ಟಿವಿಕೆಗೆ ಬೆಂಬಲ : ಕಾಂಗ್ರೆಸ್ ಘೋಷಣೆ

KannadaprabhaNewsNetwork |  
Published : May 07, 2026, 02:00 AM ISTUpdated : May 07, 2026, 04:43 AM IST
TVK

ಸಾರಾಂಶ

ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬುಧವಾರ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

 ಚೆನ್ನೈ :  ಡಿಎಂಕೆಯ ದೀರ್ಘಕಾಲದ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವು, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬುಧವಾರ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ನಟ-ರಾಜಕಾರಣಿ ವಿಜಯ್ ಅವರ ಟಿವಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.

ಇದೇ ವೇಳೆ, ತಮಿಳುನಾಡಿನ ತನ್ನ 33 ವರ್ಷದ ಮಿತ್ರ ಪಕ್ಷವಾದ ಡಿಎಂಕೆ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದೆ.ತಮಿಳುನಾಡು ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಟಿವಿಕೆಗೆ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲ ನೀಡಲು ನಿರ್ಧರಿಸಿವೆ ಎಂದು ಎಐಸಿಸಿ ತಮಿಳುನಾಡು ಉಸ್ತುವಾರಿ ಗಿರೀಶ್ ಛೋಡಂಕರ್ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ 5 ಶಾಸಕರನ್ನು ಹೊಂದಿದೆ. ಸರ್ಕಾರ ರಚನೆಗೆ 10 ಶಾಸಕರ ಕೊರತೆ ಟಿವಿಕೆಗೆ ಇದ್ದು, ಕಾಂಗ್ರೆಸ್ ಬೆಂಬಲದೊಂದಿಗೆ ಅರ್ಧ ಅವಶ್ಯಕತೆ ಪೂರೈಸಿದಂತಾಗಿದೆ. ಈ ಘೋಷಣೆ ಬಳಿಕ ಐದೂ ಕಾಂಗ್ರೆಸ್‌ ಶಾಸಕರು ವಿಜಯ್‌ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಬೆಂಬಲ ಪ್ರಕಟಿಸಿದರು.

ಷರತ್ತು ಅನ್ವಯ:

‘ಭಾರತದ ಸಂವಿಧಾನದಲ್ಲಿ ನಂಬಿಕೆ ಇಡದ ಕೋಮು ಶಕ್ತಿಗಳನ್ನು ಟಿವಿಕೆ ಈ ಮೈತ್ರಿಕೂಟದಿಂದ ದೂರ ಇಡಬೇಕು. ಈ ಷರತ್ತಿನ ಮೇಲೆ ನಮ್ಮ ಬೆಂಬಲ ಅವಲಂಬಿತವಾಗಿದೆ’ ಎಂದು ಹೇಳಿದರು.

ಇದಲ್ಲದೆ, ‘ಈ ಮೈತ್ರಿಕೂಟವು ಈ ಸರ್ಕಾರ ರಚನೆಗೆ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆಗಳು, ಲೋಕಸಭೆ ಮತ್ತು ರಾಜ್ಯಸಭೆಗೆ ಭವಿಷ್ಯದ ಚುನಾವಣೆಗಳಿಗೂ ಮುಂದುವರಿಯಲಿದೆ’ ಎಂದರು.

‘ಟಿವಿಕೆ ಮತ್ತು ತಮಿಳುನಾಡು ಕಾಂಗ್ರೆಸ್ ನಡುವಿನ ಮೈತ್ರಿಯು ಕಾಮರಾಜ್ ಅವರ ತಮಿಳುನಾಡಿನ ವೈಭವದ ದಿನಗಳನ್ನು ಮರಳಿ ತರಲು ಶ್ರಮಿಸುತ್ತದೆ, ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ಆದರ್ಶಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಂವಿಧಾನಿಕ ಆದರ್ಶಗಳಿಗೆ ಬಲವಾದ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸಲಿವೆ’ ಎಂದು ಛೋಡಂಕರ್ ನುಡಿದರು.

ಮೊದಲೇ ಮೈತ್ರಿಗೆ ಆಗ್ರಹ ಇತ್ತು:

ಈ ನಡುವೆ, ಕಾಂಗ್ರೆಸ್‌ ನಾಯಕ ಕಾರ್ತಿ ಚಿದಂಬರಂ ಮಾತನಾಡಿ, ‘ಚುನಾವಣೆಗೆ ಮುನ್ನ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದೊಳಗೆ ಧ್ವನಿಗಳು ಕೇಳಿಬಂದಿದ್ದವು. ಅದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.

ಅಣ್ಣಾ ಡಿಎಂಕೆಯಲ್ಲಿ ಒಡಕು? 

ಚೆನ್ನೈ: ಟಿವಿಕೆ ಜತೆ ಮೈತ್ರಿ ವಿಚಾರದಲ್ಲಿ ಅಣ್ಣಾ ಡಿಎಂಕೆಯಲ್ಲಿ ಒಡಕು ಉಂಟಾಗಿದೆ. ಅಣ್ಣಾ ಎಡಿಎಂಕೆಯ 35 ಶಾಸಕರು, ಅರ್ಥಾತ್‌ 3ನೇ ಎರಡರಷ್ಟು ಮಂದಿ ಟಿವಿಕೆ ಪರ ಒಲವು ತೋರಿದ್ದಾರೆ ಎಂದು ಗೊತ್ತಾಗಿದೆ. ಆದರೆ ಅವರ ಕೋರಿಕೆಯನ್ನು ಪಕ್ಷ ತಿರಸ್ಕರಿಸಿದೆ.

ಇವರು ರಾಜ್ಯಸಭಾ ನಾಯಕ ಸಿ.ವಿ. ಷಣ್ಮುಗಂ ಅವರ ಕಚೇರಿಯಲ್ಲಿ ನೆರೆದು ಸಭೆ ನಡೆಸಿದ್ದಾರೆ. ಟಿವಿಕೆ ಜತೆ ಕೈಜೋಡಿಸಿ ಸರ್ಕಾರದ ಭಾಗವಾಗುವ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಬಳಿಯೂ ವಿನಂತಿಸಿದ್ದಾರೆ ಎನ್ನಲಾಗಿದೆ. ಆದರೆ ಇದರ ಬೆನ್ನಲ್ಲೇ ಮಾತನಾಡಿರುವ ಅಣ್ಣಾಡಿಎಂಕೆ ನಾಯಕ ಕೆ.ಪಿ. ಮುನುಸ್ವಾಮಿ, ಟಿವಿಕೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.ಹೀಗಾಗಿ ಷಣ್ಮುಗಂ ಬಣ ಪಕ್ಷದ ನಿರ್ಧಾರವನ್ನು ಉಲ್ಲಂಘಿಸಲಿದೆಯಾ ಎಂಬುದೇ ಪ್ರಶ್ನೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕೊರೋನಾ ರೀತಿ ‘ಹಂಟು ವೈರಸ್‌’ ಪತ್ತೆ: ಸೋಂಕಿಗೆ 3 ಬಲಿ
ಬಂಗಾಳ ಫಲಿತಾಂಶ ಬೆನ್ನಲ್ಲೇ ಐಪ್ಯಾಕ್‌ ಜತೆ ಎಸ್‌ಪಿ ನಂಟು ಕಟ್‌