7 ಸಂಸದರ ಅನರ್ಹತೆಗೆ ಮನವಿ ಮಾಡ್ತೇವೆ : ಆಪ್‌ ಘೋಷಣೆ

KannadaprabhaNewsNetwork |  
Published : Apr 26, 2026, 02:45 AM ISTUpdated : Apr 26, 2026, 06:04 AM IST
AAP

ಸಾರಾಂಶ

ತನ್ನ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರುವ ದಿಢೀರ್‌ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಮೂರನೇ ಎರಡರಷ್ಟು ಪಕ್ಷಾಂತರವು ಲೋಕಸಭೆ ಮತ್ತು ರಾಜ್ಯಸಭೆಗೆ ಅನ್ವಯಿಸುವುದಿಲ್ಲ. ಆ ಎಲ್ಲ ಸಂಸದರ ಅನರ್ಹಗೊಳಿಸುವಂತೆ ರಾಜ್ಯಸಭಾ ಸಭಾಪತಿಗೆ ಮನವಿ ಮಾಡುತ್ತೇವೆ ಎಂದು ಆಮ್‌ ಆದ್ಮಿ ಪಕ್ಷ ಹೇಳಿದೆ.

 ನವದೆಹಲಿ :  ತನ್ನ 7 ರಾಜ್ಯಸಭಾ ಸಂಸದರು ಬಿಜೆಪಿಗೆ ಸೇರುವ ದಿಢೀರ್‌ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ, ಮೂರನೇ ಎರಡರಷ್ಟು ಪಕ್ಷಾಂತರವು ಲೋಕಸಭೆ ಮತ್ತು ರಾಜ್ಯಸಭೆಗೆ ಅನ್ವಯಿಸುವುದಿಲ್ಲ. ಆ ಎಲ್ಲ ಸಂಸದರ ಅನರ್ಹಗೊಳಿಸುವಂತೆ ರಾಜ್ಯಸಭಾ ಸಭಾಪತಿಗೆ ಮನವಿ ಮಾಡುತ್ತೇವೆ ಎಂದು ಆಮ್‌ ಆದ್ಮಿ ಪಕ್ಷ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಪಕ್ಷದ ನಾಯಕ ಸಂಜಯ್‌ ಸಿಂಗ್‌ ಮಾತನಾಡಿ, ‘ಉಭಯ ಸದನಗಳಲ್ಲಿ ಯಾವುದೇ ರೀತಿಯ ವಿಭಜನೆ ಸಂಭವಿಸಬಾರದು ಎಂದು ಪಕ್ಷಾಂತರ ವಿರೋಧಿ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ 3ನೇ 2ರಷ್ಟು ಜನ ಪಕ್ಷ ತೊರೆದರೂ ಅದಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ. ಅದು ಅಕ್ರಮ ಹಾಗೂ ಕಾನೂನು ಬಾಹಿರ. ಆ 7 ಸಂಸದರನ್ನು ಅನರ್ಹಗೊಳಿಸುವಂತೆ ಕೋರಿ ಉಪರಾಷ್ಟ್ರಪತಿಗಳೂ ಆಗಿರುವ ರಾಜ್ಯಸಭೆಯ ಸಭಾಪತಿಗೆ ಪತ್ರವನ್ನು ಬರೆಯುತ್ತೇವೆ’ ಎಂದರು.

ರಾಜ್ಯಸಭಾ ಸದಸ್ಯರಾದ ರಾಘವ್‌ ಚಡ್ಢಾ, ಸಂದೀಪ್‌ ಪಾಠಕ್‌ ಸೇರಿದಂತೆ ಆಪ್‌ನ 7 ಸಂಸದರು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಶುಕ್ರವಾರ ಘೋಷಿಸಿದ್ದರು. ಇದರಿಂದಾಗಿ ಮೇಲ್ಮನೆಯಲ್ಲಿ ಆಪ್‌ ಸಂಸದರ ಬಲ 10ರಿಂದ 3ಕ್ಕೆ ಕುಸಿದಂತಾಗಿದೆ.

ಅತೃಪ್ತಿ ಶಮನಕ್ಕೆ ಮೊದಲೇ ಆಪ್‌ ನಾಯಕರು ಗುಡ್‌ಬೈ 

ನವದೆಹಲಿ: ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದ 6 ‘ಅತೃಪ್ತ’ ಸಂಸದರಲ್ಲಿ ಕನಿಷ್ಠ 5 ಮಂದಿಗೆ ಮುಂದಿನ ಅವಧಿಯಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಶುಕ್ರವಾರ ಸಂಜೆ ಈ ವಿಷಯ ಚರ್ಚಿಸಲು ಸಂಸದರನ್ನು ತಮ್ಮ ಮನೆಗೆ ಕರೆದಿದ್ದರು. ಆದರೆ ಸಂಸದರು ಶುಕ್ರವಾರವೇ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸಿದ್ದರಿಂದ, ಆ ಸಭೆ ನಡೆಯಲೇ ಇಲ್ಲ ಎಂದು ಮೂಲಗಳು ತಿಳಿಸಿವೆ.ಪಕ್ಷದ ವಿರುದ್ಧ ಸಂಸದರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದುದನ್ನು ಗಮನಿಸಿದ್ದ ಕೇಜ್ರಿವಾಲ್‌, ‘ನಿಮಗೆ ಯಾವುದೇ ಅಸಮಾಧಾನವಿದ್ದರೆ, ನಿಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ. ಮುಂದಿನ ಅವಧಿಯಲ್ಲಿ ನಿಮಗೆ ಮತ್ತೆ ಟಿಕೆಟ್ ನೀಡಲಾಗುವುದು’ ಎಂದಿದ್ದರು. ಶುಕ್ರವಾರ ಸಂಜೆ ಸಂಸದರನ್ನು ತಮ್ಮ ಮನೆಗೆ ಕರೆದಿದ್ದರು.

‘ಆದರೆ ಸಂಸದರು ಗುರುವಾರ ಬೆಳಿಗ್ಗೆಯೇ ಆಪ್ ತೊರೆದು ಬಿಜೆಪಿ ಸೇರಲು ನಿರ್ಧಾರ ಕೈಗೊಂಡಿದ್ದರು. ಅವರೆಲ್ಲ ಗುಂಪಾಗಿ ಒಟ್ಟಿಗೆ ಸೇರಿ ನಿರ್ಗಮನ ಯೋಜನೆ ರೂಪಿಸಿರಲಿಲ್ಲ. ಆದರೆ ಪ್ರತ್ಯೇಕವಾಗಿ ಪ್ರತಿಯೊಬ್ಬರೂ ಪಕ್ಷ ತೊರೆಯಲು ನಿರ್ಧರಿಸಿದ್ದರು. ಕೊನೆಗೆ ಒಟ್ಟಾಗಿ ಬಿಜೆಪಿ ಸೇರಿದರು’ ಎಂದು ಮೂಲಗಳು ಹೇಳಿವೆ.ಶುಕ್ರವಾರ ರಾಘವ್ ಚಲ್ಢಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ 7 ರಾಜ್ಯಸಭಾ ಸಂಸದರು ಆಪ್ ತೊರೆದಿದ್ದಾರೆ.

ಹರ್ಭಜನ್‌ ಮನೆಗೆ ‘ದ್ರೋಹಿ’ ಎಂದು ಬರೆದು ಆಪ್ ಕಿಚ್ಚು

ಜಲಂಧರ್‌: ಆಮ್‌ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಕ್ರಿಕೆಟಿಗ ಹಾಗೂ ರಾಜ್ಯಸಭಾ ಸಂಸದ ಹರ್ಭಜನ್‌ ಸಿಂಗ್‌ ಅವರ ನಿವಾಸದೆದುರು ಆಪ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜತೆಗೆ ಗೋಡೆಯ ಮೇಲೆ ‘ದ್ರೋಹಿ’ (ಗದ್ದಾರ್) ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಪ್ರತಿಭಟನಾಕಾರರನ್ನು ತಡೆದು, ಪರಿಸ್ಥಿತಿ ಕೈಮೀರದಂತೆ ನಿಭಾಯಿಸಿದ್ದಾರೆ.ಅತ್ತ ಆಪ್‌ ತೊರೆದ ಅಶೋಕ್‌ ಮಿತ್ತಲ್‌ ಅವರ ಲವ್ಲಿ ಪ್ರೊಫೆಶ್ನಲ್‌ ವಿಶ್ವವಿದ್ಯಾಲಯ ಮತ್ತು ರಾಜಿಂದರ್‌ ಗುಪ್ತಾ ಮನೆ ಗೋಡೆಗಳ ಮೇಲೂ ಅವಹೇಳನಕಾರಿ ಬರಹಗಳು ಪತ್ತೆಯಾಗಿವೆ.

ಶುಕ್ರವಾರ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಕೂಡ ಪಕ್ಷಾಂತರಿ ಸಂಸದರನ್ನು ದ್ರೋಹಿಗಳು ಎಂದು ಕರೆದಿದ್ದರು.

ನಾನು ಬಿಜೆಪಿ ಸೇರುವೆ: ಸ್ವಾತಿ ಮಲಿವಾಲ್‌

ನವದೆಹಲಿ: ಸಂಸದ ರಾಘವ್‌ ಚಡ್ಢಾ ಜತೆ ಆಮ್‌ ಆದ್ಮಿ ಪಕ್ಷ ತೊರೆದಿರುವ ಮತ್ತೊಬ್ಬ ಸಂಸದೆ ಸ್ವಾತಿ ಮಲಿವಾಲ್‌ ಅವರು ತಾವು ಬಿಜೆಪಿ ಸೇರುವುದಾಗಿ ಶನಿವಾರ ಹೇಳಿದ್ದಾರೆ.

‘2 ವರ್ಷದಿಂದಲೇ ನಾನು ಪಕ್ಷದಿಂದ ದೂರ ಇದ್ದೇನೆ. ಇದೀಗ ಯೋಚನೆ ಮಾಡಿ, ಯಾರದ್ದೂ ಒತ್ತಡ ಇಲ್ಲದೆ ಬಿಜೆಪಿ ಸೇರುತ್ತಿದ್ದೇನೆ. ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಆಪ್‌ ತೊರೆಯಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.ಪಿಟಿಐ ಜತೆ ಮಾತನಾಡಿದ ಅವರು, ‘ಆಮ್‌ ಆದ್ಮಿ ಪಕ್ಷ ತನ್ನ ಸಿದ್ಧಾಂತಗಳಿಂದ ಸಂಪೂರ್ಣವಾಗಿ ವಿಮುಖವಾಗಿದೆ, ಕೇಜ್ರಿವಾಲ್‌ ಅವರು ಮೊದಲಿನಂತಿಲ್ಲ. ಅವರು ಹೇಳುವುದೊಂದು ಮಾಡುವುದು ಇನ್ನೊಂದು. ಅಂದು ಹರಕು ಪ್ಯಾಂಟ್ ಧರಿಸುವವರು ಇಂದು ಶೀಷ್‌ ಮಹಲ್‌ನಲ್ಲಿದ್ದಾರೆ’ ಎಂದು ಆರೋಪಿಸಿದರು.

ನಾನು ನನ್ನ ಕೆಲಸ ಬಿಟ್ಟು ಆಮ್‌ ಆದ್ಮಿಯ ಪ್ರತಿ ಚಳವಳಿಗೂ ಬೆಂಬಲ ನೀಡಿದೆ. ಆದರೆ, ನನ್ನ ಮೇಲಿನ ಹಲ್ಲೆ ಕುರಿತು ಎಫ್‌ಐಆರ್‌ ದಾಖಲಿಸಲು ಹೋದರೆ ಕೇಜ್ರಿವಾಲ್‌ ಮನೆಯಲ್ಲಿ ಹಲ್ಲೆ ನಡೆಯಿತು. ದೂರು ದಾಖಲಿಸಲು ಹೋದಾಗ ಒತ್ತಡ, ಬೆದರಿಕೆ ಹಾಕಲಾಯಿತು. 2 ವರ್ಷ ಕಾಲ ಪ್ರಕರಣ ಹಿಂಪಡೆಯಲು ನನ್ನ ಮೇಲೆ ಒತ್ತಡ ಇತ್ತು. ಸಂಸತ್ತಿನಲ್ಲೂ ಒಂದೇ ಒಂದು ನಿಮಿಷ ಮಾತನಾಡಲು ಅವಕಾಶ ನೀಡಲಿಲ್ಲ. ಆಪ್‌ ಸಂಪೂರ್ಣ ಬದಲಾಗಿದೆ. ಇದೀಗ ಪಕ್ಷ ಭ್ರಷ್ಟಾಚಾರ, ಸುಳ್ಳು, ಗೂಂಡಾಗಿರಿಗಾಗಿ ಗುರುತಿಸಲ್ಪಡುತ್ತದೆ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಯುಎಇನಲ್ಲೂ 15 ವರ್ಷ ಒಳಗಿನ ಮಕ್ಕಳಿಗೆ ಜಾಲತಾಣ ಬಳಕೆ ನಿರ್ಬಂಧ
ಅಯೋಧ್ಯೆ ರಾಮಮಂದಿರ ಸಿಸಿಟೀವಿ ತಿರುಚಲು ಯತ್ನ: ಎಸ್‌ಐಟಿ ತನಿಖೆಯಿಂದ ಪತ್ತೆ