ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಅಣ್ಣಾ ಡಿಎಂಕೆ ಮೈತ್ರಿಗಾಗಿ ಬಿಜೆಪಿಯಿಂದ ಅಣ್ಣಾಬಲಿ ?

KannadaprabhaNewsNetwork | Updated : Apr 05 2025, 05:58 AM IST

ಸಾರಾಂಶ

 ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದಿಲ್ಲ ಎಂದು  ಹಾಲಿ ಅಧ್ಯಕ್ಷ ಕೆ. ಅಣ್ಣಾಮಲೈ ಘೋಷಿಸಿದ್ದಾರೆ. ಮುಂದಿನ ವಾರದ ಹೊತ್ತಿಗೆ ತಮಿಳುನಾಡು ಸೇರಿ 4 ರಾಜ್ಯಗಳ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹೈಕಮಾಂಡ್‌ ಸಜ್ಜಾಗಿರುವ ಹೊತ್ತಿನಲ್ಲೇ ಅಣ್ಣಾಮಲೈ ಇಂಥದ್ದೊಂದು ಹೇಳಿಕೆ  

 ಕೊಯಮತ್ತೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಹಾಲಿ ಅಧ್ಯಕ್ಷ ಕೆ. ಅಣ್ಣಾಮಲೈ ಘೋಷಿಸಿದ್ದಾರೆ. ಮುಂದಿನ ವಾರದ ಹೊತ್ತಿಗೆ ತಮಿಳುನಾಡು ಸೇರಿ 4 ರಾಜ್ಯಗಳ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪಕ್ಷದ ಹೈಕಮಾಂಡ್‌ ಸಜ್ಜಾಗಿರುವ ಹೊತ್ತಿನಲ್ಲೇ ಅಣ್ಣಾಮಲೈ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಈ ನಿರ್ಧಾರಕ್ಕೆ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಯಾವುದೇ ನೇರ ಕಾರಣ ನೀಡದೇ ಇದ್ದರೂ, ಎಐಎಡಿಎಂಕೆ ಜೊತೆಗಿನ ಮೈತ್ರಿಗಾಗಿ ಅಣ್ಣಾಮಲೈ ಅವರನ್ನು ಪಕ್ಷಾಧ್ಯಕ್ಷ ಹುದ್ದೆಯಲ್ಲಿ ಮುಂದುವರೆಸದೇ ಇರಲು ಬಿಜೆಪಿ ಕೇಂದ್ರ ನಾಯಕತ್ವ ನಿರ್ಧರಿಸಿದೆ ಎಂದು ಹೇಳಲಾಗಿದೆ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬದಲಾಗಿ ಅಣ್ಣಾಮಲೈಗೆ ಕೇಂದ್ರದಲ್ಲಿ ಮಹತ್ವದ ಹುದ್ದೆ ನೀಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಶುಕ್ರವಾರ ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ‘ಮುಂದಿನ ಬಾರಿ ಅಧ್ಯಕ್ಷ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ. ಬೇರೆ ಪಕ್ಷಗಳ ರೀತಿ ನಮ್ಮಲ್ಲಿ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತದೆ. ಹೀಗಾಗಿ ಸ್ಪರ್ಧೆಯ ಮಾತೇ ಇಲ್ಲ. ನಾನು ಅದರ ರೇಸ್‌ನಲ್ಲಿಯೂ ಇಲ್ಲ’ ಎಂದಿದ್ದಾರೆ. ಜೊತೆಗೆ, ‘ನಮ್ಮ ಉದ್ದೇಶ 2026ರ ವೇಳೆ ಡಿಎಂಕೆ ಸರ್ಕಾರವನ್ನು ಕಿತ್ತೊಗೆಯುವುದಾಗಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಬೇಕು ಎಂಬುದಷ್ಟೇ ನಮ್ಮೆಲ್ಲರ ಗುರಿ’ ಎಂದು ಹೇಳಿದರು.

ಇದೇ ವೇಳೆ ಎಐಎಡಿಎಂಕೆ ನಾಯಕರು ರಾಜ್ಯದಲ್ಲಿನ ಬಿಜೆಪಿ ನಾಯಕತ್ವ ಬದಲಾವಣೆ ಬಯಸಿದ್ದಾರೆ ಎಂಬ ವರದಿಗಳ ಬಗ್ಗೆ ಅಂಥ ಯಾವುದೇ ಗಲಾಟೆ ಗದ್ದಲಕ್ಕೂ ನಾನು ಸಿದ್ಧನಿಲ್ಲ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.

ಬಲಿಪಶು:

2026ರಲ್ಲಿ ತಮಿಳುನಾಡಲ್ಲಿ ವಿಧಾನಸಭಾ ಚುನಾವಣೆ ನಡೆಯಬೇಕಿದೆ. ಈ ವೇಳೆ ಬಿಜೆಪಿ ಜೊತೆ ಮೈತ್ರಿಗೆ ಆಸಕ್ತಿ ವ್ಯಕ್ತಪಡಿಸಿರುವ ಎಐಎಡಿಎಂಕೆ, ಅಣ್ಣಾಮಲೈ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಬಿಜೆಪಿ ಹೈಕಮಾಂಡ್‌ ಮುಂದೆ ಷರತ್ತು ಇಟ್ಟಿತ್ತು. ಹೀಗಾಗಿ ರಾಜ್ಯದಲ್ಲಿ ಅಣ್ಣಾಮಲೈ ಮತ್ತು ಎಐಎಡಿಎಂಕೆ ನಾಯಕರ ನಡುವಿನ ಸಂಘರ್ಷ ತಡೆಯುವ ಸಲುವಾಗಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸದೇ ಇರಲು ಪಕ್ಷ ಮುಂದಾಗಿದೆ ಎನ್ನಲಾಗಿದೆ.

Share this article