ವಿಶ್ವವಿಖ್ಯಾತ ಕಂಪನಿಯಿಂದ ಬಿಡುಗಡೆ । ಇನ್ನು ಕೊಲ್ಹಾಪುರಿ ಚಪ್ಪಲಿಗೆ ಶುಕ್ರದೆಸೆ
ಮುಂಬೈ: ಇಟಲಿಯ ಖ್ಯಾತ ಐಷಾರಾಮಿ ಫ್ಯಾಷನ್ ಕಂಪನಿ ಪ್ರಾಡಾ ಇದೀಗ ಭಾರತೀಯ ಕುಶಲಕರ್ಮಿಗಳ ಸಹಯೋಗದೊಂದಿಗೆ ಮಹಾರಾಷ್ಟ್ರದ ಸುಪ್ರಸಿದ್ಧ ಕೊಲ್ಹಾಪುರಿ ಚಪ್ಪಲಿಗಳ ಮಾರಾಟಕ್ಕೆ ಮುಂದಾಗಿದ್ದು, ಈ ಸಂಬಂಧ ಒಪ್ಪಂದ ಮಾಡಿಕೊಂಡಿದೆ. ಇವುಗಳ ಬೆಲೆ ಜೋಡಿಗೆ 83,000 ರು. ಇರಲಿದೆ.
ಸೀಮಿತ ಆವೃತ್ತಿಯ ಸಂಗ್ರಹದ ಭಾಗವಾಗಿ 2,000 ಚಪ್ಪಲಿಗಳನ್ನು ಹೊರತರುವ ಯೋಜನೆಯಿದ್ದು, ಅವುಗಳನ್ನು ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಬಿಜಾಪುರ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ, ಸಾತಾರಾ, ಸೋಲಾಪುರದಲ್ಲಿ ತಯಾರಿಸಲಾಗುವುದು. ಇದಕ್ಕಾಗಿ ಸಂತ ರೋಹಿದಾಸ್ ಲೆದರ್ ಇಂಡಸ್ಟ್ರೀಸ್, ಎಲ್‌ಐಡಿಸಿಒಎಂ, ಲೆಲ್‌ಐಡಿಕೆಎಆರ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದ ಕುಶಲಕರ್ಮಿಗಳು ಇವುಗಳನ್ನು ಇಟಲಿಯ ತಂತ್ರಜ್ಞಾನ ಬಳಸಿ ತಯಾರಿಸಲಿದ್ದಾರೆ.ಈ ಚಪ್ಪಲಿಗಳು ಮುಂದಿನ ವರ್ಷ ಫೆಬ್ರವರಿಯಿಂದ ವಿಶ್ವಾದ್ಯಂತವಿರುವ 40 ಪ್ರಾಡಾ ಸ್ಟೋರ್‌ಗಳು ಮತ್ತು ಆನ್‌ಲೈನ್‌ನಲ್ಲಿ ಮಾರಾಟವಾಗಲಿವೆ. ಜತೆಗೆ, ಸ್ಥಳೀಯ ಕುಶಲಕರ್ಮಿಗಳಿಗೆ ಭಾರತ ಮತ್ತು ಇಟಲಿಯಲ್ಲಿ ತರಬೇತಿ ನೀಡುವ ಸಂಬಂಧ 3 ವರ್ಷಗಳ ಒಪ್ಪಂದವೂ ಆಗುವ ನಿರೀಕ್ಷೆಯಿದೆ.
=ಈ ಹಿಂದೆ ನಕಲು ಮಾಡಿದ್ದಕ್ಕೆ ಕ್ಷಮೆ
ಕೆಲ ತಿಂಗಳುಗಳ ಹಿಂದೆ, ಕೊಲ್ಹಾಪುರಿ ಮಾದರಿಯ ಚಪ್ಪಲಿಗಳನ್ನು ತನ್ನ ಹೆಸರಲ್ಲಿ ತಯಾರಿಸಿಕೊಂಡು, ಮೂಲ ವಸ್ತುವಿಗೆ ಶ್ರೇಯವನ್ನೂ ನೀಡದೆ ಪ್ರಾಡಾ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಳಿಕ ಭಾರತದ ಬಳಿ ಕ್ಷಮೆ ಯಾಚಿಸಿದ್ದ ಕಂಪನಿ, ಭಾರತೀಯ ಕುಶಲಕರ್ಮಿಗಳ ಸಹಯೋಗದಲ್ಲಿ ಚಪ್ಪಲಿಗಳನ್ನು ತಯಾರಿಸುವ ಬಗ್ಗೆ ಚಿಂತನೆ ನಡೆಸುವ ಭರವಸೆ ನೀಡಿತ್ತು.==
ಕೊಲ್ಹಾಪುರ ಚಪ್ಪಲಿಗೆ ಶುಕ್ರದೆಸೆಈಗಾಗಲೇ ಜಿಐ ಟ್ಯಾಗ್ ಪಡೆದಿರುವ ಕೊಲ್ಹಾಪುರಿ ಚಪ್ಪಲಿ ತಯಾರಿಕೆಯಲ್ಲಿ ಪ್ರಾಡಾ ಕಂಪನಿ ಜತೆಗಿನ ಒಪ್ಪಂದದ ಬೆನ್ನಲ್ಲೇ, ಅವುಗಳ ರಫ್ತು ಪ್ರತಿ ವರ್ಷ 9 ಸಾವಿರ ಕೋಟಿ ರು. ದಾಟಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ‘ಪ್ರಾಡಾದ ಈ ಒಪ್ಪಂದದಿಂದ ಸಂತಸವಾಗಿದೆ. ಸುಂದರ ವಿನ್ಯಾಸವುಳ್ಳ, ಪ್ರಖರ ಬಣ್ಣಗಳ ಕೊಲ್ಹಾಪುರಿ ಚಪ್ಪಲಿಗಳು ಯಾಕೆ ಜಾಗತಿಕ ಬ್ರ್ಯಾಂಡ್ ಆಗಬಾರದು ಎಂಬ ಯೋಚನೆ ನನಗೆ ಮೊದಲಿಂದಲೂ ಇತ್ತು. ಅದೀಗ ನಿಜವಾಗಲಿದೆ. ಅವುಗಳ ರಫ್ತು 9 ಸಾವಿರ ಕೋಟಿ ರು. ಮೀರಲಿದೆ’ ಎಂದು ಹರ್ಷಿಸಿದ್ದಾರೆ.