ಕೇಜ್ರಿ ಅರೆಸ್ಟ್‌ ಬೆನ್ನಲ್ಲೇ ಪಂಜಾಬ್‌ ಆಪ್‌ ಸರ್ಕಾರಕ್ಕೆ ಇದೀಗ ನಡುಕ!

KannadaprabhaNewsNetwork | Updated : Mar 24 2024, 01:18 PM IST

ಸಾರಾಂಶ

ಅರವಿಂದ ಕೇಜ್ರಿವಾಲ್‌ ಅವರ ಬಂಧನವಾದ ಬೆನ್ನಲ್ಲೇ, ಪಂಜಾಬ್‌ನಲ್ಲಿರುವ ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರಕ್ಕೂ ಇದೀಗ ಆತಂಕ ಆರಂಭವಾಗಿದೆ.

ಚಂಡೀಗಢ: ಅಬಕಾರಿ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷ (ಆಪ್‌)ದ ಪರಮೋಚ್ಚ ನಾಯಕ ಅರವಿಂದ ಕೇಜ್ರಿವಾಲ್‌ ಅವರ ಬಂಧನವಾದ ಬೆನ್ನಲ್ಲೇ, ಪಂಜಾಬ್‌ನಲ್ಲಿರುವ ಭಗವಂತ್‌ ಮಾನ್‌ ನೇತೃತ್ವದ ಆಪ್‌ ಸರ್ಕಾರಕ್ಕೂ ಇದೀಗ ಆತಂಕ ಆರಂಭವಾಗಿದೆ. 

ದೆಹಲಿಯ ಅಬಕಾರಿ ನೀತಿಯನ್ನೇ ಆಧರಿಸಿ ಪಂಜಾಬ್‌ನಲ್ಲೂ ಆಪ್‌ ಸರ್ಕಾರ ಅಬಕಾರಿ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯಡಿ ಮದ್ಯದ ಲೈಸೆನ್ಸ್‌ ಪಡೆದಿರುವ ಎರಡು ಕಂಪನಿಗಳ ಪ್ರವರ್ತಕರು ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಗಳಾಗಿದ್ದಾರೆ.

ಹೀಗಾಗಿ ದೆಹಲಿ ಬಳಿಕ ಜಾರಿ ನಿರ್ದೇಶನಾಲಯ (ಇ.ಡಿ.) ದ ಅಧಿಕಾರಿಗಳು ಪಂಜಾಬ್‌ ಸರ್ಕಾರಕ್ಕೂ ಬಿಸಿ ಮುಟ್ಟಿಸಬಹುದು ಎಂಬ ಆತಂಕ ಕಂಡುಬರುತ್ತಿದೆ.

ಇದಲ್ಲದೆ, ಪಂಜಾಬ್‌ ಅಬಕಾರಿ ನೀತಿ ರೂಪಿಸುವ ಸಂದರ್ಭದಲ್ಲಿ ಪಂಜಾಬ್‌ನ ಅಧಿಕಾರಿಗಳು ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರ ಮನೆಯಲ್ಲಿದ್ದರು ಎಂದು ಇ.ಡಿ. ಈ ಹಿಂದೆಯೇ ಆಪಾದಿಸಿದೆ. 

ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ.ಕಳೆದ ವರ್ಷ ಇ.ಡಿ. ಅಧಿಕಾರಿಗಳು ಮೊಹಾಲಿಯ ಶಾಸಕ, ರಿಯಲ್‌ ಎಸ್ಟೇಟ್ ಉದ್ಯಮಿ ಕುಲ್ವಂತ್‌ ಸಿಂಗ್‌ ಅವರ ಮೇಲೆ ದಾಳಿ ನಡೆಸಿದ್ದರು. 

ಅಲ್ಲದೆ ಪಂಜಾಬ್‌ನ ಮೂವರು ಅಬಕಾರಿ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆ ಪೈಕಿ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಅನುಮತಿ ಕೇಳಿದ್ದರು. ಆದರೆ ಪಂಜಾಬ್‌ ಸರ್ಕಾರ ಕೊಟ್ಟಿರಲಿಲ್ಲ.

ಇದೀಗ ಕೇಜ್ರಿವಾಲ್‌ ಬಂಧನವಾಗಿರುವ ಹಿನ್ನೆಲೆಯಲ್ಲಿ ಪಂಜಾಬ್‌ನ ಅಧಿಕಾರಿಗಳು ಮಾಫಿ ಸಾಕ್ಷಿದಾರರಾಗಿ ಬದಲಾಗಿ ಬಿಟ್ಟರೆ, ಪಂಜಾಬ್‌ನ ಆಪ್‌ ರಾಜಕಾರಣಿಗಳು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

‘ನಮ್ಮ ಅಬಕಾರಿ ನೀತಿ ಚೆನ್ನಾಗಿದೆ. ಇದರಿಂದ ಸರ್ಕಾರ ಕೋಟ್ಯಂತರ ರು. ಗಳಿಸುವಂತಾಗಿದೆ. ಆದರೆ ಕೇಂದ್ರ ಸರ್ಕಾರ ಏನು ಮಾಡುತ್ತದೆ ಎಂಬುದು ಗೊತ್ತಿಲ್ಲ. 

ಹೀಗಾಗಿ ಮುಂದೇನಾಗುತ್ತೋ ನೋಡಬೇಕು’ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ನಡುವೆ, ಪಂಜಾಬ್‌ನ ಅಬಕಾರಿ ನೀತಿ ಬಗ್ಗೆಯೂ ಇ.ಡಿ. ತನಿಖೆ ನಡೆಸಬೇಕು ಎಂದು ಬಿಜಪಿ ರಾಜ್ಯಾಧ್ಯಕ್ಷ ಸುನಿಲ್‌ ಜಾಖಡ್‌ ಆಗ್ರಹಿಸಿದ್ದಾರೆ. 

ಪಂಜಾಬ್‌ನ ಖಜಾನೆ ಲೂಟಿ ಹೊಡೆದವರ ಬಂಧನವಾಗಬೇಕು ಎಂದು ಅಕಾಲಿ ದಳದ ಸಂಸದೆ ಹರ್‌ಸಿಮ್ರತ್‌ ಕೌರ್ ಒತ್ತಾಯಿಸಿದ್ದಾರೆ.

Share this article