ಅಯೋಧ್ಯೆ ಆಯ್ತು ಈಗ ಬದರೀ ದೇಗುಲದಲ್ಲೂ ದೇಣಿಗೆ ಅಕ್ರಮ?

Published : Jul 05, 2026, 07:34 AM IST
  badrinath temple

ಸಾರಾಂಶ

ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣ ದಿನಕ್ಕೊಂದೊಂದು ಸ್ಫೋಟಕ ಮಾಹಿತಿ ಬಿಚ್ಚಿಡುತ್ತಿರುವ ನಡುವೆಯೇ ಉತ್ತರಾಖಂಡದ ಬದರೀನಾಥ ದೇವಾಲಯದಲ್ಲೂ ಇಂತಹ ಅನಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

 ಡೆಹ್ರಾಡೂನ್‌: ಅಯೋಧ್ಯೆ ರಾಮಮಂದಿರದ ಹುಂಡಿ ಹಣ ಕಳವು ಪ್ರಕರಣ ದಿನಕ್ಕೊಂದೊಂದು ಸ್ಫೋಟಕ ಮಾಹಿತಿ ಬಿಚ್ಚಿಡುತ್ತಿರುವ ನಡುವೆಯೇ ಉತ್ತರಾಖಂಡದ ಬದರೀನಾಥ ದೇವಾಲಯದಲ್ಲೂ ಇಂತಹ ಅನಾಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದರ ಬೆನ್ನಲ್ಲೇ ದೇಗುಲದ ಆಡಳಿತ ಮಂಡಳಿಯಾದ ಬದರೀನಾಥ ಕೇದಾರ ದೇವಾಲಯ ಸಮಿತಿ (ಬಿಕೆಟಿಸಿ) ಈ ಕುರಿತು ತನಿಖೆಗೆ ಆದೇಶಿಸಿದೆ.

ರಾಮಮಂದಿರದ ಕಾಣಿಕೆಗೆ ದೇವಸ್ಥಾನದ ಸಿಬ್ಬಂದಿಯೇ ಕನ್ನ ಹಾಕಿದ್ದು ಬೆಳಕಿಗೆ ಬರುತ್ತಿದ್ದಂತೆ, ಕಾಣಿಕೆ ಸಂಗ್ರಹ, ನಿರ್ವಹಣೆಯ ಕಠಿಣ ಮೇಲ್ವಿಚಾರಣೆ ಮಾಡುವಂತೆ ಜು.2ರಂದು ಬಿಕೆಟಿಸಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಭೈರವ ಸೇನಾ ಎಂಬ ಸಂಘಟನೆಯು, ‘ಬದರೀನಾಥ ದೇವಸ್ಥಾನಕ್ಕೆ ಬರುತ್ತಿರುವ ಕಾಣಿಕೆ ಮತ್ತು ದೇಣಿಗೆಯನ್ನು ಬಿಕೆಟಿಸಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರ ಆಪ್ತ ಕಾರ್ಯದರ್ಶಿ ಎಗರಿಸುತ್ತಿದ್ದಾರೆ’ ಎಂದು ಬಿಕೆಟಿಸಿ ಸಿಇಒ ಸೋಹನ್‌ ಸಿಂಗ್‌ ರಾಂಗಡ್‌ಗೆ ಶುಕ್ರವಾರ ಬರೆದ ಪತ್ರದಲ್ಲಿ ಆರೋಪಿಸಿತ್ತು. ಅತ್ತ ಬಿಕೆಟಿಸಿಯ ಸ್ಥಾಪಕ ಸದಸ್ಯರಾದ ಸಂದೀಪ್ ಖತ್ರಿ ಕೂಡ ಇಂತಹ ಕೃತ್ಯ ನಡೆಯುತ್ತಿರುವ ಬಗ್ಗೆ ದ್ವಿವೇದಿಯವರಿಗೆ ಮೊದಲೇ ಎಚ್ಚರಿಸಲಾಗಿತ್ತು ಎಂದಿದ್ದಾರೆ.

ತನಿಖೆಗೆ ಆದೇಶ:

ಇದಕ್ಕೆ ಪ್ರತಿಕ್ರಿಯಿಸಿರುವ ದ್ವಿವೇದಿ, ಕಾಣಿಕೆ ಕಳವಿನ ಆರೋಪ ಹೊತ್ತಿರುವಾತ ತಮ್ಮ ಆಪ್ತ ಕಾರ್ಯದರ್ಶಿ ಅಲ್ಲ ಎಂದಿದ್ದಾರೆ. ‘ಆತ ಬಿಕೆಟಿಸಿಯ ಸಾಮಾನ್ಯ ಉದ್ಯೋಗಿಯಾಗಿದ್ದು, ಸಮಿತಿಯ ಈ ಹಿಂದಿನ 3 ಅಧ್ಯಕ್ಷರ ಆಪ್ತ ಸಹಾಯಕನಾಗಿದ್ದ. ಒಂದೊಮ್ಮೆ ಆತನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಆರೋಪಗಳು ಸಾಬೀತಾದಲ್ಲಿ, ನಿಯಮದನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದಿರುವ ಅವರು, ತನಿಖೆಗೆ ಆದೇಶ ನೀಡಿದ್ದಾರೆ. ಅತ್ತ ದೂರು ಬಂದ ತಕ್ಷಣ ಸಿಸಿಟೀವಿ ಪರಿಶೀಲಿಸಲಾಯಿತಾದರೂ, ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ ಎಂದು ರಾಂಗಡ್‌ ಹೇಳಿದ್ದಾರೆ. ಜತೆಗೆ ಸಂಬಂಧಿಸಿದ ಸಿಬ್ಬಂದಿಯಿಂದ ಸ್ಪಷ್ಟನೆಯನ್ನು ಕೇಳಲಾಗಿದ್ದು, ತನಿಖೆಗೆ ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ.

ದೇಗುಲದ ಆದಾಯ ಎಷ್ಟು?:

ಬದರೀನಾಥ, ಕೇದಾರನಾಥ ಹಾಗೂ ಇನ್ನೂ 47 ದೇವಸ್ಥಾನಗಳ ಮೇಲ್ವಿಚಾರಣೆ ಮಾಡುವ ಬಿಕೆಟಿಸಿಯ ಸಿಇಒ ನೀಡಿರುವ ಮಾಹಿತಿ ಪ್ರಕಾರ, ವಾರ್ಷಿಕವಾಗಿ ಬದರೀನಾಥ ದೇಗುಲಕ್ಕೆ 50-80 ಕೋಟಿ ರು. ದೇಣಿಗೆ ಹರಿದುಬರುತ್ತದೆ. ಸದ್ಯ ನಡೆಯುತ್ತಿರುವ ಚಾರ್‌ಧಾಮ್‌ ಯಾತ್ರೆಯಿಂದಲೇ 70 ಕೋಟಿ ರು. ಸಂಗ್ರಹವಾಗಿದೆ. ಅಂತೆಯೇ, ಅತಿಥಿಗೃಹಗಳಿಂದಲೂ ಆದಾಯ ಬರುತ್ತದೆ.

ಬ್ಯಾಂಕ್‌ ಸಿಬ್ಬಂದಿಯ ಸಮ್ಮುಖದಲ್ಲಿ ಇದರ ಎಣಿಕೆಯನ್ನು 4-5 ಬಿಕೆಟಿಸಿ ಸಿಬ್ಬಂದಿ ಮಾಡುತ್ತಾರೆ. ಭಕ್ತರು ಬಯಸಿದಲ್ಲಿ, ಅವರ ಗುರುತಿನ ದಾಖಲೆಗಳ ಪರಿಶೀಲನೆಯ ನಂತರ ಅವರಿಗೂ ಈ ಕೆಲಸ ಮಾಡಲು ಅನುಮತಿಸಲಾಗುತ್ತದೆ. ಎಣಿಕೆಯಾಗುತ್ತಿದ್ದಂತೆ ನಗದನ್ನು ಬ್ಯಾಂಕ್‌ ಸಿಬ್ಬಂದಿಗೆ ಒಪ್ಪಿಸಲಾಗುತ್ತದೆ ಹಾಗೂ ಅವರು ಇನ್ನೊಮ್ಮೆ ಎಣಿಕೆ ಮಾಡುತ್ತಾರೆ.

ಏನಿದು ಆರೋಪ?

- ಬದರೀನಾಥ, ಕೇದಾರನಾಥ ಸೇರಿ 47 ದೇಗುಲಗಳ ಮೇಲ್ವಿಚಾರಣೆಯನ್ನು ಬಿಕೆಟಿಸಿ ಮಾಡುತ್ತದೆ

- ಬಿಕೆಟಿಸಿ ಅಂದರೆ- ಬದರೀನಾಥ ಕೇದಾರ ದೇವಾಲಯ ಸಮಿತಿ. ಈಗ ಈ ಸಮಿತಿ ವಿರುದ್ಧ ಆರೋಪ

- ಸಮಿತಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬದರೀನಾಥ ದೇಗುಲದಲ್ಲಿ ಕಾಣಿಕೆ ಎಗರಿಸಿದ್ದಾರೆ: ದೂರು

- ಭೈರವಾ ಸೇನಾ ಸಂಘಟನೆ ಪತ್ರ. ಇದರ ಬೆನ್ನಲ್ಲೇ ಅಧ್ಯಕ್ಷರಿಂದ ದೇಣಿಗೆ ಅಕ್ರಮದ ತನಿಖೆಗೆ ಆದೇಶ

- ಆರೋಪ ಹೊತ್ತಿರುವಾದ ಸಮಿತಿಯ ಸದಸ್ಯ, 3 ಅಧ್ಯಕ್ಷರ ಆಪ್ತ ಸಹಾಯಕ ಎಂದು ಅಧ್ಯಕ್ಷರಿಂದ ಹೇಳಿಕೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆಸ್ಟ್ರೇಲಿಯಾ ಭೇಟಿಗೂ ಮುನ್ನ ಪಿಎಂ ಮೋದಿಗೆ ಕೊಲೆ ಬೆದರಿಕೆ: ತನಿಖೆ
ಪತಿ ಕೊಂದು ಬಾತ್‌ರೂಂ ಟೈಲ್ಸ್‌ ಅಡಿ ಹೂತ ಪತ್ನಿ