ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ಕನ್ನಡಿಗನ ಕಾಣಿಕೆ ಶ್ರಮ - ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಬಿನ್ನಡಿಯ ಯುವಕ

KannadaprabhaNewsNetwork |  
Published : May 07, 2026, 02:15 AM IST
Arun Binnadi

ಸಾರಾಂಶ

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಊಹಿಸಲಾದ್ಯ ರೀತಿಯಲ್ಲಿ ಗೆಲುವು ತನ್ನದಾಗಿಸಿಕೊಂಡ ಬಗ್ಗೆ ಎಲ್ಲರಲ್ಲಿ ಅಚ್ಚರಿ ಮೂಡಿರುವ ಹೊತ್ತಿನಲ್ಲೇ, ಇಂಥದ್ದೊಂದು ಗೆಲುವಿನಲ್ಲಿ ಕನ್ನಡಿಗ ಅರುಣ್‌ ಬಿನ್ನಡಿ ಅವರ ಪಾತ್ರವೂ ಬೆಳಕಿಗೆ ಬಂದಿದೆ.

 ಚಿಕ್ಕಮಗಳೂರು: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಊಹಿಸಲಾದ್ಯ ರೀತಿಯಲ್ಲಿ ಗೆಲುವು ತನ್ನದಾಗಿಸಿಕೊಂಡ ಬಗ್ಗೆ ಎಲ್ಲರಲ್ಲಿ ಅಚ್ಚರಿ ಮೂಡಿರುವ ಹೊತ್ತಿನಲ್ಲೇ, ಇಂಥದ್ದೊಂದು ಗೆಲುವಿನಲ್ಲಿ ಕನ್ನಡಿಗ ಅರುಣ್‌ ಬಿನ್ನಡಿ ಅವರ ಪಾತ್ರವೂ ಬೆಳಕಿಗೆ ಬಂದಿದೆ. ಕಳೆದ 6 ತಿಂಗಳಿನಿಂದ ಬಂಗಾಳದ ಗುಡ್ಡಗಾಡು ಪ್ರದೇಶಗಳಲ್ಲಿ ಬೀಡುಬಿಟ್ಟು ಅಲ್ಲೇ ಮನೆ ಮನೆ ಸುತ್ತಿ ಪ್ರಚಾರ ಮಾಡಿದ ತಂಡದ ಉಸ್ತುವಾರಿಯಾಗಿದ್ದ ಅರುಣ್‌ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಸಿಲಿಗುರಿ ಹೊಣೆ:

ಬಂಗಾಳದ ಚುನಾವಣೆಯಲ್ಲಿ ಅರುಣ್‌ಗೆ ಸಿಲಿಗುರಿ ನಾರ್ತ್ ಜೋನ್ ನ ಸಂಘಟನಾ ಪ್ರಭಾರಿಯಾಗಿ ಹೊಣೆಗಾರಿಕೆ ನೀಡಲಾಗಿತ್ತು. ಬಂಗಾಳದ ಕಠಿಣ ರಾಜಕೀಯ ಪರಿಸ್ಥಿತಿ ಮತ್ತು ಅಡೆತಡೆಗಳ ನಡುವೆಯೂ 6 ತಿಂಗಳು ಕಾಲ ತಮ್ಮ ತಂಡದೊಡಗೂಡಿ ತಳಮಟ್ಟದಲ್ಲಿ ಕೆಲಸ ಮಾಡಿದ ಅರುಣ್‌ ಮನೆ ಮನೆಗೂ ತೆರಳಿ ಪಕ್ಷವನ್ನು ಸಂಘಟಿಸಿದ್ದರು. ಸ್ಥಳೀಯ ಸಮಸ್ಯೆ ಅರಿತು, ಅವುಗಳಿಗೆ ತಕ್ಕಂತೆ ಅರುಣ್‌ ಗೆಲುವಿನ ಮಂತ್ರ ರೂಪಿಸಿದ್ದರು. ಅದು ಇದೀಗ ಉತ್ತಮ ಫಲಿತಾಂಶದ ರೂಪದಲ್ಲಿ ಪ್ರತಿಫಲಿಸಿದೆ.

ಹಿಂದೆಯೂ ಸಂಘಟನೆ: 

ಅರುಣ್ ಅವರ ಸಾಧನೆ ಕೇವಲ ಬಂಗಾಳಕ್ಕೆ ಸೀಮಿತವಾಗಿಲ್ಲ. 2019ರ ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಕ್ಷೇತ್ರದಲ್ಲಿನ ಪಕ್ಷದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಕೆಲಸ ಬಿಟ್ಟು ದೇಶಸೇವೆ:

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಯುವಕ ಅರುಣ್ ಅವರು ವೃತ್ತಿಯಲ್ಲಿ ಪ್ರತಿಭಾವಂತ ಎಂಜಿನಿಯರ್. ಆರಂಭದಲ್ಲಿ ಕೈತುಂಬಾ ಸಂಬಳ ಬರುವ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಆದರೆ, ದೇಶಸೇವೆ ಮತ್ತು ರಾಷ್ಟ್ರೀಯ ಸಿದ್ಧಾಂತದ ಮೇಲಿದ್ದ ಅತೀವ ಆಸಕ್ತಿಯಿಂದಾಗಿ ಆ ಉದ್ಯೋಗವನ್ನು ತ್ಯಜಿಸಿ, ಸಕ್ರಿಯ ರಾಜಕೀಯ ಸಂಘಟನೆಗೆ ಇಳಿದಿದ್ದರು.

ತವರಲ್ಲಿ ಸನ್ಮಾನ:

ಬಂಗಾಳದ ಯಶಸ್ಸಿನ ಬಳಿಕ ತವರು ಗ್ರಾಮ ಬಿನ್ನಡಿಗೆ ಆಗಮಿಸಿದ ಅರುಣ್ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಬುಧವಾರ ಸನ್ಮಾನಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೊರೋನಾ ರೀತಿ ‘ಹಂಟು ವೈರಸ್‌’ ಪತ್ತೆ: ಸೋಂಕಿಗೆ 3 ಬಲಿ
ಬಂಗಾಳ ಫಲಿತಾಂಶ ಬೆನ್ನಲ್ಲೇ ಐಪ್ಯಾಕ್‌ ಜತೆ ಎಸ್‌ಪಿ ನಂಟು ಕಟ್‌