ಬಿಹಾರ ಚುನಾವಣೇಲೂ ಮ್ಯಾಚ್‌ ಫಿಕ್ಸಿಂಗ್‌ : ರಾಗಾ

KannadaprabhaNewsNetwork |  
Published : Jun 08, 2025, 02:24 AM ISTUpdated : Jun 08, 2025, 04:32 AM IST
Congress Rahul Gandhi

ಸಾರಾಂಶ

‘2024ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ’ ಎಂಬ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್‌ ನೇತಾರ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ 

  ನವದೆಹಲಿ : ‘2024ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆಗಿದೆ’ ಎಂಬ ಆರೋಪವನ್ನು ಪುನರುಚ್ಚರಿಸಿರುವ ಕಾಂಗ್ರೆಸ್‌ ನೇತಾರ ಹಾಗೂ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ಬರಲಿರುವ ಬಿಹಾರ ಚುನಾವಣೆಯಲ್ಲಿಯೂ ಹೀಗೆಯೇ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಜೊತೆಗೆ, ‘ಬಿಜೆಪಿ ಎಲ್ಲಿ ಸೋಲು ಅನುಭವಿಸುವ ಸ್ಥಿತಿ ಇದೆಯೋ ಅಲ್ಲೆಲ್ಲ ಹೀಗೇ ಆಗಲಿದೆ’ ಎಂದು ಆರೋಪಿಸಿದ್ದಾರೆ.

ಇದರ ಬೆನ್ನಲ್ಲೇ ಕಾಂಗ್ರೆಸ್‌ ಪಕ್ಷವೂ ಪ್ರತಿಕ್ರಿಯಿಸಿದ್ದು, ‘ಮಹಾರಾಷ್ಟ್ರ ಚುನಾವಣಾ ಪ್ರಕ್ರಿಯೆ ಬಗ್ಗೆ ಸ್ವತಂತ್ರ ತನಿಖೆ ಆಗಬೇಕು’ ಎಂದು ಆಗ್ರಹಿಸಿದೆ. ಆದರೆ ಈ ಆರೋಪ ಮತದಾರರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಖಂಡಿಸಿದೆ. ಇನ್ನು ಚುನಾವಣಾ ಆಯೋಗದ ಮೂಲಗಳು ರಾಹುಲ್‌ ಆರೋಪ ನಿರಾಕರಿಸಿವೆ.

ಇದೇ ವೇಳೆ, ಚುನಾವಣಾ ಆಯೋಗವು ಅಧಿಕೃತವಾಗಿ ಪ್ರತಿಕ್ರಿಯಿಸದೆ ಮೂಲಗಳು ಸ್ಪಷ್ಟನೆ ನೀಡಿರುವುದನ್ನೂ ಪ್ರಶ್ನಿಸಿರುವ ಅವರು, ‘ಸಾಂವಿಧಾನಿಕ ಸಂಸ್ಥೆಯಾಗಿ ಅಧಿಕೃತ ಹೇಳಿಕೆ ನೀಡಿ. ಸಹಿ ಇಲ್ಲದ ಟಿಪ್ಪಣಿ ಮೂಲಕ ಸಷ್ಟನೆ ಬೇಡ. ತಿರುಚಲಾಗದ ಡಿಜಿಟಲ್‌ ಮತದಾರರ ಪಟ್ಟಿ ಪ್ರಕಟಿಸಿ. ಮಹಾರಾಷ್ಟ್ರ ಚುನಾವಣೆಯ ಮತಗಟ್ಟೆಗಳ ಸಿಸಿಟೀವಿ ದೃಶ್ಯ ಬಿಡುಗಡೆ ಮಾಡಿ’ ಎಂದು ಮತ್ತೊಂದು ಆಗ್ರಹ ಮಾಡಿದ್ದಾರೆ.

ಲೇಖನದಲ್ಲಿ ರಾಹುಲ್‌ ಕಿಡಿ:

ಈ ಬಗ್ಗೆ ರಾಹುಲ್‌ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ಗೆ ಲೇಖನ ಬರೆದಿದ್ದಾರೆ. ಬಳಿಕ ಆ ತಮ್ಮ ಲೇಖನವನ್ನು ಎಕ್ಸ್‌ನಲ್ಲಿ ಹಂಚಿಕೊಂಡ ರಾಹುಲ್‌, ‘ಮ್ಯಾಚ್‌ ಫಿಕ್ಸಿಂಗ್‌ (ಪರಿಣಾಮ ಹೊರಬರುವ ಮೊದಲೇ ಅದರ ಫಲಿತಾಂಶವನ್ನು ತಮಗೆ ಅನುಕೂಲವಾಗುವಂತೆ ಮಾಡಿಕೊಳ್ಳುವುದು) ಪ್ರಜಾಪ್ರಭುತ್ವದ ಪಾಲಿಗೆ ವಿಷ. ಕಳೆದ ವರ್ಷದ ಮಹಾರಾಷ್ಟ್ರ ಚುನಾವಣೆಯು, ಪ್ರಜಾಪ್ರಭುತ್ವವನ್ನು ತಿರುಚುವುದರ ನೀಲನಕ್ಷೆಯಾಗಿತ್ತು. ಚುನಾವಣಾ ಆಯೋಗವನ್ನು ಕೈವಶ ಮಾಡಿಕೊಂಡು, ನಕಲಿ ಮತದಾರರನ್ನು ಸೇರಿಸಿ, ಮತದಾನದ ಪ್ರಮಾಣ ಹೆಚ್ಚಿಸಿ, ಬಿಜೆಪಿಗೆ ಗೆಲುವು ಬೇಕಾದಾಗ ನಕಲಿ ಮತಗಳನ್ನು ಬಳಸಿ, ಸಾಕ್ಷ್ಯಗಳನ್ನು ಅಡಗಿಸಿ ಮ್ಯಾಚ್‌ಫಿಕ್ಸ್‌ ಮಾಡಲಾಯಿತು’ ಎಂದು ಆರೋಪಿಸಿದ್ದಾರೆ. 2024ರ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ-ಅಜಿತ್‌ ಪವಾರ್‌ ಅವರ ಎನ್‌ಸಿಪಿ ಇರುವ ಮಹಾಯುತಿ ಕೂಟ ಭರ್ಜರಿ ಜಯ ಕಂಡಿತ್ತು. ಕಾಂಗ್ರೆಸ್‌-ಶರದ್‌ ಪವಾರ್‌ ಎನ್‌ಸಿಪಿ-ಠಾಕ್ರೆ ಶಿವಸೇನೆ ಇರುವ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಹೀನಾಯ ಸೋಲು ಕಂಡಿತ್ತು.

ಈ ಹಿಂದೆ ಕೂಡ ಅಮೆರಿಕ ಭೇಟಿ ವೇಳೆ ರಾಹುಲ್‌, ‘ಮಹಾರಾಷ್ಟ್ರ ಚುನಾವಣೆಯಲ್ಲಿ ಭಾರಿ ಅಕ್ರಮ ನಡೆದಿತ್ತು’ ಎಂದು ಆರೋಪಿಸಿದ್ದರು.

ಅಕ್ರಮ ಆಗಿದ್ದು ಹೇಗೆ?:2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎನ್ನುವುದನ್ನು ಸಾಬೀತುಪಡಿಸಲು ಕೆಲ ಅಂಶಗಳನ್ನೂ ರಾಹುಲ್‌ ಉಲ್ಲೇಖಿಸಿದ್ದಾರೆ.

‘ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ 2019ರ ಚುನಾವಣೆ ವೇಳೆ 8.98 ಕೋಟಿ ಮತದಾರರ ನೋಂದಣಿಯಾಗಿತ್ತು. 2024ರ ಮೇನಲ್ಲಿ ಅದು 9.92 ಕೋಟಿಗೆ ತಲುಪಿತು. ಅದೇ ವರ್ಷದ (2024ರ) ನವೆಂಬರ್‌ನಲ್ಲಿ 9.70 ಕೋಟಿ ಆಯಿತು. 5 ವರ್ಷದಲ್ಲಿ 31 ಲಕ್ಷ ಮತದಾರರಷ್ಟೇ ಸೇರ್ಪಡೆಯಾಗಿದ್ದರೆ, 2024ರಲ್ಲಿ 5 ತಿಂಗಳಲ್ಲೇ 41 ಲಕ್ಷ ಜನರ ನೋಂದಣಿಯಾಗಿದೆ. ಗಮನಿಸಬೇಕಾದ ಅಂಶವೆಂದರೆ, ಸರ್ಕಾರಿ ಕಡತಗಳ ಪ್ರಕಾರ, ರಾಜ್ಯದಲ್ಲಿ 9.54 ಕೋಟಿ ಜನರಷ್ಟೇ ಮತದಾನಕ್ಕೆ ಯೋಗ್ಯ ವಯಸ್ಸಿನವರಾಗಿದ್ದರೂ, ಪತದಾರರ ಪಟ್ಟಿಯಲ್ಲಿ 9.70 ಕೋಟಿ ಜನರಿದ್ದರು. ಆ ಚುನಾವಣೆಯಲ್ಲಿ, ಇದ್ದಕ್ಕಿದ್ದಂತೆ ಕಡಿಮೆ ಅವಧಿಯಲ್ಲಿ ಮತದಾನದ ಪ್ರಮಾಣವೂ ಹೆಚ್ಚಿತು’ ಎಂದು ಅವರು ಹೇಳಿದ್ದಾರೆ.

ಇಲ್ಲದೆ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಂಜೆ 5ರ ನಂತರ ಅಸಹಜ ರೀತಿ ಮತದಾನವಾಗಿದೆ. ಸಂಜೆ 5 ಗಂಟೆವರೆಗೆ ಶೇ.58.22 ಇದ್ದ ಮತದಾನ ಪ್ರಮಾಣ 6 ಗಂಟೆಗೆ 66.5ಕ್ಕೆ ಏರಿದೆ. ಒಂದೇ ತಾಸಲ್ಲಿ 76 ಲಕ್ಷ ಮತಗಳ (ಶೇ.7.83) ಚಲಾವಣೆ ಅಸಹಜ’ ಎಂದಿದ್ದಾರೆ.

ಮತಗಟ್ಟೆಯ ಸಿಸಿಟೀವಿ ದೃಶ್ಯಾವಳಿಗಳು ಸೇರಿದಂತೆ ಎಲೆಕ್ಟ್ರಾನಿಕ್‌ ಕಡತಗಳನ್ನು ಸಾರ್ವಜನಿಕರು ಪಡೆಯದಂತೆ ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದ ಸರ್ಕಾರದ ನಡೆಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್‌, ‘ಮತದಾರರ ಪಟ್ಟಿ ಮತ್ತು ಸಿಸಿಟಿವಿ ದೃಶ್ಯಾವಳಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸಲು ಬಳಸಬೇಕಾದ ಸಾಧನಗಳಾಗಿವೆ. ಮುಚ್ಚಿಡಲು ಅವುಗಳು ಆಭರಣಗಳಲ್ಲ. ಇಂತಹ ಯಾವುದೇ ಕಡತವನ್ನು ಅಳಿಸಿಹಾಕಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಕ್ಕು ಭಾರತದ ಜನರಿಗಿದೆ. ಇದು ಸಣ್ಣ ಮಟ್ಟದ ವಂಚನೆಯಲ್ಲ. 

ಬದಲಿಗೆ ನಾನು ಹೇಳುತ್ತಿರುವುದು, ರಾಷ್ಟ್ರೀಯ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಸಂಚಿನ ಬಗ್ಗೆ’ ಎಂದು ರಾಹುಲ್‌ ತಮ್ಮ ಲೇಖನದಲ್ಲಿ ಬರೆದಿದ್ದಾರೆ.‘ಮೋಸ ಮಾಡಿದವರು ಗೆಲ್ಲಬಹುದು. ಆದರೆ ಇದರಿಂದ ಸಂಸ್ಥೆಗಳಿಗೆ ಹಾನಿಯಾಗುತ್ತದೆ. ಜೊತೆಗೆ ಫಲಿತಾಂಶದ ಮೇಲಿನ ನಂಬಿಕೆಯನ್ನು ಸಾರ್ವಜನಿಕರು ಕಳೆದುಕೊಳ್ಳುತ್ತಾರೆ. ಭಾರತೀಯರೆಲ್ಲ ಇದಕ್ಕೆ ಸಾಕ್ಷ್ಯ ಕೇಳಬೇಕು. ಉತ್ತರಕ್ಕಾಗಿ (ಬಿಜೆಪಿಯನ್ನು) ಒತ್ತಾಯಿಸಬೇಕು. ಇಲ್ಲದಿದ್ದರೆ ಮುಂದಿನ ಬಿಹಾರ ಚುನಾವಣೆ ಮತ್ತು ಬಿಜೆಪಿಗೆ ಹಿನ್ನಡೆಯಾಗುವ ಸಂಭವವಿರುವಾಗಲೆಲ್ಲಾ ಮ್ಯಾಚ್‌ ಫಿಕ್ಸಿಂಗ್‌ ನಡೆಯುತ್ತದೆ’ ಎಂದು ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ
ಇರಾನ್‌ ಮೇಲೆ ಟ್ರಂಪ್‌ ಮಾತಲ್ಲೇ ಬಾಂಬ್‌ ದಾಳಿ