ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ವಿಭಾಗೀಯ ಪೀಠ ತಡೆ ನೀಡಿ ಜ.21ಕ್ಕೆ ವಿಚಾರಣೆ ಮುಂದೂಡಿದ ಪ್ರಸಂಗ ಶುಕ್ರವಾರ ನಡೆದಿದೆ.
ಚೆನ್ನೈ : ನಟ, ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರ ಬಹುನಿರೀಕ್ಷಿತ ಚಿತ್ರ ‘ಜನನಾಯಗನ್’ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ, ವಿಭಾಗೀಯ ಪೀಠ ತಡೆ ನೀಡಿ ಜ.21ಕ್ಕೆ ವಿಚಾರಣೆ ಮುಂದೂಡಿದ ಪ್ರಸಂಗ ಶುಕ್ರವಾರ ನಡೆದಿದೆ. ಹೀಗಾಗಿ ಜ.21ರವರೆಗೆ ಚಿತ್ರಕ್ಕೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ.
ಮಿತಿಮೀರಿದ ಹಿಂಸಾತ್ಮಕ ದೃಶ್ಯ
ಚಿತ್ರದಲ್ಲಿ ಸೇನೆಯ ಲಾಂಛನ ಬಳಸಲಾಗಿದೆ ಹಾಗೂ ಮಿತಿಮೀರಿದ ಹಿಂಸಾತ್ಮಕ ದೃಶ್ಯಗಳಿವೆ ಎಂಬುದು ವಿವಾದದ ಮೂಲ. ಈ ವಿವಾದದ ಹಿನ್ನೆಲೆಯಲ್ಲಿ ‘ಜನನಾಯಗನ್’ ಚಿತ್ರದ ಬಿಡುಗಡೆಗೆ ಸೆನ್ಸಾರ್ ಮಂಡಳಿ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಶುಕ್ರವಾರ ಬೆಳಗ್ಗೆ ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕದಸ್ಯ ಪೀಠ, ‘ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್ (ಸಿಬಿಎಸ್‌ಸಿ) ಸೂಚನೆಯಂತೆ ಕೆಲ ಅಂಶಗಳಿಗೆ ಕತ್ತರಿ ಹಾಕಿದ ಹೊರತಾಗಿಯೂ ಕೊನೇ ಕ್ಷಣದಲ್ಲಿ ಪ್ರಮಾಣಪತ್ರ ತಡೆಹಿಡಿದಿದ್ದು ಸರಿಯಲ್ಲ’ ಎಂದಿತು. ಜತೆಗೆ ತಕ್ಷಣ ಯು/ಎ ಪ್ರಮಾಣ ಪತ್ರ ನೀಡುವಂತೆಯೂ ಸಿಬಿಎಸ್‌ಸಿಗೆ ನಿರ್ದೇಶನ ನೀಡಿತು.
ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ
ಇದರ ವಿರುದ್ಧ ಸಿಬಿಎಸ್‌ಸಿ, ತಕ್ಷಣ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ। ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾ। ಜಿ.ಅರುಳ್ ಮುರಗನ್ ಅವರಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿದೆ.
ಪೂರ್ಣಪ್ರಮಾಣದಲ್ಲಿ ರಾಜಕೀಯ ಪ್ರವೇಶ ಘೋಷಿಸುವ ಮುನ್ನ ವಿಜಯ್ ನಟಿಸಿದ ಕೊನೆಯ ಚಿತ್ರ ಜನನಾಯಗನ್ ಎಂದು ಹೇಳಲಾಗುತ್ತಿದೆ. ಈ ಚಿತ್ರ ಜ.9ರಂದು ಬಿಡುಗಡೆಯಾಗಬೇಕಿದ್ದರೂ ಕೊನೇ ಕ್ಷಣದಲ್ಲಿ ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಚಿತ್ರ ಬಿಡುಗಡೆ ಮುಂದೂಡಿಕೆಯಿಂದ ವಿತರಕರಿಗೆ ಕೋಟ್ಯಂತರ ರುಪಾಯಿ ನಷ್ಟ ಆಗಿದೆ.
