ಉದ್ಯಮಿ ಗೌತಮ್ ಅದಾನಿ ವಿರುದ್ಧದ ಸೌರ ವಿದ್ಯುತ್ ಹಗರಣ ತನಿಖೆ ಅಮೆರಿಕದಲ್ಲಿ ಆರಂಭವಾದ ಬೆನ್ನಲ್ಲೇ ಅದಾನಿ ಗ್ರೂಪ್ ಜತೆ ಮಾಡಿಕೊಂಡಿರುವ ಒಪ್ಪಂದಗಳ ಮರುಪರಿಶೀಲನೆಗೆ ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ನಿರ್ಧರಿಸಿದೆ.
ಢಾಕಾ : ಉದ್ಯಮಿ ಗೌತಮ್ ಅದಾನಿ ವಿರುದ್ಧದ ಸೌರ ವಿದ್ಯುತ್ ಹಗರಣ ತನಿಖೆ ಅಮೆರಿಕದಲ್ಲಿ ಆರಂಭವಾದ ಬೆನ್ನಲ್ಲೇ ಅದಾನಿ ಗ್ರೂಪ್ ಜತೆ ಮಾಡಿಕೊಂಡಿರುವ ಒಪ್ಪಂದಗಳ ಮರುಪರಿಶೀಲನೆಗೆ ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ನಿರ್ಧರಿಸಿದೆ.
ಇನ್ನೊಂದೆಡೆ ಅದಾನಿ ಜತೆಗಿನ ವಿದ್ಯುತ್ ಡೀಲ್‌ಗಳ ತನಿಖೆಗೆ ಬಾಂಗ್ಲಾದೇಶ ಹೈಕೋರ್ಟ್ ಆದೇಶಿಸಿದೆ.ಬಾಂಗ್ಲಾದಲ್ಲಿ ಶೇಖ್ ಹಸೀನಾ ಅಧಿಕಾರಾವಧಿ ವೇಳೆ ಅದಾನಿ ಜತೆ 7 ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇವು ವಿದ್ಯುತ್, ಕಲ್ಲಿದ್ದಲು ವಲಯಕ್ಕೆ ಸಂಬಂಧಿಸಿದ ಒಪ್ಪಂದಗಳು. ಆದರೆ ಒಪ್ಪಂದ ಮಾಡಿಕೊಳ್ಳುವಲ್ಲಿ ವ್ಯಾಪಕ ನಿಯಮ ಉಲ್ಲಂಘನೆ ನಡೆದಂತಿದೆ ಎಂದು ರಾಷ್ಟ್ರೀಯ ವಿದ್ಯುತ್ ಹಾಗೂ ಖನಿಜ ಸಂಪನ್ಮೂಲ ಪರಿಶೀಲನಾ ಸಮಿತಿ ಹೇಳಿದೆ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಶಿಫಾರಸು ಮಾಡಿದೆ.ಇತ್ತೀಚೆಗೆ ಕೀನ್ಯಾ ಕೂಡ ಅದಾನಿ ಜತೆ ಒಪ್ಪಂದ ರದ್ದು ಮಾಡಿತ್ತು.
ತನಿಖೆಗೆ ಕೋರ್ಟ್ ಸೂಚನೆ:
ಈ ನಡುವೆ, ಅದಾನಿ ಅವರು ಬಾಂಗ್ಲಾಗೆ ವಿದ್ಯುತ್ ಪೂರೈಸುವ ಡೀಲ್‌ನಲ್ಲಿ ಅಕ್ರಮ ನಡೆದಿದೆ ಎಂದು ಸಲ್ಲಿಕೆ ಆಗಿದ್ದ ದೂರು ಆಧರಿಸಿ ಡೀಲ್ ತನಿಖೆಗೆ ಬಾಂಗ್ಲಾದೇಶ ಹೈಕೋರ್ಟ್ ಆದೇಶಿಸಿದೆ. ಉನ್ನತ ಮಟ್ಟದ ಸಮಿತಿ ಸಭೆ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.ಇತ್ತೀಚೆಗೆ ಬಾಂಗ್ಲಾದೇಶ ತನಗೆ ವಿದ್ಯುತ್ ಬಾಕಿ ನೀಡಿಲ್ಲ ಎಂದು ಆರೋಪಿಸಿದ್ದ ಅದಾನಿ ಸಮೂಹ ವಿದ್ಯುತ್ ಪೂರೈಕೆ ನಿಲ್ಲಿಸುವ ಬೆದರಿಕೆ ಹಾಕಿತ್ತು. ಜಾರ್ಖಂಡ್‌ನಿಂದ ಅದು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುತ್ತದೆ.
ಅಮೆರಿಕದಲ್ಲಿ ದೋಷಾರೋಪ ಪ್ರಕರಣದ ಬಗ್ಗೆ ಅದಾನಿ ತನಿಖೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಕೆ
ನವದೆಹಲಿ: ಸೌರ ವಿದ್ಯುತ್ ಡೀಲ್ ಕುದುರಿಸಲು ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಭಾರತದಲ್ಲಿ 5 ರಾಜ್ಯಗಳ ಅಧಿಕಾರಿಗಳಿಗೆ ಲಂಚ ನೀಡಿದೆ ಎಂದು ಅಮೆರಿಕದ ಕೋರ್ಟ್‌ನಲ್ಲಿ ಪ್ರಕರಣ ದಾಖಲಾದಂತೆ, ಭಾರತದಲ್ಲೂ ಆ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದೊಂದು ಗಂಭೀರ ಆರೋಪದ ಪ್ರಕರಣ. ಹೀಗಾಗಿ ಭಾರತದಲ್ಲಿ ನಡೆದ ಈ ಪ್ರಕರಣದ ಕುರಿತು ಭಾರತದ ಅಧಿಕಾರಿಗಳಿಂದಲೇ ತನಿಖೆಗೆ ಆದೇಶಿಸಬೇಕು ಎಂದು ವಕೀಲ ವಿಶಾಲ್ ತಿವಾರಿ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ‘ಪ್ರಕರಣದ ಕುರಿತು ಸೆಬಿ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಬೇಕು. ಈ ಹಿಂದಿನ ಶಾರ್ಟ್ ಸೆಲ್ಲಿಂಗ್ ಆರೋಪ ಹಾಗೂ ಇಂದು ವಿದೇಶಿಗರು ಮಾಡುತ್ತಿರುವ ಆಪಾದನೆಗಳಿಗಿರುವ ಸಂಬಂಧದ ಬಗ್ಗೆ ಸ್ಪಷ್ಟತೆಯಿಲ್ಲ. ಹೂಡಿಕೆದಾರರ ನಂಬಿಕೆ ಉಳಿಸಿಕೊಳ್ಳಲು ತನಿಖೆ ಅಗತ್ಯ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.