ಮುಂಬೈ: ‘ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದ್ದು, ನಮ್ಮ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಶಿಕ್ಷೆ ವಿಧಿಸದೆ ಒಂದು ಕೊಲೆ ಮಾಡಲು ಅವಕಾಶ ನೀಡಿ’ ಎಂದು ಎನ್‌ಸಿಪಿಯ ಶರದ್ ಪವಾರ್ ಬಣದ ಮಹಿಳಾ ಘಟಕದ ಅಧ್ಯಕ್ಷೆ ರೋಹಿಣಿ ಖಡ್ಸೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.
ತಮ್ಮ ಪತ್ರದಲ್ಲಿ ಮುಂಬೈನಲ್ಲಿ ಇತ್ತೀಚೆಗೆ ನಡೆದಿರುವ 12 ವರ್ಷದ ಬಾಲಕಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣ ಉಲ್ಲೇಖಿಸಿರುವ ರೋಹಿಣಿ ‘ದೇಶಾದ್ಯಂತ ಪರಿಸ್ಥಿತಿಗಳು ಹೇಗಿರಬಹುದು ಯೋಚಿಸಿ. ವಿಶ್ವ ಜನಸಂಖ್ಯಾ ಪರಿಶೀಲನಾ ವರದಿಯಲ್ಲಿ ಏಷ್ಯಾದಲ್ಲಿ ಸುರಕ್ಷತೆ ಮತ್ತು ಭದ್ರತೆ ವಿಚಾರದಲ್ಲಿ ಭಾರತವೇ ಮಹಿಳೆಯರಿಗೆ ಅಸುರಕ್ಷಿತ ದೇಶ ಎಂದು ಬಯಲಾಗಿದೆ.
ಸಮೀಕ್ಷೆಯು ಮಹಿಳೆಯರ ಮೇಲಿನ ಅನೇಕ ದೌರ್ಜನ್ಯ ವಿಚಾರಗಳ ಬಗ್ಗೆ ಹೇಳಿದೆ. ನಮ್ಮ ದೇಶದಲ್ಲಿ ಮಹಿಳೆಯರು ದುರ್ಬಲರಾಗಿದ್ದಾರೆ. ಏಕೆಂದರೆ ಅವರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಈ ಸನ್ನಿವೇಶ ಗಮನಿಸಿದರೆ ಶಿಕ್ಷೆ ವಿಧಿಸದೇ ಒಂದು ಕೊಲೆಗೆ ನೀಡಬೇಕು’ ಎಂದು ಬರೆದಿದ್ದಾರೆ. ಇದೇ ವೇಳೆ ,‘ಮಹಿಳೆಯರು ಭಾರತದಲ್ಲಿರುವ ದಬ್ಬಾಳಿಕೆ, ಅತ್ಯಾಚಾರಿ ಮನಸ್ಥಿತಿ, ಅಜ್ಞಾನದ ಕಾನೂನನ್ನು ಕೊಲ್ಲಲು ಬಯಸುತ್ತಾರೆ’ ಎಂದು ರೋಹಿಣಿ ಖಡ್ಸೆ ಹೇಳಿದ್ದಾರೆ.
ಸ್ತ್ರೀಯರು ಚಾಕು, ಕಾರದ ಪುಡಿ ಇಟ್ಟುಕೊಳ್ಳಿ: ಮಹಾ ಸಚಿವ
ಜಲಗಾವ್: ‘ಮಹಿಳೆಯರು ಆತ್ಮರಕ್ಷಣೆಗಾಗಿ ತಮ್ಮ ಪರ್ಸ್‌ಗಳಲ್ಲಿ ಚಾಕು ಹಾಗೂ ಮೆಣಸಿನ ಪುಡಿ ಇಟ್ಟುಕೊಳ್ಳಿ’ ಎಂದು ಶಿವಸೇನೆ ನಾಯಕ, ಸಚಿವ ಗುಲಾಬರಾವ್ ಪಾಟೀಲ್ ಸಲಹೆ ನೀಡಿದ್ದಾರೆ.ಅಂತಾರಾಷ್ಟ್ರೀಯ ಮಹಿಳಾ ದಿನದ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳಾ ಸಬಲೀಕರಣದ ಬಗ್ಗೆ ನಾವು ಮಾತಾಡುತ್ತಿದ್ದರೂ ಇಂದು ಕೆಟ್ಟ ಘಟನೆಗಳು ಘಟಿಸುತ್ತಿವೆ.
ಮಹಿಳೆಯರು ಲಿಪ್‌ಸ್ಟಿಕ್ ಜತೆ ಚಾಕು, ಮೆಣಸಿನಪುಡಿ ಇಟ್ಟುಕೊಳ್ಳಬೇಕು ಎಂದು ಬಾಳಾ ಠಾಕ್ರೆ ಹೇಳಿದ್ದನ್ನು ಅಪಹಾಸ್ಯ ಮಾಡಲಾಗಿತ್ತು. ಇಂದು ನಾನು ಹೆಂಗಳೆಯರಲ್ಲಿ ಅದೇ ಅರಿಕೆ ಮಾಡಿಕೊಳ್ಳುತ್ತಿದ್ದೇನೆ’ ಎಂದರು.
ಇದೇ ವೇಳೆ, ಸರ್ಕಾರಿ ಬಸ್‌ಗಳಲ್ಲಿ ಅರ್ಧ ದರದ ಟಿಕೆಟ್, ಬಾಲಕಿಯರಿಗೆ ಉಚಿತ ಶಿಕ್ಷಣ, ಲಡ್ಕಿ ಬಹಿನ್‌ನಂತಹ ಯೋಜನೆಗಳ ಬಗ್ಗೆಯೂ ಮಾತನಾಡಿದರು.