ಕಾಂಗ್ರೆಸ್ ಪಕ್ಷವು ಮಿತ್ರ ಪಕ್ಷಗಳನ್ನು ನಿರ್ಲಕ್ಷಿಸಿ ಹರ್ಯಾಣದಲ್ಲಿ ಸೋಲುತ್ತಿದ್ದಂತೆಯೇ ಇಂಡಿಯಾ ಕೂಟದ ಹಲವು ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಪಕ್ಷದ ಮೇಲೆ ತಿರುಗಿಬಿದ್ದಿವೆ.
ನವದೆಹಲಿ/ಮುಂಬೈ/ಕೋಲ್ಕತಾ: ಕಾಂಗ್ರೆಸ್ ಪಕ್ಷವು ಮಿತ್ರ ಪಕ್ಷಗಳನ್ನು ನಿರ್ಲಕ್ಷಿಸಿ ಹರ್ಯಾಣದಲ್ಲಿ ಸೋಲುತ್ತಿದ್ದಂತೆಯೇ ಇಂಡಿಯಾ ಕೂಟದ ಹಲವು ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯ ಪಕ್ಷದ ಮೇಲೆ ತಿರುಗಿಬಿದ್ದಿವೆ. ಗೆಲುವನ್ನು ಸೋಲನ್ನಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್‌ನಿಂದ ಕಲಿಯಬಹುದು ಎಂದು ವ್ಯಂಗ್ಯವಾಡಿರುವ ಮಿತ್ರಪಕ್ಷಗಳು, ‘ಕಾಂಗ್ರೆಸ್ ಈ ಸೋಲಿನಿಂದ ಪಾಠ ಕಲಿತು ಮೈತ್ರಿಧರ್ಮ ಪಾಲಿಸಬೇಕು ಎಂಬ ಪಾಠವನ್ನು ಈಗಲಾದರೂ ಕಲಿಯಲಿ’ ಎಂದು ತಿವಿದಿವೆ.
ಇನ್ನೊಂದು ಕಡೆ, ಉತ್ತರ ಪ್ರದೇಶದ ಕಾಂಗ್ರೆಸ್ ಮಿತ್ರಪಕ್ಷ ಸಮಾಜವಾದಿ ಪಾರ್ಟಿ (ಎಸ್ಪಿ), ಸದ್ಯದಲ್ಲೇ ಜರುಗಲಿರುವ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿಮಿತ್ತ ಏಕಪಕ್ಷೀಯವಾಗಿ 6 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಮೂಲಕ ಕಾಂಗ್ರೆಸ್ ತನಗೆ 5 ಸೀಟು ಬೇಕೇ ಬೇಕು ಎಂದು ಮಾಡಿದ್ದ ಮನವಿಯನ್ನು ನಿರಾಕರಿಸಿದೆ.
ಶಿವಸೇನೆ ಚಾಟಿ:
ಶಿವಸೇನೆ (ಉದ್ಧವ ಠಾಕ್ರೆ ಬಣ) ಮುಖವಾಣಿ ‘ಸಾಮ್ನಾ’ದಲ್ಲಿ ಸಂಪಾದಕೀಯ ಬರೆಯಲಾಗಿದ್ದು, ‘ರಾಜ್ಯ ನಾಯಕತ್ವದ ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರ’ದಿಂದಾಗಿ ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಅದು ಈ ಸೋಲಿನಿಂದ ಪಾಠ ಕಲಿಯಬೇಕು. ಗೆಲುವನ್ನು ಸೋಲನ್ನಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್‌ನಿಂದ ಕಲಿಯಬಹುದು’ ಎಂದು ಮಹಾರಾಷ್ಟ್ರದಲ್ಲಿನ ತನ್ನ ಮಿತ್ರಪಕ್ಷವಾದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದೆ.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ತನ್ನ ಕಾರ್ಯತಂತ್ರದ ಬಗ್ಗೆ ಯೋಚಿಸಬೇಕಾಗಿದೆ. ಏಕೆಂದರೆ ಬಿಜೆಪಿಯೊಂದಿಗೆ ಎಲ್ಲ ವಿಪಕ್ಷಗಳ ನೇರ ಹೋರಾಟವಿದೆ. ವಿಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಕೂಟ ದುರ್ಬಲಗೊಳ್ಳುತ್ತವೆ’ ಎಂದು ಹೇಳಿದರು.
ಶಿವಸೇನೆ ವಕ್ತಾರ ಸಂಜಯ ರಾವುತ್ ಮಾತನಾಡಿ, ‘ದುರ್ಬಲ ಇದ್ದ ಸ್ಥಳದಲ್ಲಿ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಸಹಾಯ ಕೇಳುತ್ತದೆ. ಪ್ರಬಲ ಇದ್ದ ಕಡೆ ನಿರ್ಲಕ್ಷಿಸಿಬಿಡುತ್ತದೆ’ ಎಂದಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ, ‘ರಾವುತ್‌ರ ಇಂಥ ಹೇಳಿಕೆ ಸಹಿಸಲ್ಲ’ ಎಂದಿದ್ದಾರೆ.
ಟಿಎಂಸಿ ಕಿಡಿ: ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಪ್ರತಿಕ್ರಿಯಿಸಿ, ‘ಅಹಂಕಾರದಿಂದ ವರ್ತಿಸುವುದು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಕೀಳಾಗಿ ನೋಡುವುದು ಕಾಂಗ್ರೆಸ್ ಪಕ್ಷದ ದುರಂತದ ಸೂತ್ರ’ ಎಂದು ಕಿಡಿಕಾರಿದ್ದಾರೆ.
ಆರ್‌ಜೆಡಿ ಬುದ್ಧಿಮಾತು:
‘ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು, ಹೊಂದಾಣಿಕೆಯ ರಾಜಕೀಯದತ್ತ ಗಮನಹರಿಸಬೇಕು. ಮೈತ್ರಿ ತತ್ವಗಳನ್ನು ಗೌರವಿಸಬೇಕು. ದೊಡ್ಡ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ಗೌರವಿಸಬೇಕು’ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಪ್ರೊ। ಸುಬೋಧ್ ಮೆಹ್ತಾ ಹೇಳಿದ್ದಾರೆ.
ಕಾಶ್ಮೀರದಲ್ಲಿ ಕಾಂಗ್ರೆಸ್ ಜತೆ ಈಗ ಅಧಿಕಾರ ಹಿಡಿದಿರುವ ನ್ಯಾಷನಲ್ ಕಾನ್ಫರೆನ್ಸ್‌ನ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿ, ‘ಕಾಂಗ್ರೆಸ್ ಹರ್ಯಾಣದಲ್ಲಿನ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಬುದ್ಧಿಮಾತು ಹೇಳಿದ್ದಾರೆ.