ನವದೆಹಲಿ: ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ‘ಆಪರೇಷನ್‌ ಸಿಂದೂರ’ದ ವೇಳೆ ಹುತಾತ್ಮರಾದ ಭಾರತೀಯ ಯೋಧರ ಸಂಖ್ಯೆ ಮತ್ತು ಅವರ ಹೆಸರುಗಳನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದೆ. 

ಇವರ ಹೆಸರನ್ನು ದೆಹಲಿಯ ಇಂಡಿಯಾ ಗೇಟ್‌ ಬಳಿ ಇರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಕೆತ್ತುವ ಮೂಲಕ ಶಾಶ್ವತ ಗೌರವ ನೀಡಿದೆ. ಅಲ್ಲಿ ನೀಡಿರುವ ಮಾಹಿತಿ ಅನ್ವಯ, ಸಿಂದೂರದ ವೇಳೆ 6 ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ.

ಹುತಾತ್ಮರಾದ ಸುಬೇದಾರ್ ಮೇಜರ್ ಪವನ್ ಕುಮಾರ್ (10 ಪದಾತಿ ದಳ), ರೈಫಲ್‌ಮ್ಯಾನ್ ಸುನೀಲ್ ಕುಮಾರ್ (4ನೇ ಬೆಟಾಲಿಯನ್, ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳ), ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (5 ಫೀಲ್ಡ್ ರೆಜಿಮೆಂಟ್), ಅಗ್ನಿವೀರ್ ಮೂಡ್ ಮುರಳಿ ನಾಯಕ್ (851 ಲೈಟ್ ರೆಜಿಮೆಂಟ್), ಹವಿಲ್ದಾರ್ ಸುನೀಲ್ ಕುಮಾರ್ ಸಿಂಗ್ (237 ಫೀಲ್ಡ್ ವರ್ಕ್‌ಶಾಪ್) ಮತ್ತು ಸಾರ್ಜೆಂಟ್ ಸುರೇಂದ್ರ ಕುಮಾರ್ (39 ವಿಂಗ್, ಭಾರತೀಯ ವಾಯುಪಡೆ) ಅವರ ಹೆಸರನ್ನು ಅವರು ಸೇವೆಯಲ್ಲಿದ್ದ ಘಟಕದ ಹೆಸರಿನೊಂದಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ತ್ಯಾಗ ಚಕ್ರದ ಗೋಡೆ ಸಂಖ್ಯೆ ‘3ಡಿ’ಯಲ್ಲಿ ಕೆತ್ತಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದ ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ.


ಈ 6 ಮಂದಿಯಲ್ಲಿ ಐವರು ಭಾರತೀಯ ಸೇನೆಯವರಾದರೆ, ಒಬ್ಬರು ವಾಯುಪಡೆ ಅಧಿಕಾರಿ. ರೈಫಲ್‌ಮನ್ ಸುನಿಲ್ ಕುಮಾರ್‌ಗೆ ಮರಣೋತ್ತರವಾಗಿ ‘ವೀರ ಚಕ್ರ’ವನ್ನು ನೀಡಲಾದರೆ, ಸಾರ್ಜೆಂಟ್ ಸುರೇಂದ್ರ ಕುಮಾರ್ ಅವರಿಗೆ ‘ವಾಯು ಪದಕ’ ನೀಡಿ ಗೌರವಿಸಲಾಗಿದೆ.

ವೀರ ಯೋಧರಿವರು

- ಸುಬೇದಾರ್ ಮೇಜರ್ ಪವನ್ ಕುಮಾರ್

- ರೈಫಲ್‌ಮ್ಯಾನ್ ಸುನೀಲ್ ಕುಮಾರ್‌

- ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್‌

- ಅಗ್ನಿವೀರ್ ಮೂಡ್ ಮುರಳಿ ನಾಯಕ್

- ಹವಿಲ್ದಾರ್ ಸುನೀಲ್ ಕುಮಾರ್ ಸಿಂಗ್‌

- ಸಾರ್ಜೆಂಟ್ ಸುರೇಂದ್ರ ಕುಮಾರ್‌