ಎಲಾನ್‌ ಮಸ್ಕ್‌ ತಾಯಿ ಜತೆ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಸಿದ್ಧಿವಿನಾಯಕ ಮಂದಿರ ಭೇಟಿ

KannadaprabhaNewsNetwork | Updated : Apr 22 2025, 05:57 AM IST

ಸಾರಾಂಶ

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಂಡಿಸ್‌ ಅವರು, ತಮ್ಮ ಆಪ್ತರಾಗಿರುವ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ತಾಯಿ ಮಾಯೆ ಮಸ್ಕ್‌ ಅವರೊಂದಿಗೆ ಈಸ್ಟರ್‌ನಂದು ನಗರದ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.

ಮುಂಬೈ: ಬಾಲಿವುಡ್‌ ನಟಿ ಜಾಕ್ವೆಲಿನ್‌ ಫೆರ್ನಾಡಿಸ್‌ ಅವರು, ತಮ್ಮ ಆಪ್ತರಾಗಿರುವ ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ತಾಯಿ ಮಾಯೆ ಮಸ್ಕ್‌ ಅವರೊಂದಿಗೆ ಈಸ್ಟರ್‌ನಂದು ನಗರದ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಭೇಟಿಯನ್ನು ಜಾಕ್ವೆಲಿನ್‌, ‘ಸುಂದರ ಅನುಭವ’ ಎಂದು ಬಣ್ಣಿಸಿದ್ದು, ‘ಮಾಯೆಯಿಂದ ನಾನು, ವಯಸ್ಸು ನಮ್ಮ ಕನಸು ಮತ್ತು ಗುರಿಗಳನ್ನು ವ್ಯಾಖ್ಯಾನಿಸಬಾರದು ಎಂಬುದನ್ನು ಕಲಿತೆ’ ಎಂದರು. ಮಾಯೆ ತಮ್ಮ ಪುಸ್ತಕವಾದ ‘ಅ ವುಮನ್‌ ಮೇಕ್ಸ್‌ ಅ ಪ್ಲಾನ್‌’(ಮಹಿಳೆ ಮಾಡಿದ ಯೋಜನೆ)ನ ಹಿಂದಿ ಆವೃತ್ತಿಯ ಬಿಡುಗಡೆಗೆ ಭಾರತಕ್ಕೆ ಆಗಮಿಸಿದ್ದಾರೆ. ಇತ್ತೀಚೆಗೆ ತಮ್ಮ 77ನೇ ಜನ್ಮದಿನವನ್ನೂ ಮುಂಬೈನಲ್ಲೇ ಆಚರಿಸಿಕೊಂಡಿದ್ದರು.

₹1 ಲಕ್ಷದತ್ತ ಚಿನ್ನ ದಾಪುಗಾಲು: 99,800 ರು.ಗೆ ನೆಗೆತ

ನವದೆಹಲಿ: ವಿಶ್ವದ ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ-ಚೀನಾಗಳ ನಡುವೆ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಿನಲ್ಲಿ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 1 ಲಕ್ಷ ರು. ತಲುಪುವತ್ತ ದಾಪುಗಾಲು ಹಾಕುತ್ತಿದೆ.ಸೋಮವಾರ ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,650 ರು. ಏರಿಕೆಯಾಗಿ 99,800 ರು. ತಲುಪಿದೆ. ಅತ್ತ ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 1,600 ರು. ಏರಿದ್ದು, 99,300 ರು.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ 500 ರು. ಏರಿಕೆಯಾಗಿ ಕೆ.ಜಿ.ಗೆ 98,500 ರು. ಆಗಿದೆ.ಶುಕ್ರವಾರ ಶೇ.99.9 ಶುದ್ಧತೆ ಚಿನ್ನದ ಬೆಲೆ 20 ರು.ನಷ್ಟು ಕುಸಿದು 98,150 ರು. ಆಗಿತ್ತು ಹಾಗೂ 99.5 ಶುದ್ಧತೆಯ ಹೊನ್ನಿನ ಬೆಲೆ ಕುಸಿದು, 97,700 ರು.ಗೆ ತಲುಪಿತ್ತು.

ಸತತ 5ನೇ ದಿನ ಸೆನ್ಸೆಕ್ಸ್ ಜಿಗಿತ: 855 ಅಂಕ ಏರಿಕೆ

ಮುಂಬೈ: ವಿದೇಶಿ ನಿಧಿಯ ಒಳಹರಿವಿನಿಂದಾಗಿ ದೇಶದ ಷೇರು ಮಾರುಕಟ್ಟೆಗಳು ಸತತ 5ನೇ ದಿನವೂ ಏರುಗತಿಯಲ್ಲೇ ಮುಂದುವರಿದಿದ್ದು, ಸೋಮವಾರ ಶೇ.1ರಷ್ಟು ಏರಿಕೆ ದಾಖಲಿಸಿವೆ. 5 ದಿನಗಳಲ್ಲಿ ಹೂಡಿಕೆದಾರರ ಸಂಪತ್ತು 32 ಲಕ್ಷ ಕೋಟಿ ರು.ಗಳಷ್ಟು ಹೆಚ್ಚಾಗಿದೆ.ಸೋಮವಾರ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 855.30 ಅಂಶ (ಶೇ.1.09) ಏರಿಕೆಯಾಗಿ, 79,408.50ಕ್ಕೆ ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 273.90 ಅಂಶ (ಶೇ.1.37) ಏರಿಕೆಯಾಗಿ, 24,125.55ಕ್ಕೆ ಸ್ಥಿರಗೊಂಡಿತು.ಟೆಕ್ ಮಹೀಂದ್ರಾ, ಪವರ್ ಗ್ರಿಡ್, ಇನ್ಫೋಸಿಸ್ ಕಂಪನಿಗಳ ಷೇರು ಮೌಲ್ಯದಲ್ಲಿ ಏರಿಕೆಯಾದರೆ, ಅದಾನಿ ಪೋರ್ಟ್ಸ್, ಏಷಿಯನ್ ಪೇಂಟ್ಸ್ ಮೌಲ್ಯದಲ್ಲಿ ಇಳಿಕೆಯಾಯಿತು.

ಬಂಧುಗಳ ಜತೆ ಮಾತಿಗೆ ಅವಕಾಶ ಕೋರಿ ಉಗ್ರ ರಾಣಾ ಕೋರ್ಟ್‌ಗೆ

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ವಶದಲ್ಲಿರುವ 26/11 ಮುಂಬೈ ದಾಳಿಯ ಆರೋಪಿ ತಹಾವುರ್ ರಾಣಾ ತನ್ನ ಕುಟುಂಬಸ್ಥರೊಂದಿಗೆ ಮಾತನಾಡಲು ಅವಕಾಶ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾನೆ.ಏ.19ರಂದು ರಾಣಾ ತನ್ನ ವಕೀಲರ ಮೂಲಕ ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಅವರಿಗೆ ಅರ್ಜಿ ಸಲ್ಲಿಸಿದ್ದು, ಏ.23ರೊಳಗೆ ಉತ್ತರ ಸಲ್ಲಿಸುವಂತೆ ನ್ಯಾಯಾಧೀಶರು ಎನ್‌ಐಎಗೆ ನಿರ್ದೇಶನ ನೀಡಿದ್ದಾರೆ.ಏ.10ರಂದು ಆರೋಪಿಯನ್ನು 18 ದಿನ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು.

ಹಸೀನಾ ರಾಷ್ಟ್ರೀಯ ಗುರುತ ಪತ್ರ ರದ್ದು

ಢಾಕಾ: ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಇಂಟರ್‌ಪೋಲ್‌ ರೆಡ್‌ಕಾರ್ನರ್‌ ನೋಟಿಸ್‌ಗೆ ಕೋರಿದ್ದ ಬಾಂಗ್ಲಾ ಮಧ್ಯಂತರ ಸರ್ಕಾರ, ಈಗ ಅವರ ರಾಷ್ಟ್ರೀಯ ಗುರುತು ಪತ್ರವನ್ನು ರದ್ದುಪಡಿಸಿದೆ. ಅವರ 10 ಬೆಂಬಲಿಗರ ಗುರುತು ಪತ್ರವೂ ರದ್ದಾಗಿದೆ ಎಂದು ಬಾಂಗ್ಲಾ ಚುನಾವಣಾ ಆಯೋಗ ಹೇಳಿದೆ.

Share this article