ತಾವು ಓದಿದ ಕಾಲೇಜಿಗೆ ಅಂಬಾನಿ ₹ 151 ಕೋಟಿ ದಾನ

KannadaprabhaNewsNetwork |  
Published : Jun 08, 2025, 02:30 AM ISTUpdated : Jun 08, 2025, 04:30 AM IST
ಅಂಬಾನಿ | Kannada Prabha

ಸಾರಾಂಶ

ದೇಶದ ಅತ್ಯಂತ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು, ತಾವು ವ್ಯಾಸಂಗ ಮಾಡಿದ ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಸಿಟಿ) ಸಂಸ್ಥೆಗೆ 151 ಕೋಟಿ ರು. ದಾನ ನೀಡಿದ್ದಾರೆ. ಅಂಬಾನಿಯವರು 1970ಯಲ್ಲಿ ಐಸಿಟಿಯಿಂದ ಪದವಿ ಪಡೆದಿದ್ದರು.

 ನವದೆಹಲಿ : ದೇಶದ ಅತ್ಯಂತ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರು, ತಾವು ವ್ಯಾಸಂಗ ಮಾಡಿದ ಮುಂಬೈನ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಸಿಟಿ) ಸಂಸ್ಥೆಗೆ 151 ಕೋಟಿ ರು. ದಾನ ನೀಡಿದ್ದಾರೆ. ಅಂಬಾನಿಯವರು 1970ಯಲ್ಲಿ ಐಸಿಟಿಯಿಂದ ಪದವಿ ಪಡೆದಿದ್ದರು.

ಪ್ರೊ. ಎಂ.ಎಂ. ಶರ್ಮಾ ಅವರ ‘ಡಿವೈನ್‌ ಸೈಂಟಿಸ್ಟ್‌’(ದೈವಿಕ ವಿಜ್ಞಾನಿ) ಪುಸ್ತಕದ ಪ್ರಕಟಣೆ ಸಮಾರಂಭದಲ್ಲಿ ಅಂಬಾನಿ ಪಾಲ್ಗೊಂಡಿದ್ದರು. ಈ ವೇಳೆ, ಮೊದಲ ಬಾರಿ ಶರ್ಮಾ ಅವರ ಪಾಠ ಕೇಳಿದ್ದರಿಂದ ಹಿಡಿದು, ತಮ್ಮನ್ನು ಪ್ರೇರೇಪಿಸಿದ್ದನ್ನೂ ನೆನೆದರು. ಶರ್ಮಾ ಅವರನ್ನು ರಾಷ್ಟ್ರ ಗುರು ಎಂದು ಸಂಬೋಧಿಸಿದ ಅಂಬಾನಿ, ‘ನನ್ನ ತಂದೆ ಧೀರೂಭಾಯಿ ಅಂಬಾನಿಯವರಂತೆ, ಭಾರತೀಯ ಉದ್ಯಮವನ್ನು ಕೊರತೆಯಿಂದ ಜಾಗತಿಕ ನಾಯಕತ್ವಕ್ಕೆ ಬದಲಾಯಿಸುವ ಉತ್ಕಟ ಬಯಕೆ ಶರ್ಮಾ ಅವರಿಗಿತ್ತು. ಖಾಸಗಿ ಉದ್ಯಮಶೀಲತೆಯೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಸಮೃದ್ಧಿಯ ಬಾಗಿಲನ್ನು ತೆರೆಯುತ್ತದೆ ಎಂದು ಈ ಇಬ್ಬರು ದಾರ್ಶನಿಕರು ನಂಬಿದ್ದರು. ಭಾರತ ಬೆಳೆಯಲು ಏಕೈಕ ಮಾರ್ಗವೆಂದರೆ ಇಲ್ಲಿನ ಉದ್ಯಮವನ್ನು ಪರವಾನಗಿ-ರಾಜ್‌ನಿಂದ ಮುಕ್ತಗೊಳಿಸುವುದು ಎಂದು ನಂಬಿದ್ದ ಶರ್ಮಾ, ಅಧಿಕಾರಿಗಳಿಗೂ ಇದನ್ನೇ ಹೇಳಿದರು. ಥಸಿಟಿಗಾಗಿ ನೀನು ಏನಾದರೂ ಮಾಡಬೇಕು ಎಂದು ಅವರು ನನಗೆ ಹೇಳಿದ್ದರು. ಅದನ್ನೇ ನಾನು ಮಾಡಿದ್ದೇನೆ’ ಎಂದರು.

ಮಿಥಿ ನದಿ ಹಗರಣ: ನಟ ಡಿನೋ ಮೊರಿಯಾಗೆ ಇ.ಡಿ. ಸಮನ್ಸ್‌

ಮುಂಬೈ: ಮುಂಬೈನ ಮಿಥಿ ನದಿಯ ಹೂಳೆತ್ತುವಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ನಟ ಡಿನೋ ಮೊರಿಯಾ ಮತ್ತು ಅವರ ಸಹೋದರ ಸ್ಯಾಂಟಿನೋ ಮೊರಿಯಾ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಹಗರಣದ 13 ಆರೋಪಿಗಳಲ್ಲಿ ಒಬ್ಬನಾದ ಕೇತನ್ ಕದಂನ ಫೋನ್‌ ಕಾಲ್‌ ದಾಖಲೆಗಳಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. ಆತನಿಂದ ಇವರಿಗೆ 18 ಲಕ್ಷ ರು. ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಇ.ಡಿ. ಆರೋಪಿಸಿದೆ.ಈ ಹಿನ್ನೆಲೆಯಲ್ಲಿ ಮುಂದಿನ ವಾರ ಇ.ಡಿ. ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನಟನಿಗೆ ಸೂಚಿಸಲಾಗಿದೆ.

65 ಕೋಟಿ ರು. ಮೌಲ್ಯದ ಹೂಳು ತೆಗೆಯುವ ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ., ಶುಕ್ರವಾರ ಮೊರಿಯಾ ಅವರ ಬಾಂದ್ರಾ ನಿವಾಸದಲ್ಲಿ 14 ಗಂಟೆಗಳ ಕಾಲ ಶೋಧ ನಡೆಸಿತ್ತು.

ಹಿಂದಿ ಹೇರಿಕೆ ಬೇಡ, ಹಾಗೇ ಕಲೀತೇವೆ: ಕಮಲ್‌

ನವದೆಹಲಿ: ಕನ್ನಡವು ತಮಿಳಿನಿಂದ ಜನಿಸಿದೆ ಎಂದು ಹೇಳಿ, ಅದಕ್ಕೆ ಕ್ಷಮೆಯನ್ನೂ ಯಾಚಿಸದೆ ಕನ್ನಡಿಗರ ಕ್ರೋಧಕ್ಕೆ ಬಲಿಯಾಗಿರುವ ನಟ ಕಮಲ್‌ ಹಾಸನ್‌, ತಮಿಳುನಾಡಿನಲ್ಲಿ ಸದಾ ಸುದ್ದಿಯಲ್ಲಿರುವ ಹಿಂದಿ ಹೇರಿಕೆಯ ಬಗ್ಗೆ ಮಾತನಾಡಿದ್ದಾರೆ. ‘ಹಿಂದಿಯನ್ನು ಹೇರಬೇಡಿ, ನಾವು ಹಾಗೆಯೇ ಕಲಿಯುತ್ತೇವೆ’ ಎಂದು ಅವರು ಹೇಳಿದ್ದಾರೆ.ಪಿಟಿಐ ಸುದ್ದಿಸಂಸ್ಥೆಯ ಮುಖ್ಯಕಚೇರಿಗೆ ಭೇಟಿ ನೀಡಿದ ವೇಳೆ, ‘ದಕ್ಷಿಣ ಭಾರತದಲ್ಲಿ ಆಗುತ್ತಿರುವ ಹಿಂದೆ ಹೇರಿಕೆ ವಿಷಯದಲ್ಲಿ ನಿಮ್ಮ ನಿಲುವೇನು?’ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್‌, ‘ನಾನು ಕರ್ನಾಟಕ, ಪಂಜಾಬ್‌, ಆಂಧ್ರದ ಜತೆ ನಿಲ್ಲುತ್ತೇನೆ. ಹಿಂದಿ ಕಲಿಕೆಯು ಶಿಕ್ಷಣದ ಭಾಗವಾಗಿದೆ. ಅದನ್ನು ಇದ್ದಕ್ಕಿದ್ದಂತೆ ಹೇರಿದರೆ, ಹಲವರನ್ನು ಅಶಿಕ್ಷಿತರನ್ನಾಗಿ ಮಾಡಿದಂತೆ. ನೀವು ಅಂತಾರಾಷ್ಟ್ರೀಯ ಪ್ರಗತಿಯನ್ನು ನೋಡುತ್ತಿದ್ದರೆ 1 ಭಾಷೆಯನ್ನಷ್ಟೇ ಕಲಿಯಬೇಕು. ಇದಕ್ಕೆ ಇಂಗ್ಲಿಷ್‌ ಸೂಕ್ತ’ ಎಂದು ಕಮಲ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ತಾವು ಹಿಂದಿ ಚಿತ್ರದಲ್ಲಿಯೂ ನಟಿಸಿರುವುದನ್ನು ಉಲ್ಲೇಖಿಸಿದ್ದಾರೆ.

ದಿಲ್ಲಿ ಸಿಎಂ ರೇಖಾ ಹತ್ಯೆ ಬೆದರಿಕೆ: ಓರ್ವನ ಬಂಧನ

  ನವದೆಹಲಿ :  ಬಿಟ್ಟು ಹೋಗಿದ್ದ ಪತ್ನಿಯನ್ನು ತನ್ನ ಜತೆ ಒಂದು ಮಾಡಿ ಎಂಬ ಕೋರಿಕೆಗೆ ಪೊಲೀಸರು ಓಗೊಡದ ಕಾರಣ ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಪೊಲೀಸ್‌ ಸಹಾಯವಾಣಿ 112ಗೆ ಕರೆ ಮಾಡಿ, ‘ದಿಲ್ಲಿ ಸಿಎಂ ರೇಖಾ ಗುಪ್ತಾರನ್ನು ಕೊಲೆ ಮಾಡುವೆ’ ಎಂದು ಬೆದರಿಕೆ ಹಾಕಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಶ್ಲೋಕ್‌ ತ್ರಿಪಾಠಿ ಕಾನೂನು ಪದವೀಧರನಾಗಿದ್ದ. 2020ರಲ್ಲಿ ಮದುವೆಯಾಗಿದ್ದ. ಪತ್ನಿ ಕಳೆದ ವರ್ಷ ಈತನನ್ನು ತ್ಯಜಿಸಿ ದೆಹಲಿಯಲ್ಲಿ ಪ್ರತ್ಯೇಕವಾಗಿದ್ದಳು. ಇದರಿಂದಾಗಿ ಖಿನ್ನತೆಗೆ ಒಳಗಾಗಿದ್ದ ಶ್ಲೋಕ್‌, ಕುಡಿದ ಮತ್ತಿನಲ್ಲಿ ಗಾಜಿಯಾಬಾದ್‌ ಪೊಲೀಸರಿಗೆ ಕರೆ ಮಾಡಿ ತನ್ನ ಪತ್ನಿಯೊಂದಿಗೆ ಮಾತನಾಡಬೇಕು. ಆಕೆಯನ್ನು ಭೇಟಿ ಮಾಡಬೇಕು ಎಂದು ಮನವಿ ಮಾಡಿದ್ದ. ಇದಕ್ಕೆ ಪೊಲೀಸರು ಓಗೊಡದಾಗ, ಕುಡಿದ ಮತ್ತಿನಲ್ಲಿ ಸಿಎಂ ರೇಖಾರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.

ಇದನ್ನು ಗಂಭೀರವಾಗಿ ಗಾಜಿಯಾಬಾದ್‌ ಪೊಲೀಸರು ದೆಹಲಿಗೆ ಪೊಲೀಸರಿಗೆ ಮಾಹಿತಿ ರವಾನಿಸಿ ಪಂಚವಟಿ ಕಾಲೋನಿ ಎಂಬಲ್ಲಿ ಆತನನ್ನು ಬಂಧಿಸಿದ್ದಾರೆ. ಈತ ಹಲವು ಬಾರಿ ಪೊಲೀಸರಿಗೆ ಕರೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ