ವಕ್ಫ್ ತಿದ್ದುಪಡಿ ಮಸೂದೆ ಇದೀಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಮಸೂದೆಯ ಸಿಂಧುತ್ವ ಪ್ರಶ್ನಿಸಿ ವಕ್ಫ್ ಮಸೂದೆ ಕುರಿತಾದ ಜೆಪಿಸಿಯ ಸದಸ್ಯರೂ ಆಗಿದ್ದ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾದ ವಕ್ಫ್ ತಿದ್ದುಪಡಿ ಮಸೂದೆ ಇದೀಗ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಮಸೂದೆಯ ಸಿಂಧುತ್ವ ಪ್ರಶ್ನಿಸಿ ವಕ್ಫ್ ಮಸೂದೆ ಕುರಿತಾದ ಜೆಪಿಸಿಯ ಸದಸ್ಯರೂ ಆಗಿದ್ದ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಕೂಡ ಶೀಘ್ರವೇ ತಿದ್ದುಪಡಿ ಮಸೂದೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಘೋಷಿಸಿದೆ. ಹೀಗಾಗಿ ಸಂಸತ್ತಿನ ಅಂಗಳದಲ್ಲಿ ಭಾರೀ ಹೋರಾಟದ ಮೂಲಕ ಅನುಮೋದನೆ ಪಡೆದ ವಿಧೇಯಕಕ್ಕೆ ಇದೀಗ ಸುಪ್ರೀಂಕೋರ್ಟ್‌ನ ಅಗ್ನಿಪರೀಕ್ಷೆ ಎದುರಾದಂತಾಗಿದೆ.
ಸುಪ್ರೀಂಗೆ ಮೊರೆ:
ಕೇಂದ್ರ ಸರ್ಕಾರ ಅಂಗೀಕರಿಸಿರುವ ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾಯತ್ತೆಯನ್ನು ದುರ್ಬಲಗೊಳಿಸಿ, ವಕ್ಫ್ ಆಸ್ತಿ ಮತ್ತು ಅವುಗಳ ನಿರ್ವಹಣೆಯ ಮೇಲೆ ಅನಿಯಂತ್ರಿತ ನಿರ್ಬಂಧಗಳನ್ನು ಹೇರುತ್ತಿದೆ. ಜೊತೆಗೆ, ಸಂವಿಧಾನದ ಹಲವು ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆಯ ಬಗ್ಗೆಯೂ ಆಕ್ಷೇಪಿಸಲಾಗಿದೆ.
ಅತ್ತ, ಮುಸ್ಲಿಂ ಸಮುದಾಯದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಒವೈಸಿ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಈ ನಡುವೆ ‘ಆದಷ್ಟು ಬೇಗ ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ಮಸೂದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುತ್ತೇವೆ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಮಾಹಿತಿ ನೀಡಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಬುಧವಾರ ತಡರಾತ್ರಿ 2ಕ್ಕೆ ಲೋಕಸಭೆಯಲ್ಲಿ ಹಾಗೂ ಗುರುವಾರ ತಡರಾತ್ರಿ 2.30ಕ್ಕೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದು ಕಾನೂನಾಗಲು ರಾಷ್ಟ್ರಪತಿಗಳ ಸಹಿ ಬೀಳುವುದಷ್ಟೇ ಬಾಕಿ ಇದೆ.-