ಬೆಂಗಳೂರು ಯುವತಿ ಜತೆ ಮದುವೆಯಾದ ಮಹಾಕುಂಭ ಖ್ಯಾತಿಯ ‘ಐಐಟಿ ಬಾಬಾ’

KannadaprabhaNewsNetwork |  
Published : Apr 08, 2026, 04:00 AM IST
ಐಐಟಿ ಬಾಬಾ | Kannada Prabha

ಸಾರಾಂಶ

ಕಳೆದ ವರ್ಷ ಮಹಾಕುಂಭ ಮೇಳದಲ್ಲಿ ‘ಐಐಟಿ ಬಾಬಾ’ ಎಂದೇ ವೈರಲ್ ಆದ ಅಭಯ್ ಸಿಂಗ್ ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರೊಂದಿಗೆ ವಿವಾಹವಾಗಿದ್ದಾರೆ. ಫೆ.15ರಂದು ಮಹಾಶಿವರಾತ್ರಿ ದಿನ ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಹಿಮಾಚಲ ದೇಗುಲದಲ್ಲಿ ಶಿವರಾತ್ರಿ ದಿನ ದಾಂಪತ್ಯಕ್ಕೆಸನಾತನ ಕೇಂದ್ರಿತ ವಿವಿ ಸ್ಥಾಪನೆಗೆ ದಂಪತಿ ಚಿಂತನೆಶಿಮ್ಲಾ: ಕಳೆದ ವರ್ಷ ಮಹಾಕುಂಭ ಮೇಳದಲ್ಲಿ ‘ಐಐಟಿ ಬಾಬಾ’ ಎಂದೇ ವೈರಲ್ ಆದ ಅಭಯ್ ಸಿಂಗ್ ಬೆಂಗಳೂರಿನ ಇಂಜಿನಿಯರ್ ಪ್ರತೀಕಾ ಅವರೊಂದಿಗೆ ವಿವಾಹವಾಗಿದ್ದಾರೆ. ಫೆ.15ರಂದು ಮಹಾಶಿವರಾತ್ರಿ ದಿನ ಹಿಮಾಚಲ ಪ್ರದೇಶದ ಅಘಂಜರ್ ಮಹಾದೇವ ದೇವಾಲಯದಲ್ಲಿ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ಪ್ರತಿಕಾ ಬೆಂಗಳೂರಿನ ಇಂಜಿನಿಯರಿಂಗ್ ಪದವೀಧರೆ. ಅಭಯ್ ಅವರೊಂದಿಗೆ ಸುಮಾರು ಒಂದು ವರ್ಷದ ಹಿಂದೆ ಪರಿಚಯವಾಗಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ವಿವಾಹವಾಗಿದ್ದಾರೆ. ದಂಪತಿ ಸನಾತನ ಧರ್ಮ ಕೇಂದ್ರಿತವಾದ ವಿವಿಯೊಂದನ್ನು ಸ್ಥಾಪಿಸುವ ಗುರಿ ಹೊಂದಿದ್ದಾರೆ.

ಹರಿಯಾಣದ ಝಜ್ಜರ್‌ನವರಾದ ಅಭಯ್ ಐಐಟಿ ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದು ಕೆನಡಾದಲ್ಲಿ ತಿಂಗಳಿಗೆ 3 ಲಕ್ಷ ರು. ಸಂಬಳದ ಉದ್ಯೋಗದಲ್ಲಿದ್ದರು. ಆದರೆ ಜೀವನದಲ್ಲಿ ಏನೋ ಕೊರತೆಯಿದೆ ಎನಿಸಿ ಉದ್ಯೋಗವನ್ನು ಬಿಟ್ಟು ಆಧ್ಯಾತ್ಮಿಕ ಜೀವನಕ್ಕೆ ತಿರುಗಿದರು. ಮಹಾಕುಂಭದಲ್ಲಿ ಅವರ ಸಂದರ್ಶನ ವೈರಲ್ ಆಗಿ ‘ಐಐಟಿ ಬಾಬಾ’ ಎಂದು ಪ್ರಸಿದ್ಧರಾದರು.

==

ಕೇರಳದ ದೇಗುಲಗಳಿಗೆ ಅನಂತ್‌ 18 ಕೋಟಿ ರು. ದೇಣಿಗೆ

ಗುರುವಾಯೂರಿನ ಆನೆ ಆರೈಕೆ ಯೋಜನೆಗೆ ಬೆಂಬಲ

ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಕೇಶ್‌ ಅಂಬಾನಿ ಪುತ್ರ ಅನಂತ್ ಅಂಬಾನಿ ಕೇರಳದ ರಾಜರಾಜೇಶ್ವರಂ ಮತ್ತು ಗುರುವಾಯೂರು ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನಗಳ ನಾನಾ ಅಭಿವೃದ್ಧಿಗೆ 18 ಕೋಟಿ ರು.ದೇಣಿಗೆ ನೀಡಿದ್ದಾರೆ.ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಪಟ್ಟಣದಲ್ಲಿ ಇರುವ ಪ್ರಾಚೀನ ರಾಜರಾಜೇಶ್ವರ ದೇವಾಲಯಕ್ಕೆ ಅನಂತ್ ಅಂಬಾನಿ ₹3 ಕೋಟಿ ದೇಣಿಗೆ ನೀಡಿದ್ದಾರೆ. ದೇವಾಲಯದ ಸಮಗ್ರ ನವೀಕರಣಕ್ಕಾಗಿ ಹೆಚ್ಚುವರಿಯಾಗಿ ₹12 ಕೋಟಿ ರು. ನೆರವು ನೀಡುವುದಾಗಿ ಘೋಷಿಸಿದ್ದಾರೆ.ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರು ದೇವಾಲಯದ ಟ್ರಸ್ಟ್‌ಗೆ ₹3 ಕೋಟಿ ದೇಣಿಗೆ ನೀಡಿದ್ದಾರೆ. ಇಲ್ಲಿನ ದೇವಾಲಯ ಸಂಪ್ರದಾಯಗಳಿಗೆ ಸಂಬಂಧಿಸಿದ ಆನೆಗಳ ಕಲ್ಯಾಣಕ್ಕಾಗಿ ಆಸ್ಪತ್ರೆಗಳು,ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಗೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

==

ನ್ಯಾಸ್ಕಾಂ ಫೌಂಡೇಷನ್ ಅಧ್ಯಕ್ಷರಾಗಿ ಕನ್ನಡಿಗ ಪ್ರವೀಣ್‌ ರಾವ್ ನೇಮಕ

ನವದೆಹಲಿ: ಪ್ರತಿಷ್ಠಿತ ನ್ಯಾಸ್ಕಾಂ ಫೌಂಡೇಶನ್‌ನ ಅಧ್ಯಕ್ಷರಾಗಿ ಕನ್ನಡಿಗ ಯುಬಿ ಪ್ರವೀಣ್‌ ರಾವ್ ನೇಮಕಗೊಂಡಿದ್ದಾರೆ. ಈ ಬಗ್ಗೆ ನ್ಯಾಸ್ಕಾಂ ಫೌಂಡೇಶನ್‌ ಖಚಿತ ಪಡಿಸಿದೆ. ಲಾಭರಹಿತ ಸಂಸ್ಥೆಯಾಗಿರುವ ನ್ಯಾಸ್ಕಾಂನ ಹಿಂದಿನ ಅಧ್ಯಕ್ಷರಾಗಿದ್ದ ರೋಸ್ಟೋ ರಾವಣನ್ ಅಧಿಕಾರವಧಿ ಮುಕ್ತಾಯ ಹಿನ್ನೆಲೆ ಪ್ರವೀಣ್‌ ಅವರ ಆಯ್ಕೆಯಾಗಿದೆ. 35 ವರ್ಷಗಳ ಅನುಭವ ಹೊಂದಿರುವ ಅವರು ಈ ಹಿಂದೆ ನ್ಯಾಸ್ಕಾಂನ ಛೇರ್ಮನ್‌ ಮತ್ತು ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ.

==

ಭಾರತಕ್ಕೆ ಅಕ್ರಮ ಪ್ರವೇಶ: ಉಡುಪಿ ಮಹಿಳೆಗೆ 6 ತಿಂಗಳು ಜೈಲು

ಬಹ್ರೈಚ್ (ಉ.ಪ್ರ.): ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ ಉಡುಪಿ ಮೂಲದ ಬ್ರಿಟನ್‌ ಮಹಿಳಾ ಪ್ರಜೆ ಸೇರಿ ಇಬ್ಬರು ಬ್ರಿಟನ್‌ ಪ್ರಜೆಗಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯ 6 ತಿಂಗಳ ಸೆರೆವಾಸದ ಶಿಕ್ಷೆ ಹಾಗೂ 50 ಸಾವಿರ ರು. ದಂಡವನ್ನು ವಿಧಿಸಿ ತೀರ್ಪು ನೀಡಿದೆ.ಇದನ್ನು ಕಟ್ಟಲು ವಿಫಲವಾದಲ್ಲಿ, 3 ತಿಂಗಳು ಹೆಚ್ಚುವರಿ ಸೆರೆವಾಸದಲ್ಲಿರಬೇಕಾಗುವುದು. ಆದರೆ ಸದ್ಯ ದೇಶ ಬಿಟ್ಟು ಹೋಗಬಾರದು ಎಂಬ ಷರತ್ತಿನೊಂದಿಗೆ ಇಬ್ಬರಿಗೂ ಜಾಮೀನು ನೀಡಲಾಗಿದೆ.

ಸೂಕ್ತ ದಾಖಲೆಗಳಿಲ್ಲದೆ ನೇಪಾಳ ಗಡಿ ದಾಟಿ ಭಾರತಕ್ಕೆ ಬರುತ್ತಿದ್ದ ಕರ್ನಾಟಕದ ಉಡುಪಿ ಮೂಲದ(ಬಳಿಕ ಬ್ರಿಟನ್‌ ಪೌರತ್ವ ಪಡೆದ) ಸುಮಿತ್ರಾ ಶಕೀಲ್ ಒಲಿವಿಯಾ ಮತ್ತು ಪಾಕಿಸ್ತಾನ ಮೂಲದ ಹಸನ್‌ ಅಮ್ಮನ್‌ ಸಲೀಂನನ್ನು ಕಳೆದ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು.

ಶ್ರವಣದೋಷವುಳ್ಳ ಮಕ್ಕಳಿಗಾಗಿ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾದ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರಿಬ್ಬರು ಬ್ರಿಟನ್‌ನಿಂದ ನೇಪಾಳಕ್ಕೆ ಬಂದಿದ್ದರು. ಇಬ್ಬರ ಬಳಿಯೂ ನೇಪಾಳದ ವೀಸಾ ಇತ್ತಾದರೂ ಭಾರತ ಪ್ರವೇಶಕ್ಕೆ ಅಗತ್ಯವಾದ ದಾಖಲೆಗಳಿರಲಿಲ್ಲ.

==

ವಂದೇ ಭಾರತ್‌ ಆಹಾರದಲ್ಲಿ ಹುಳು: ಮಾರಾಟಗಾರರಿಗೆ ₹10 ಲಕ್ಷ ದಂಡ

ಮುಂಬೈ: ಅಹಮದಾಬಾದ್‌ನಿಂದ ವಂದೇ ಭಾರತ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಂಬೈ ನಿವಾಸಿಯೊಬ್ಬರಿಗೆ ರೈಲಿನಲ್ಲಿ ನೀಡಿದ್ದ ಆಹಾರದಲ್ಲಿ ಜಿರಳೆ ರೀತಿಯ ಹುಳು ಪತ್ತೆಯಾಗಿದೆ. ಈ ಬೆನ್ನಲ್ಲೇ ಐಆರ್‌ಸಿಟಿಸಿ, ಆಹಾರ ಮಾರಾಟಗಾರ ಕಂಪನಿ ಆರ್‌.ಕೆ. ಗ್ರೂಪ್‌ಗೆ 10 ಲಕ್ಷ ರು. ದಂಡ ವಿಧಿಸಿದೆ.ಪ್ರಯಾಣಿಕ ತಮ್ಮ ಎಕ್ಸ್‌ ಖಾತೆಯಲ್ಲಿ ದಾಲ್‌- ಚಾವಲ್‌ ಊಟದಲ್ಲಿ ಕೀಟಗಳಿರುವುದನ್ನು ವಿಡಿಯೋ ಸಮೇತ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಕೋಚ್‌ನಲ್ಲಿ ಎರಡು ಕಡೆಗಳಲ್ಲಿ ಇದು ಬೆಳಕಿಗೆ ಬಂದಿದೆ ಎಂದಿದ್ದಾರೆ. ‘ಆರ್‌ಕೆ ಗ್ರೂಪ್‌ನ ಬೃಂದಾವನ ಫುಡ್‌ ಪ್ರಾಡಕ್ಟ್ಸ್‌ ಆಹಾರ ನೀಡಿದ್ದು, ಅವರ ಪರವಾನಗಿ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.ವಿಡಿಯೋದಲ್ಲಿ ಅವರು, ‘ಎಫ್‌ಎಸ್‌ಎಸ್‌ಎಐ ಮಾನದಂಡಗಳ ಪ್ರಕಾರ ಆಹಾರವನ್ನು ತಯಾರಿಸುತ್ತಿಲ್ಲ ಎಂದು ನನಗೆ ಖಚಿತವಾಗಿದೆ. ಅವರ ಪರವಾನಗಿಯನ್ನು ರದ್ದುಗೊಳಿಸಬೇಕು. ಇದು ಲಂಚದ ಮೂಲಕ ಇತ್ಯರ್ಥವಾಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಈ ಬೆನ್ನಲ್ಲೇ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ)ಇದಕ್ಕೆ ಪ್ರತಿಕ್ರಿಯಿಸಿದ್ದು, ‘ಅಹಾರ ಪೂರೈಸಿದವರಿಗೆ 10 ಲಕ್ಷ ರುಪಾಯಿಗಳ ಭಾರೀ ದಂಡ ಮತ್ತು ಒಪ್ಪಂದ ಮುಕ್ತಾಯದ ಸೂಚನೆ ನೀಡಲಾಗಿದೆ. ಅಡುಗೆ ಮನೆಯನ್ನು ಸೀಲ್‌ ಮಾಡಲಾಗಿದೆ. ಅನಾನುಕೂಲತೆಗೆ ವಿಷಾದಿಸುತ್ತೇವೆ’ ಎಂದಿದೆ.ಕಳೆದ ತಿಂಗಳು ಪಟನಾದಿಂದ ಟಾಟಾ ನಗರಕ್ಕೆ ಸಂಚರಿಸುತ್ತಿದ್ದ ರೈಲಿನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೋಮಾದಲ್ಲಿ ಮೊಜ್ತಬಾ, ಕೋಂ ನಗರದಲ್ಲಿ ಚಿಕಿತ್ಸೆ
ಕೋಲ್ಕತಾ ಮೇಲೆ ದಾಳಿ ಮಾಡಿದರೆ ಪಾಕ್ ತುಂಡು ತುಂಡು: ರಾಜನಾಥ್‌