ಅಮೆರಿಕವನ್ನು ಕಂಡುಹಿಡಿದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅಲ್ಲ, ಭಾರತೀಯ ಪೂರ್ವಜರು : ಇಂದರ್ ಸಿಂಗ್ ಪರ್ಮಾರ್

KannadaprabhaNewsNetwork |  
Published : Sep 12, 2024, 01:51 AM ISTUpdated : Sep 12, 2024, 05:11 AM IST
 ಮ.ಪ್ರ. ಸಚಿವ | Kannada Prabha

ಸಾರಾಂಶ

ಅಮೆರಿಕವನ್ನು ಕಂಡುಹಿಡಿದಿದ್ದು ಕ್ರಿಸ್ಟೋಫರ್ ಕೊಲಂಬಸ್ ಅಲ್ಲ, ಭಾರತೀಯ ಪೂರ್ವಜರು ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹೇಳಿದ್ದಾರೆ. 8ನೇ ಶತಮಾನದಲ್ಲಿ ಭಾರತೀಯ ನಾವಿಕ ವಸುಲೂನ್ ಅಮೆರಿಕಕ್ಕೆ ತೆರಳಿ ದೇವಾಲಯಗಳನ್ನು ನಿರ್ಮಿಸಿದ್ದಾಗಿ ಅವರು ಹೇಳಿದ್ದಾರೆ. 

 ಭೋಪಾಲ :  ‘ಅಮೆರಿಕವನ್ನು ಕಂಡುಹಿಡಿದಿದ್ದು ಕ್ರಿಸ್ಟೋಫರ್‌ ಕೊಲಂಬಸ್‌ ಅಲ್ಲ. ಆ ದೇಶವನ್ನು ಕಂಡುಹಿಡಿದ್ದು ನಮ್ಮ ಭಾರತೀಯ ಪೂರ್ವಜರು. ಅದೇ ರೀತಿ ಪೋರ್ಚುಗೀಸ್‌ ನಾವಿಕ ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ ಎಂದೂ ನಮ್ಮ ಮಕ್ಕಳಿಗೆ ತಪ್ಪು ಇತಿಹಾಸ ಬೋಧಿಸಲಾಗುತ್ತಿದೆ’ ಎಂದು ಮಧ್ಯಪ್ರದೇಶದ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾರ್‌ ಹೇಳಿದ್ದಾರೆ.

ವಿಶ್ವವಿದ್ಯಾಲಯವೊಂದರ ಘಟಿಕೋತ್ಸವದಲ್ಲಿ ಮಂಗಳವಾರ ಮಾತನಾಡಿದ ಅವರು, ‘8ನೇ ಶತಮಾನದಲ್ಲಿ ಭಾರತದ ಮಹಾನ್‌ ನಾವಿಕ ವಸುಲೂನ್‌ ಎಂಬಾತ ಅಮೆರಿಕಕ್ಕೆ ಹೋಗಿ, ಅಲ್ಲಿನ ಸ್ಯಾಂಟಿಯಾಗೋದಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದ್ದ. ಇದರ ಬಗ್ಗೆ ಈಗಲೂ ಅಲ್ಲಿನ ಮ್ಯೂಸಿಯಂಗಳಲ್ಲಿ ಹಾಗೂ ಲೈಬ್ರರಿಗಳಲ್ಲಿ ದಾಖಲೆಗಳಿವೆ’ ಎಂದು ಹೇಳಿದರು.

‘ಅದೇ ರೀತಿ ವಾಸ್ಕೋ ಡ ಗಾಮಾ ಭಾರತವನ್ನು ಕಂಡುಹಿಡಿದ ಎಂದು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಆದರೆ ವಾಸ್ಕೋ ಡ ಗಾಮನ ಆತ್ಮಕತೆಯನ್ನು ಓದಿ, ಇತಿಹಾಸಕಾರರು ಸರಿಯಾದ ಇತಿಹಾಸ ಕಲಿಸಬಹುದಿತ್ತು. ಆಫ್ರಿಕಾದ ಜಂಜಿಬಾರ್‌ ಬಂದರಿನಲ್ಲಿ ವಾಸ್ಕೋ ಡ ಗಾಮನು ಗುಜರಾತಿನ ವ್ಯಾಪಾರಿ ಚಂದನ್‌ ಬಳಿ ಭಾರತವನ್ನು ನೋಡುವ ಆಸೆ ವ್ಯಕ್ತಪಡಿಸುತ್ತಾನೆ. ಆಗ ಚಂದನ್‌ ತನ್ನ ಹಡಗನ್ನು ಹಿಂಬಾಲಿಸುವಂತೆ ಹೇಳುತ್ತಾನೆ. ಹಾಗೆ ವಾಸ್ಕೋ ಡ ಗಾಮ ಭಾರತಕ್ಕೆ ತಲುಪುತ್ತಾನೆ. ಚಂದನ್‌ನ ಹಡಗು ತನ್ನ ಹಡಗಿಗಿಂತ ಬಹಳ ದೊಡ್ಡದಿತ್ತು ಎಂದೂ ವಾಸ್ಕೋ ಡ ಗಾಮ ಆತ್ಮಕತೆಯಲ್ಲಿ ಬರೆದಿದ್ದಾನೆ’ ಎಂದೂ ಪರ್ಮಾರ್‌ ತಿಳಿಸಿದ್ದಾರೆ.

‘ಭಾರತೀಯರು ಅಮೆರಿಕವನ್ನು ಕಂಡುಹಿಡಿದ ಮೇಲೆ ಅಲ್ಲಿನ ಮೂಲನಿವಾಸಿಗಳನ್ನು ಗೌರವಿಸಿದರು. ಆದರೆ ಕೊಲಂಬಸ್‌ ಅಮೆರಿಕಕ್ಕೆ ತೆರಳಿದ ಮೇಲೆ ಯುರೋಪಿಯನ್ನರು ಅಮೆರಿಕದ ಮೂಲನಿವಾಸಿಗಳಿಗೆ ಚಿತ್ರಹಿಂಸೆ ನೀಡಿ, ಅವರನ್ನು ಮತಾಂತರಿಸಿದರು. ವಿದ್ಯಾರ್ಥಿಗಳಿಗೆ ಕಲಿಸುವುದಿದ್ದರೆ ಈ ವಿಷಯ ಕಲಿಸಿ’ ಎಂದು ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಜನನಾಯಗನ್‌ಗೆ ಸಿಹಿ - ಕಹಿ! - ಜ.21ರವರೆಗೆ ವಿಜಯ್‌ ನಟನೆಯ ಚಿತ್ರ ಬಿಡುಗಡೆ ಇಲ್ಲ
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ