. ನವೆಂಬರ್‌ನಲ್ಲಿ ಮದುವೆ ಮಾಡಲು ರಾಜಸ್ಥಾನದ ಉದಯಪುರದಲ್ಲಿ ₹17 ಕೋಟಿಗೆ ಅರಮನೆ ಕಾದಿರಿಸಲಾಗಿತ್ತು. ಅತಿಥಿಗಳನ್ನು ಕರೆದೊಯ್ಯಲು 2 ಖಾಸಗಿ ವಿಮಾನಗಳನ್ನು ಸಹ ಬುಕ್ ಮಾಡಲಾಗಿತ್ತು. ಆದರೆ, ಈ ಮದುವೆಗೆ ಸಹಮತವಿಲ್ಲದ ಸಿಯಾ ತನ್ನ ಮೊದಲ ಪ್ರಿಯಕರ ಚೇತನ್ ಚೌಧರಿ ಜತೆಗೂಡಿ ಭಾವಿ ಪತಿಯನ್ನು ಲೋಹಗಡ ಕೋಟೆಯ 400 ಅಡಿ ಕಂದಕಕ್ಕೆ ತಳ್ಳಿ ಹತ್ಯೆ ಮಾಡಿದ್ದಾಳೆ.

 ಕೊಂದ ಬಳಿಕ ಅಪಘಾತ ಕತೆ ಕಟ್ಟಿದಳು 

ಕೇತನ್‌ ಕೊಲೆ ಮಾಡಲು ಸಿಯಾ ಸತತ 3 ಬಾರಿ ಯತ್ನಿಸಿ ವಿಫಲವಾಗಿದ್ದಳು. ಮೊದಲು ಮೇ 31ರಂದು ಲೋಹಗಢಕ್ಕೆ ಕರೆದೊಯ್ಯುವಲ್ಲಿ ಆಕೆ ಸಫಲಳಾದಳು. ಕೆಳಗಡೆಗೆ ನೂಕಲು ಸಾಧ್ಯವಾಗಿರಲಿಲ್ಲ. ಈ ನಡುವೆ, ವೆಡ್ಡಿಂಗ್‌ ಫೋಟೋಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ಇಬ್ಬರನ್ನೂ ಕಳುಹಿಸಲು ಕುಟುಂಬ ನಿರ್ಧರಿಸಿತ್ತು. ಆದರೆ ಅದು ಸಿಯಾಗೆ ಇಷ್ಟವಿರಲಿಲ್ಲ. ಲೋಹಗಢಕ್ಕೆ ಟ್ರೆಕ್ಕಿಂಗ್‌ ಹೋಗೋಣ ಎಂದು ಹಟ ಹಿಡಿದಿದ್ದಳು. ಕೊಲೆಗೆ ಮತ್ತೊಮ್ಮೆ ಯತ್ನಿಸುವ ಉದ್ದೇಶದಿಂದ. ಆದರೆ ಕುಟುಂಬ ಒಪ್ಪಿರಲಿಲ್ಲ. ಅದೇ ಸಿಟ್ಟಿನಲ್ಲಿ ಕೇತನ್‌ ಪಾಸ್‌ಪೋರ್ಟ್‌ ಅನ್ನು ಹರಿದು ವಿದೇಶ ಪ್ರವಾಸ ರದ್ದಾಗುವಂತೆ ನೋಡಿಕೊಂಡಳು. ಜೂ.14ರಂದು ಆತನ ಮನವೊಲಿಸಿ ಕೋಟೆಗೆ ಕರೆದುಕೊಂಡು ಹೋದಳು. ಹಾವು ಎಂದು ಕಿರುಚಿ, ಆತನನ್ನು ತಬ್ಬಿಕೊಂಡು ಬಳಿಕ ನೂಕುವುದು ಪ್ಲಾನ್‌ ಆಗಿತ್ತು. ಆದರೆ ಕೇತನ್‌ ಗಮನ ಬೇರೆಡೆ ಹೋಗಿದ್ದರಿಂದ ಸಾವಿನ ದವಡೆಯಿಂದ ಪಾರಾಗಿದ್ದ. ಕೊನೆಯದಾಗಿ ಜೂ.18ರಂದು ಲೋಹಗಢ ಕೋಟೆ ತುದಿಯಲ್ಲಿ ಫೋಟೋಗೆ ಫೋಸ್‌ ನೀಡುವಂತೆ ತಿಳಿಸಿ 400 ಅಡಿ ಆಳಕ್ಕೆ ತಳ್ಳಿ ಕೇತನ್‌ನ್ನು ಹತ್ಯೆ ಮಾಡಿ ಅದೊಂದು ಅಪಘಾತ ಎಂದು ಕಥೆ ಕಟ್ಟುವಲ್ಲಿ ಸಕ್ಸಸ್ ಆಗಿದ್ದಳು.

ಬರ್ತ್‌ಡೇಗೆ ಸಜ್ಜಾದವನ ಡೆತ್‌ಡೇ 

ಜೂ.19ರಂದು ಸಿಯಾಳ 20ನೇ ಹುಟ್ಟುಹಬ್ಬವಿತ್ತು. ತನ್ನ ಭಾವಿ ಪತ್ನಿಯ ಜನ್ಮದಿನದಂದು ಅದ್ಧೂರಿ ಪಾರ್ಟಿ ಆಯೋಜಿಸಲು ಕೇತನ್ ಕಳೆದ 1 ತಿಂಗಳಿನಿಂದ ಪ್ಲಾನ್ ಮಾಡುತ್ತಿದ್ದ. ಇದಕ್ಕಾಗಿ ವಿಡಿಯೋ ಶೂಟ್‌ ಮಾಡುತ್ತಾ ತಯಾರಿ ನಡೆಸಿದ್ದ. ಬರ್ತ್‌ಡೇ ತಿಂಗಳು ಪೂರ್ತಿ ಸಿಯಾಳಿಗೆ ಸರ್‌ಪ್ರೈಸ್‌ ನೀಡುತ್ತಿದ್ದ. ಆದರೆ, ಒಂದುದಿನ ಮುಂಚಿತವಾಗಿಯೇ ಕೇತನ್‌ಗೆ ಮರಣ ಶಾಸನ ಬರೆದ ಸಿಯಾ ‘ಡೇತ್‌ಡೇ’ ಫಿಕ್ಸ್ ಮಾಡಿದ್ದಳು.

ಹೂಡಿಯಿಂದ ಬೆಳಕಿಗೆ ಬಂದು ಕೊಲೆ

ಕೇತನ್ ಹತ್ಯೆಯ ಬಳಿಕ ಸಿಯಾ ಕಣ್ಣೀರು ಹಾಕುತ್ತಾ, ‘ಫೋಟೋಗೆ ಪೋಸ್ ನೀಡುವಾಗ ಕೇತನ್ ಕಾಲು ಜಾರಿ ಬಿದ್ದಿದ್ದಾನೆ’ ಎಂದು ಕಟ್ಟುಕಥೆ ಕಟ್ಟಿದ್ದಳು. ಆರಂಭದಲ್ಲಿ ಆಕಸ್ಮಿಕ ಸಾವು ಎಂದೇ ಭಾವಿಸಿ ತನಿಖೆಗೆ ಇಳಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಘಟನೆ ನಡೆದ ಜೂ.18ರಂದು ಪುಣೆಯಲ್ಲಿ 33 ಡಿಗ್ರಿ ಸೆಲ್ಶಿಯಸ್ ತಾಪಮಾನವಿದ್ದರೂ ಓರ್ವ ವ್ಯಕ್ತಿ ದಪ್ಪನೆಯ ಹೂಡಿ ಧರಿಸಿ ತಿರುಗಾಡುತ್ತಿದ್ದ. ಸಿಸಿಟಿವಿಯಲ್ಲಿ ಚಲನವಲನ ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಆತ ಸಿಯಾಳ ಪ್ರಿಯಕರ ಚೇತನ್ ಚೌಧರಿ ತಿಳಿಯಿತು. ವಿಚಾರಣೆ ವೇಳೆ ಕೇತನ್ ಹತ್ಯೆ ಮಾಡಿರುವುದಾಗಿ ಇಬ್ಬರೂ ಒಪ್ಪಿಕೊಂಡಿದ್ದಾರೆ. ಸಿಯಾ ಮತ್ತು ಚೇತನ್ 6 ತಿಂಗಳಲ್ಲಿ 2004 ಬಾರಿ ಫೋನ್ ಕರೆ ಮಾಡಿ 238 ಗಂಟೆ ಮಾತುಕತೆ ಮಾಡಿರುವುದು ಪತ್ತೆಯಾಯಿತು.

 ಕೊಂದಿದ್ದು ಏಕೆ? 

* ಕುಟುಂಬದವರು ನಿಶ್ಚಯಿಸಿದ್ದ ಮದುವೆ ಸಿಯಾಗೆ ಒಪ್ಪಿಗೆ ಇಲ್ಲದಿರುವುದು

* ಈ ಮೊದಲೇ ಚೇತನ್ ಎಂಬಾತನ ಜೊತೆಗೆ ಪ್ರೇಮಾಂಕುರ ಆಗಿದ್ದದ್ದು

* ಈ ಪ್ರೀತಿಯ ವಿಷಯವನ್ನು ತಂದೆ-ತಾಯಿಗೆ ಹೇಳಿಕೊಳ್ಳಲು ಹಿಂಜರಿಕೆ

* ಸಿಯಾ, ಕೇತನ್ ಕುಟುಂಬಗಳ ಸದಸ್ಯರೊಂದಿಗೆ ಸಂವಹನ ಕೊರತೆ

* ಚೇತನ್‌ ಜೊತೆ ಓಡಿಹೋದರೆ ಮರ್ಯಾದೆ ಹೋಗುತ್ತೆಂದು ಭಾವನೆ

* ಕೇತನ್‌ಗೆ ತಲೆ ಕೂದಲು ಇಲ್ಲದ್ದಕ್ಕೆ ವಿಗ್ ಧರಿಸುತ್ತಾನೆಂಬ ಕುಂಟುನೆಪ

* ಭಾವಿಪತಿಯನ್ನು ಕೊಂದು ಪ್ರಿಯಕರನೊಂದಿಗೆ ಜೀವಿಸುವ ಹುಂಬುತನ

 ಸಿಯಾ ಏನು ಮಾಡಬಹುದಿತ್ತು? 

* ವಿವಾಹ ನಿಶ್ವಯವಾಗುವ ಮೊದಲೇ ನಿರಾಕರಿಸಬಹುದಿತ್ತು 

* ಚೇತನ್ ಜೊತೆಗಿನ ಪ್ರೀತಿ ವಿಷಯವನ್ನು ಹೇಳಿಕೊಳ್ಳಬಹುದಿತ್ತು

* ಕುಟುಂಬದವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಬಹುದಿತ್ತು

* ವಿಶ್ವಾಸಾರ್ಹ ಸ್ನೇಹಿತರು / ಹಿರಿಯರಿಂದ ಸಲಹೆ ಪಡೆಯಬಹುದಿತ್ತು

* ಅಗತ್ಯವಿದ್ದಲ್ಲಿ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್‌ ತೆಗೆದುಕೊಳ್ಳಬಹುದಿತ್ತು

* ಬೆದರಿಕೆ / ಕಿರುಕುಳ ಇದ್ದರೆ ಪೊಲೀಸರಿಗೆ ದೂರು ಕೂಡ ಕೊಡಬಹುದಿತ್ತು

ಬೆಂಗಳೂರಿನ ಹಂತಕಿ ಶುಭಾ ಕೇಸ್‌ ನೆನಪಿಸಿದ ಪ್ರಕರಣ

2003 ಡಿ.3ರಂದು ಬೆಂಗಳೂರಿನ ಶುಭಾ ಶಂಕರನಾರಾಯಣ್ ಎಂಬಾಕೆ ತನ್ನ ಭಾವಿಪತಿ ಟೆಕ್ಕಿ ಗಿರೀಶ್ ಎಂಬಾತನನ್ನು ಒಳವರ್ತುಲ ರಸ್ತೆಗೆ (ಎಚ್‌ಎಎಲ್‌ ವಿಮಾನ ನಿಲ್ದಾಣ ಹತ್ತಿರದ ಜಂಬೋ ಪಾಯಿಂಟ್) ಕರೆದೊಯ್ದು ಪ್ರಿಯಕರ ಅರುಣ್ ವರ್ಮಾ ಜತೆ ಸೇರಿ ಕೊಲೆ ಮಾಡಿದ್ದಳು. ಇದು ‘ರಿಂಗ್ ರೋಡ್ ಶುಭಾ ಕೇಸ್‌’ ಎಂದೇ ಸದ್ದು ಮಾಡಿತ್ತು. ಅದೇ ಹೆಸರಲ್ಲಿ ಸಿನಿಮಾ ಕೂಡ ಬಂದಿತ್ತು.

ಮದುವೆ ಇಷ್ಟವಿಲ್ಲದಿದ್ದರೆ ಬೇಡ ಅನ್ನಿ, ಕೊಲ್ಲಬೇಡಿ

ಯುವತಿಯರು ಮದುವೆ ಇಷ್ಟವಿರದಿದ್ದರೆ ನಿಶ್ಚಿತಾರ್ಥಕ್ಕೂ ಮೊದಲೇ ಬೇಡ ಅಂತ ಹೇಳಿ. ಆದರೆ, ಗಂಡು ಮಕ್ಕಳನ್ನು ಕೊಲೆ ಮಾಡಬೇಡಿ. ಇಂಥ ಘಟನೆಗಳಿಂದ ಹುಡುಗರು ಮದುವೆಯಾಗಲು ಹಿಂಜರಿಯುತ್ತಿದ್ದಾರೆ. ನನ್ನ ಮಗ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೋನಮ್‌ಗೆ ಕೇವಲ 11 ತಿಂಗಳಲ್ಲಿ ಜಾಮೀನು ಸಿಕ್ಕಿರುವುದೇ ಪುಣೆಯ ಸಿಯಾಗೆ ಕೇತನ್ ಕೊಲೆ ಮಾಡಲು ಧೈರ್ಯ ತಂದಿದೆ.

- ಉಮಾ ರಘುವಂಶಿ, ಮಧುಚಂದ್ರಕ್ಕೆಂದು ಮೇಘಾಲಯಕ್ಕೆ ತೆರಳಿದ್ದಾಗ ಪತ್ನಿಯಿಂದಲೇ ಹತ್ಯೆಯಾದ ರಾಜಾ ರಘುವಂಶಿ ತಾಯಿ

ಚಾರಣಿಗರ ಸ್ವರ್ಗ ‘ಲೋಹಗಢ’

ಮಹಾರಾಷ್ಟ್ರದ ಲೋನಾವಾಲಾ ಗಿರಿಧಾಮಕ್ಕೆ ಹೊಂದಿಕೊಂಡಿರುವ ಲೋಹಗಢ ಕೋಟೆ (ಕಬ್ಬಿಣದ ಕೋಟೆ) ಸುಮಾರು 2000 ವರ್ಷಗಳ ಇತಿಹಾಸ ಹೊಂದಿದ್ದು, ಸಮುದ್ರಮಟ್ಟದಿಂದ 3389 ಅಡಿ ಎತ್ತರದಲ್ಲಿದೆ. ಈ ಪ್ರದೇಶವು ಪುಣೆಯಿಂದ 25 ಕಿ.ಮೀ. ದೂರವಿದ್ದು, ಚಾರಣಿಗರಿಗೆ ಮತ್ತು ವಾರಾಂತ್ಯ ಕಳೆಯಲು ನೆಚ್ಚಿನ ಪ್ರವಾಸಿ ತಾಣವಾಗಿದೆ. ಕೋಟೆಗೆ 4 ಬಾಗಿಲುಗಳಿದ್ದು, ಒಂದು ಭಾಗವು ಚೇಳಿನ ಬಾಲದ ಆಕಾರದಲ್ಲಿದೆ. ಕೋಟೆ ಸಮೀಪಕ್ಕೆ ಹೋಗಲು ವಾಹನಗಳು ಹೋಗಲು ರಸ್ತೆ ವ್ಯವಸ್ಥೆ ಇದ್ದು, ಜೂನ್‌ನಿಂದ ಫೆಬ್ರವರಿ ಸಮಯದಲ್ಲಿ ಹಸಿರು ಹೊದಿಕೆ ಮತ್ತು ಸಣ್ಣಪುಟ್ಟ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು. ಶಾತವಾಹನರು ನಿರ್ಮಿಸಿದ ಈ ಕೋಟೆಯನ್ನು ಕಾಲನಂತರ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಬಹಮನಿಗಳು, ನಿಜಾಮರು, ಮೊಘಲರು ಮತ್ತು ಮರಾಠರು ವಶಪಡಿಸಿಕೊಂಡು ಆಳ್ವಿಕೆ ನಡೆಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಶ್ವದ ಹಿರಿಯ ಆಮೆ 194 ವರ್ಷದ ಜೋನಾಥನ್‌ ವೀಕ್ಷಿಸಿದ ಮೋದಿ
ಸಿಂದೂರ ವೇಳೆ ಹುತಾತ್ಮ ಯೋಧರ ಸಂಖ್ಯೆ, ಹೆಸರು ಮೊದಲ ಸಲ ಬಹಿರಂಗ