300 ಅಡಿ ಕುಸಿದಿದ್ದ ಏರಿಂಡಿಯಾ ವಿಮಾನ - ಪೈಲಟ್‌ ಡ್ರಗ್ಸ್‌ ಸೇವನೆ

Published : Aug 10, 2026, 06:40 AM IST
air india

ಸಾರಾಂಶ

ಥಾಯ್ಲೆಂಡ್‌ನ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ವೇಳೆ ಟರ್ಬುಲೆನ್ಸ್‌ಗೆ ತುತ್ತಾಗಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ನಿಷೇಧಿತ ಪದಾರ್ಥ (ಡ್ರಗ್ಸ್) ಸೇವನೆ ಮಾಡಿದ್ದು ಡೋಪ್‌ ಪರೀಕ್ಷೆಯಿಂದ ಪತ್ತೆಯಾಗಿದೆ

ನವದೆಹಲಿ: ಥಾಯ್ಲೆಂಡ್‌ನ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ವೇಳೆ ಟರ್ಬುಲೆನ್ಸ್‌ಗೆ ತುತ್ತಾಗಿದ್ದ ಏರ್‌ ಇಂಡಿಯಾ ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳ ಪೈಕಿ ಒಬ್ಬರು ನಿಷೇಧಿತ ಪದಾರ್ಥ (ಡ್ರಗ್ಸ್) ಸೇವನೆ ಮಾಡಿದ್ದು ಡೋಪ್‌ ಪರೀಕ್ಷೆಯಿಂದ ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಡ್ರಗ್ಸ್‌ ಸೇವಿಸಿದ ಪೈಲಟ್‌ ಸೇರಿ, ಟರ್ಬುಲನ್ಸ್‌ಗೆ ಸಂಬಂಧಿಸಿದಂತೆ ವಿಮಾನದ ಇಬ್ಬರೂ ಪೈಲಟ್‌ಗಳನ್ನು ಡಿಜಿಸಿಎ ಅಮಾನತು ಮಾಡಿದೆ.

ಆ.5ರಂದು 137 ಪ್ರಯಾಣಿಕರೊಂದಿಗೆ ದೆಹಲಿಗೆ ಬರುತ್ತಿದ್ದ ಎಐ2379 ವಿಮಾನ 5 ನಿಮಿಷಗಳ ಕಾಲ ಟರ್ಬುಲೆನ್ಸ್‌ಗೆ ಒಳಗಾದ ಪರಿಣಾಮ ಏಕಾಏಕಿ 300 ಅಡಿ ಕೆಳಗಿಳಿದಿತ್ತು. ಇದರಿಂದ 4 ಕ್ರೂ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದರು. ವಿಮಾನ ದೆಹಲಿಗೆ ಬಂದಿಳಿಯುತ್ತಿದ್ದಂತೆ ಶಿಷ್ಟಾಚಾರದಂತೆ ಪೈಲಟ್‌ಗಳ ಡೋಪ್‌ ಪರೀಕ್ಷೆ ನಡೆಸಿದಾಗ, ಒಬ್ಬ ಪೈಲಟ್‌ ರಕ್ತದಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ಡ್ರಗ್ಸ್ ಸೇವನೆ ಪ್ರಾಥಮಿಕವಾಗಿ ದೃಢಪಟ್ಟಿದ್ದು, ಅಂತಿಮ ವರದಿಗೆ ಕಾಯಲಾಗುತ್ತಿದೆ

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಏರ್‌ ಇಂಡಿಯಾ, ‘ನಾಗರಿಕ ವಿಮಾನಯಾನ ನಿಯಮಾವಳಿಗಳಿಗೆ ಅನುಗುಣವಾಗಿ ನಾವು ಪ್ರತೀ ಹಾರಾಟದ ಮುನ್ನ ಡ್ರಗ್ಸ್‌ ಟೆಸ್ಟ್‌ ನಡೆಸುತ್ತೇವೆ. ಆದರೆ ಈ ಘಟನೆಯಲ್ಲಿ ಪೈಲಟ್‌ನ ಡೋಪ್‌ ಪರೀಕ್ಷೆಯ ವರದಿ ನಮಗೆ ಲಭ್ಯವಾಗಿಲ್ಲ. ಅಧಿಕಾರಿಗಳೊಂದಿಗೆ ಸಹಕರಿಸುತ್ತೇವೆ’ ಎಂದಿದೆ.

ಡಿಜಿಸಿಎ ತನಿಖೆ:

ಇದೇ ವೇಳೆ, ಇದ್ದಕ್ಕಿದ್ದಂತೆ ವಿಮಾನದ ಎತ್ತರ ಕುಸಿತವಾದ ಕಾರಣ ಪತ್ತೆಗೆ ತನಿಖೆಯನ್ನು ದೇಶದ ನಾಗರಿಕ ವಿಮಾನಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ ಕೈಗೆತ್ತಿಕೊಂಡಿದೆ. ಇದರ ಫಲಿತಾಂಶ ಬಂದ ಬಳಿಕ, ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಇದರ ತನಿಖೆ ನಡೆಸಬೇಕೇ ಎಂಬ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯ ತನಕ, ಘಟನೆ ವೇಳೆ ವಿಮಾನದಲ್ಲಿದ್ದ ಡ್ರಗ್ಸ್‌ ಸೇವಿಸಿದ್ದಾರೆ ಎನ್ನಲಾದ ಪೈಲಟ್‌ ಸೇರಿ ಇಬ್ಬರು ಪೈಲಟ್‌ಗಳನ್ನು ಸಮಾನತು ಮಾಡಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಪೈಲಟ್‌ ಕಣ್ಣಿಗೆ ಲೇಸರ್ ಬೆಳಕು: ಹೊಸ ಆತಂಕ

ಕೋಲ್ಕತಾ: ಕೌಲಾಲಂಪುರದಿಂದ 159 ಪ್ರಯಾಣಿಕರ ಹೊತ್ತು ತರುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ವಿಮಾನದ ಪೈಲಟ್‌ಗೆ ಎದುರಿನಿಂದ ಬಂದ ಲೇಸರ್‌ ಬೆಳಕು, ಲ್ಯಾಂಡಿಂಗ್‌ ಅಡ್ಡಿ ಮಾಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಹೀಗಾಗಿ ಕೆಲ ಹೊತ್ತು ಆಗಸದಲ್ಲೇ ಕೆಲ ಹೊತ್ತು ವಿಮಾನ ಸುತ್ತುಹೊಡೆಸಿ ಬಳಿಕ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ತಮಿಳುನಾಡಲ್ಲಿ ಮೊದಲು ನಾಡ ಗೀತೆ ಗಾಯನ: ಇಂದು ವಿಧಾನಸಭೇಲಿ ನಿರ್ಣಯ
ಪಾಕ್‌ನಲ್ಲಿ ಲಷ್ಕರ್‌ ಕಮಾಂಡರ್‌ ನಿಗೂಢ ಸಾವು