ಜೈಪುರ: ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ ಬೆನ್ನಲ್ಲೇ ಜೈಪುರದ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂಗೂ ಇಮೇಲ್ ಮುಖೇನ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ‘ಆಪರೇಶನ್ ಸಿಂದೂರ ಯಶಸ್ಸು ವಿರೋಧಿಸಿ ಸ್ಟೇಡಿಯಂ ಸ್ಫೋಟಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಮೇ 16 ರಂದು ಈ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಿಗದಿಯಾಗಿದೆ. ಅದಕ್ಕೂ ಮುನ್ನ ಬೆದರಿಕೆ ಬಂದಿದೆ.
ಈ ಬೆನ್ನಲ್ಲೇ ಪೊಲೀಸರು ಮತ್ತು ಬಾಂಬ್ ನಿಷ್ಕ್ರೀಯದ ದಳ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು, ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇಮೇಲ್ ವಿಳಾಸ ಪತ್ತೆಗಾಗಿ ತನಿಖೆ ಮುಂದುವರೆದಿದೆ.‘ಆಪರೇಷನ್ ಸಿಂದೂರದ ಯಶಸ್ಸಿನ ಕಾರಣಕ್ಕಾಗಿ ಸ್ಟೇಡಿಯಂನಲ್ಲಿ ಬಾಂಬ್ ಸ್ಫೋಟಿಸುತ್ತೇವೆ. ನಿಮ್ಮಿಂದ ಸಾಧ್ಯವಾದರೆ ಎಲ್ಲರನ್ನು ಉಳಿಸಿಕೊಳ್ಳಿ’ ಎಂದು ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.ಬುಧವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ಮತ್ತು ಚೆನ್ನೈ ನಡುವಿನ ಪಂದ್ಯದ ವೇಳೆ ಬಂಗಾಳ ಕ್ರಿಕೆಟ್‌ನ ಅಧಿಕೃತ ಖಾತೆಗೆ ಇದೇ ರೀತಿ ಇಮೇಲ್ ಸಂದೇಶ ಬಂದಿತ್ತು.
ಪಂಜಾಬ್ ಗಡಿಯಲ್ಲಿ ಪಾಕ್ ನುಸುಳುಕೋರ ಗುಂಡಿಕ್ಕಿ ಹತ್ಯೆ
ಅಮೃತಸರ: ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಯತ್ನಿಸುತ್ತಿದ್ದ ಪಾಕ್ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.ಬುಧವಾರ ಮಧ್ಯರಾತ್ರಿ ಇಲ್ಲಿನ ಫಿರೋಜ್‌ಪುರ ವಲಯದಲ್ಲಿ ಘಟನೆ ನಡೆದಿದೆ. ಪಾಕ್ ನುಸುಳುಕೋರ ಉದ್ದೇಶಪೂರ್ವಕವಾಗಿ ಕತ್ತಲೆಯಲ್ಲಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಈ ಕ್ರಮ ಕೈಗೊಂಡಿದೆ. ಶವವನ್ನು ಪಂಜಾಬ್ ಪೊಲೀಸರಿಗೆ ಗಡಿ ಭದ್ರತಾ ಪಡೆ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.
ಪಂಜಾಬ್ ಗಡಿಯಲ್ಲಿ ಬಿಎಸ್‌ಎಫ್ ಸಂಜೆ ಕವಾಯತು ರದ್ದು
ನವದೆಹಲಿ/ ಅಮೃತಸರ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬೆನ್ನಲ್ಲೇ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಪಂಜಾಬ್‌ನ ಪಾಕ್ ಗಡಿಯಲ್ಲಿನ ಮೂರು ಚೆಕ್‌ಪೋಸ್ಟ್‌ಗಳಲ್ಲಿ ನಿತ್ಯ ನಡೆಯುತ್ತಿದ್ದ ಸಂಜೆಯ ಕವಾಯತನ್ನು (ರೀಟ್ರೀಟ್ ಸೆರೆಮನಿ) ಮುಂದಿನ ಆದೇಶದ ತನಕ ನಿಲ್ಲಿಸುತ್ತಿರುವುದಾಗಿ ಬಿಎಸ್‌ಎಫ್ ಪಡೆ ಹೇಳಿದೆ.
ಆಪರೇಷನ್ ಸಿಂದೂರ ಕಾರ್ಯಾಚರಣೆಯ ಒಂದು ದಿನದ ಬಳಿಕ ಗಡಿ ಭದ್ರತಾ ಪಡೆ ಈ ನಿರ್ಧಾರಕ್ಕೆ ಬಂದಿದ್ದು, ‘ಮುಂದಿನ ಆದೇಶದವರೆಗೆ ಮೂರು ಜಂಟಿ ಚೆಕ್‌ಪೋಸ್ಟ್‌ಗಳಲ್ಲಿ( ಜಿಸಿಪಿ) ಯಾವುದೇ ಕವಾಯತು ಪ್ರದರ್ಶನ ಇರುವುದಿಲ್ಲ. ಭದ್ರತಾ ದೃಷ್ಟಿಯಿಂದ ಯಾವುದೇ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ’ ಎಂದು ಪ್ರಕಟಣೆ ಹೊರಡಿಸಿದೆ.
ಪಾಕಿಸ್ತಾನದ ವಾಘಾ ಎದುರಿನ ಅಟ್ಟಾರಿ( ಅಮೃತಸರ), ಫಿರೋಜ್‌ಪುರ ಜಿಲ್ಲೆಯ ಹುಸೇನಿವಾಲಾ ಮತ್ತು ಫಜಿಲ್ಕಾ ಜಿಲ್ಲೆಯ ಸದ್ಕಿ ಚೆಕ್‌ಪೋಸ್ಟ್‌ಗಳಲ್ಲಿ ಕವಾಯತು ರದ್ದುಪಡಿಸಲಾಗಿದೆ.