ಲಖನೌ: ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಕೂಟದ ಪಕ್ಷಗಳಿಗೆ ಭಾರೀ ಪರಾಭವ ಉಂಟಾದ ಬೆನ್ನಲ್ಲೇ, ಚುನಾವಣಾ ರಣನೀತಿ ಸಂಸ್ಥೆ ಐ-ಪ್ಯಾಕ್ ಜೊತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸಂಬಂಧ ಕಡಿದುಕೊಂಡಿದೆ.
ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಸ್ಥಾಪಿಸಿದ್ದ ಹಾಗೂ ಈಗ ವಿನೇಶ್ ಚಂದೇಲ್ ಉಸ್ತುವಾರಿಯಲ್ಲಿದ್ದ ಐ-ಪ್ಯಾಕ್, ಎಸ್‌ಪಿ ಜತೆ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಸಲಹೆ ನೀಡುವ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕೂ ಮುನ್ನ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪರ ರಣನೀತಿ ಹೆಣೆದಿತ್ತು. ಆದರೆ ಅದರ ರಣತಂತ್ರ ವಿಫಲವಾಗಿದೆ. ಆದ ಕಾರಣ ಯಾದವ್ ಈ ನಿರ್ಧಾರ ಘೋಷಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ‘ಶೋಟೈಂ’ ಎಂಬ ಸಂಸ್ಥೆ ಜತೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಚುನಾವಣೆಗೂ ಮುನ್ನ ಬಂಗಾಳದಲ್ಲಿ ನಡೆದ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಐಪ್ಯಾಕ್ ಸ್ಥಾಪಕರಲ್ಲಿ ಒಬ್ಬರಾದ ವಿನೇಶ್ ಚಂದೇಲ್ ಬಂಧನವಾಗಿತ್ತು.