ವಿಮಾನ ಹಾರಿಸಲು ಪೈಲಟ್‌ ನಕಾರ : 45 ನಿಮಿಷ ಶಿಂಧೆ ಪರದಾಟ!

KannadaprabhaNewsNetwork |  
Published : Jun 08, 2025, 01:51 AM ISTUpdated : Jun 08, 2025, 04:34 AM IST
ಏಕನಾಥ್‌ ಶಿಂಧೆ | Kannada Prabha

ಸಾರಾಂಶ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಖಾಸಗಿ ವಿಮಾನದ ಪೈಲಟ್‌, ತನ್ನ ಕೆಲಸದ ಸಮಯ ಮುಗಿದ ಕಾರಣ ವಿಮಾನ ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ.  

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಖಾಸಗಿ ವಿಮಾನದ ಪೈಲಟ್‌, ತನ್ನ ಕೆಲಸದ ಸಮಯ ಮುಗಿದ ಕಾರಣ ವಿಮಾನ ಚಲಾಯಿಸಲು ನಿರಾಕರಿಸಿದ ಘಟನೆ ನಡೆದಿದೆ. ಹೀಗಾಗಿ ಅವರು 45 ನಿಮಿಷ ವಿಮಾನ ನಿಲ್ದಾಣದಲ್ಲೇ ಇರಬೇಕಾದ ಪರಿಸ್ಥಿತಿ ಉದ್ಭವವಾಗಿದ್ದು, ಬಳಿಕ ಪೈಲಟ್‌ನ ಮನವೊಲಿಸಿ ಮುಂಬೈಗೆ ಮರಳಿದ್ದಾರೆ.

ಮಹಾರಾಷ್ಟ್ರದ ಮುಕ್ತಿನಗರದಲ್ಲಿ ನಡೆದ ಸಂತ ಮುಕ್ತಾಯ್‌ ಪಲ್ಲಕ್ಕಿ ಯಾತ್ರೆಯಲ್ಲಿ ಭಾಗವಹಿಸಿದ್ದ ಶಿಂಧೆ, ಜಲಗಾಂವ್‌ನಿಂದ ಮುಂಬೈಗೆ ಹೊರಟಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಡಿಸಿಎಂ ಶಿಂಧೆ, ಗಿರೀಶ್‌ ಮಹಾಜನ್‌, ಗುಲಾಬರಾವ್‌ ಪಾಟೀಲ್‌ ಹಾಗೂ ಕೆಲ ಅಧಿಕಾರಿಗಳು ಮದ್ಯಾಹ್ನ 3.45ಕ್ಕೆ ಜಲಗಾಂವ್‌ ವಿಮಾನ ನಿಲ್ದಾಣಕ್ಕೆ ಬರುತ್ತಾರೆಂದು ನಿಗದಿಯಾಗಿತ್ತು. ಆದರೆ ಉತ್ಸವ ಮುಗಿಸಿ ಮರಳುವಾಗ ತಾಂತ್ರಿಕ ಸಮಸ್ಯೆಯಿಂದ ಅಲ್ಲಿಗೆ ಬರುವಾಗ ರಾತ್ರಿ 9.15 ಆಗಿತ್ತು. ಆಗ, ತನ್ನ ಇಂದಿನ ಕೆಲಸದ ಸಮಯ ಮುಗಿದಿದೆ ಎಂದ ಪೈಲಟ್‌, ವಿಮಾನ ಹಾರಿಸಲು ನಿರಾಕರಿಸಿದ್ದಾರೆ. ಜತೆಗೆ, ತಮಗೆ ಆರೋಗ್ಯ ಸಮಸ್ಯೆ ಇರುವುದಾಗಿಯೂ ಹೇಳಿದ್ದಾರೆ. ಬಳಿಕ ಎಲ್ಲರೂ ಸೇರಿಕೊಂಡು 45 ನಿಮಿಷಗಳ ಕಾಲ ಪೈಲಟ್‌ನ ಮನ ಒಲಿಸಿದ್ದಾರೆ. ವಿಮಾನಯಾನ ಅಧಿಕಾರಿಗಳ ಕಡೆಯಿಂದಲೂ ಪೈಲಟ್‌ ಮನವೊಲಿಕೆಗೆ ಯತ್ನಿಸಿದ್ದಾರೆ. ಕೊನೆಗೆ ಹಾರಾಟಕ್ಕೆ ಒಪ್ಪಿದ ಪೈಲಟ್‌ ವಿಮಾನ ಚಲಾಯಿಸಿದ್ದು, ತಡರಾತ್ರಿ ಮುಂಬೈಗೆ ಹಾರಿದ್ದಾರೆ.

 ವಿಮಾನ ತಪ್ಪಿಸಿಕೊಂಡಿದ್ದಮಹಿಳೆಗೆ ನೆರವಾದ ಶಿಂಧೆ

ಶೀತಲ್‌ ಪಾಟೀಲ್‌ ಎಂಬ ಮಹಿಳೆ, ಮೂತ್ರಪಿಂಡದ(ಕಿಡ್ನಿ) ಶಸ್ತ್ರಚಿಕಿಸ್ತೆಗೆ ಒಳಗಾಗಬೇಕಿತ್ತು. ಅದಕ್ಕಾಗಿ ಪತಿಯೊಂದಿಗೆ ಮುಂಬೈಗೆ ಹೊರಟಿದ್ದ ಅವರು, ವಿಮಾನ ತಪ್ಪಿಸಿಕೊಂಡಿದ್ದರು. ಈ ಬಗ್ಗೆ ತಿಳಿಯುತ್ತಿದ್ದಂತೆ ಮಹಾಜನ್‌ ಅವರು, ಶಿಂಧೆಯವರ ವಿಮಾನದಲ್ಲಿ ಬರುವಂತೆ ಆ ದಂಪತಿಯನ್ನು ಆಹ್ವಾನಿಸಿದರು. ಅತ್ತ ಮುಂಬೈ ವಿಮಾನ ನಿಲ್ದಾಣಕ್ಕೆ ಅವರು ತಲುಪುವ ಹೊತ್ತಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಈ ಬಗ್ಗೆ ಮಾತನಾಡಿದ ಗುಲಾಬ್‌ರಾವ್‌, ‘ಶಿಂಧೆ ತಮ್ಮ ಕಷ್ಟ ದಿನಗಳನ್ನು ಮರೆತಿಲ್ಲ. ಸಾಮಾನ್ಯ ಜನರ ಪ್ರತಿಯೂ ಅವರು ಸೂಕ್ಷ್ಮತೆ ತೋರಿದ್ದಾರೆ’ ಎಂದು ಪ್ರಶಂಸಿಸಿದರು.

PREV
Read more Articles on

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ