ರಾಮಮಂದಿರ ಹುಂಡಿ ಕಳವು ಪ್ರಕರಣ ಚಂಪತ್‌ ರಾಯ್‌ ರಾಜೀನಾಮೆ - ಟ್ರಸ್ಟಿ ಮಿಶ್ರಾ ಪದತ್ಯಾಗ

KannadaprabhaNewsNetwork |  
Published : Jun 27, 2026, 01:30 AM ISTUpdated : Jun 27, 2026, 04:36 AM IST
Ayodhya

ಸಾರಾಂಶ

  ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣದಲ್ಲಿ   ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ನವದೆಹಲಿ: ದೇಶಾದ್ಯಂತ ಭಾರಿ ಗಮನ ಸೆಳೆದಿರುವ ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ ಪ್ರಕರಣದಲ್ಲಿ ಮೊದಲ ತಲದಂಡವಾಗಿದೆ. ದೇಗುಲದಲ್ಲಿ ನಡೆದ ಅಕ್ರಮದ ಸಂಬಂಧ ನೈತಿಕ ಹೊಣೆ ಹೊತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅವರೊಂದಿಗೆ ಟ್ರಸ್ಟ್‌ನ ಮತ್ತೊಬ್ಬ ಸದಸ್ಯ ಅನಿಲ್ ಮಿಶ್ರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ.

ದೇಣಿಗೆ ಹಣದಲ್ಲಿ ಅಕ್ರಮ ನಡೆದಿರುವ ಆರೋಪಗಳ ಕುರಿತು ಸ್ವತಂತ್ರ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಲು ಯಾವುದೇ ರೀತಿಯ ಪ್ರಭಾವ ಬೀಳಬಾರದು ಎಂಬ ಉದ್ದೇಶದಿಂದ ಚಂಪತ್ ರಾಯ್‌ ಈ ನಿರ್ಧಾರ ಕೈಗೊಂಡಿದ್ದಾರೆ. ರಾಯ್‌ ವಿರುದ್ಧ ವೈಯಕ್ತಿಕ ಆರೋಪಗಳಿಲ್ಲದಿದ್ದರೂ, ತನಿಖೆಯ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಗುಲಕ್ಕೆ ಭಕ್ತರು ನೀಡಿದ ಕೋಟ್ಯಂತರ ರು. ದೇಣಿಗೆಯಲ್ಲಿ ಅಕ್ರಮ

ದೇಗುಲಕ್ಕೆ ಭಕ್ತರು ನೀಡಿದ ಕೋಟ್ಯಂತರ ರು. ದೇಣಿಗೆಯಲ್ಲಿ ಅಕ್ರಮ ನಡೆದಿದೆ ಎಂದು ತಿಂಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಪ್ರಕರಣದ ತನಿಖೆಗೆ ಆದೇಶಿಸಿತ್ತು. ಇದು ಸರ್ಕಾರ ಮತ್ತು ವಿಪಕ್ಷಗಳ ನಡುವೆ ಭಾರಿ ಜಟಾಪಟಿಗೂ ಕಾರಣವಾಗಿತ್ತು.

ಈ ನಡುವೆ ಎಸ್‌ಐಟಿ, ಜೂ.23ರಂದು ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿ ಪ್ರಮುಖ ಆರೋಪಗಳನ್ನು ಮಾಡಿತ್ತು. ಅದರಲ್ಲಿ ದೇಣಿಗೆ ಎಣಿಕೆ ಕಾರ್ಯದಲ್ಲಿದ್ದ ಸಿಬ್ಬಂದಿ ಸೇರಿದಂತೆ ಟ್ರಸ್ಟ್‌ಗೆ ಸಂಬಂಧಪಟ್ಟವರು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಿಸಿಟೀವಿ ಮೇಲ್ವಿಚಾರಣೆಯಲ್ಲಿ ಲೋಪ, ಲೆಕ್ಕಪತ್ರದಲ್ಲಿ ಪಾರದರ್ಶಕತೆಯ ಕೊರತೆ ಹಾಗೂ ಕುಂಭಮೇಳದ ಸಮಯದಲ್ಲಿ ಅತಿ ಹೆಚ್ಚಿನ ಮೊತ್ತದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿತ್ತು.

2 ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಪೊಲೀಸರು ಪ್ರಕರಣದ 8 ಪ್ರಮುಖ ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ ಓರ್ವ ಚಂಪತ್ ರಾಯ್ ಅವರ ಮಾಜಿ ಕಾರು ಚಾಲಕ ರಾಮಶಂಕರ್ ಯಾದವ್ ಅಲಿಯಾಸ್ ತಿನ್ನು ಯಾದವ್‌ ಎಂದು ತಿಳಿದುಬಂದಿತ್ತು. ಇದರ ಬೆನ್ನಲ್ಲೇ ರಾಯ್‌ ರಾಜೀನಾಮೆ ನೀಡಿದ್ದಾರೆ. ಇದು ಮಂದಿರದಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿರುವ ಶಂಕೆಗೆ ಮತ್ತಷ್ಟು ಪುಷ್ಠಿ ನೀಡಿದೆ

ನಗದು, ಚಿನ್ನ, ಬೆಳ್ಳಿ ಕದ್ದ 8 ಆರೋಪಿಗಳು ಅರೆಸ್ಟ್‌ 

ಅಯೋಧ್ಯಾ: ಇಲ್ಲಿನ ರಾಮ ಮಂದಿರದ ದೇಣಿಗೆ ಹಣ ಲೂಟಿ ಮಾಡಿದ ಪ್ರಕರಣದಲ್ಲಿ ಎಲ್ಲ 8 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ ಜೂ.29ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್‌ ಆದೇಶಿಸಿದೆ.

ಬಂಧಿತರ ಪೈಕಿ ದೇಣಿಗೆ ಎಣಿಕೆ ಕೆಲಸ ಮಾಡುತ್ತಿದ್ದ ರಾಮಶಂಕರ್ ಮಿಶ್ರಾ ಅಲಿಯಾಸ್ ತಿನ್ನು ಯಾದವ್‌, ರಾಮಶಂಕರ್ ಮಿಶ್ರಾ ಅಲಿಯಾಸ್ ರವಿ ಮಿಶ್ರಾ, ಈತನ ಪುತ್ರ ಅನುಕಲ್ಪ್ ಮಿಶ್ರಾ ಹಾಗೂ ಅಳಿಯ ಲವಕುಶ ಮಿಶ್ರಾ, ಸೋದರಳಿಯ ಮನೀಶ್ ಕುಮಾರ್ ಯಾದವ್, ದೇವಸ್ಥಾನದ ಅಟೆಂಡೆಂಟ್‌ ಅವಿನಾಶ್‌ ಶುಕ್ಲಾ, ಮಾಜಿ ಬ್ಯಾಂಕ್ ಉದ್ಯೋಗಿ ಹಾಗೂ ಕಾಣಿಕೆ ಎಣಿಕೆ ಸಿಬ್ಬಂದಿಯ ಉಸ್ತುವಾರಿ ವಹಿಸಿದ್ದ ಸುಭಾಷ್ ಶ್ರೀವಾಸ್ತವ ಹಾಗೂ ಹಣದ ರಸೀದಿಗಳನ್ನು ತಿರುಚಿರುವ ಆರೋಪ ಎದುರಿಸುತ್ತಿರುವ ಕರುಣೇಶ್ ಪಾಂಡೆ ಸೇರಿದ್ದಾರೆ. 

ದೇಗುಲದ ಹುಂಡಿ ಹಣ ಎಣಿಸುವ ಹೊಣೆಯನ್ನು ಪ್ರಮುಖ ಬ್ಯಾಂಕೊಂದು ಹೊತ್ತುಕೊಂಡಿತ್ತು, ಇದಕ್ಕೆ ವಿವಿಧ ಏಜೆನ್ಸಿಗಳ ಮೂಲಕ ಜನರನ್ನು ನೇಮಕ ಮಾಡಿತ್ತು. ಇದೀಗ ಬಂಧಿತರ ಪೈಕಿ 6 ಜನರು ಇದೇ ಬ್ಯಾಂಕ್‌ನಿಂದ ನಿಯೋಜಿತರಾಗಿದ್ದರು. ಅವರಿಗೆ ಬ್ಯಾಂಕ್‌ ಮೂಲಕವೇ ವೇತನ ಪಾವತಿಯಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಇನ್ನು ತಿನ್ನು ಯಾದವ್‌ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ಮಾಜಿ ಕಾರು ಚಾಲಕ ಎಂದು ಖಚಿತವಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೇಂದ್ರ ಸರ್ಕಾರದ 8 ಲಕ್ಷ ಹುದ್ದೆ ಖಾಲಿ! - 39 ಲಕ್ಷ ಹುದ್ದೆಯಲ್ಲಿ, 31 ಲಕ್ಷ ಮಾತ್ರ ಭರ್ತಿ
2027ರ ಸಪ್ತರಾಜ್ಯ ಚುನಾವಣೆಗೆ ಬಿಜೆಪಿ ಈಗಿಂದಲೇ ರಣತಂತ್ರ!