ಪಶ್ಚಿಮ ಬಂಗಾಳದ ಬಳಿಕ ಇದೀಗ ನೆರೆಯ ಅಸ್ಸಾಂನಲ್ಲೂ ವಕ್ಫ್‌ ವಿರೋಧಿ ಹೋರಾಟಗಾರ ಹಿಂಸಾಚಾರ

KannadaprabhaNewsNetwork |  
Published : Apr 14, 2025, 01:25 AM ISTUpdated : Apr 14, 2025, 04:40 AM IST
ಗಲಭೆ | Kannada Prabha

ಸಾರಾಂಶ

ಪಶ್ಚಿಮ ಬಂಗಾಳದ ಬಳಿಕ ಇದೀಗ ನೆರೆಯ ಅಸ್ಸಾಂನಲ್ಲೂ ವಕ್ಫ್‌ ವಿರೋಧಿ ಹೋರಾಟಗಾರರು ಹಿಂಸಾಚಾರ ನಡೆಸಿದ್ದಾರೆ. ಭಾನುವಾರ ಕಚಾರ್‌ ಜಿಲ್ಲೆಯಲ್ಲಿ ಗುಂಪೊಂದು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದೆ.

 ಗುವಾಹಟಿ: ಪಶ್ಚಿಮ ಬಂಗಾಳದ ಬಳಿಕ ಇದೀಗ ನೆರೆಯ ಅಸ್ಸಾಂನಲ್ಲೂ ವಕ್ಫ್‌ ವಿರೋಧಿ ಹೋರಾಟಗಾರರು ಹಿಂಸಾಚಾರ ನಡೆಸಿದ್ದಾರೆ. ಭಾನುವಾರ ಕಚಾರ್‌ ಜಿಲ್ಲೆಯಲ್ಲಿ ಗುಂಪೊಂದು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದೆ.

ಕಚಾರ್‌ ಜಿಲ್ಲೆಯ ಸಿಲ್ಚಾರ್‌ ಪ್ರದೇಶದಲ್ಲಿ ವಕ್ಫ್‌ ತಿದ್ದುಪಡಿ ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ಕೈಗೊಂಡಿದ್ದರು. ಆರಂಭದಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ಭಿತ್ತಿಪತ್ರಗಳನ್ನು ಹಿಡಿದು ಈ ಇಸ್ಲಾಂ ವಿರೋಧಿ ಎನ್ನುವ ಘೋಷಣೆಗಳನ್ನು ಕೂಗುತ್ತಾ, ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದರು.

ಪೊಲೀಸರಿಂದ ಲಾಠಿ ಚಾರ್ಜ್‌:

ಈ ನಡುವೆ ಪ್ರತಿಭಟನೆಯ ಗುಂಪಿಗೆ ಪ್ರವೇಶಿಸಿದ ಕೆಲ ಯುವಕರು ಪೊಲೀಸರ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದರು. ಆ ಬಳಿಕ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಚಾರ್ಚ್‌ ನಡೆಸಬೇಕಾಯಿತು. ಆ ಬಳಿಕ ಇದ್ದಕ್ಕಿದಂತೆ ಪ್ರತಿಭಟನೆ ಹಿಂಸೆಗೆ ತಿರುಗಿತು. ಸಿಲ್ಚಾರ್‌ನ ಚಾಮ್ರಗುಡಂ, ಬೆರೆಂಗಾ ಮತ್ತು ಹಳೆಯ ಲಖೀಪುರ ರಸ್ತೆಗಳಲ್ಲಿ ಹಿಂಸಾಚಾರ ನಡೆಯಿತು.

ಈ ಬಗ್ಗೆ ಕ್ಯಾಚರ್‌ ಎಸ್ಪಿ ನುಮಲ್ ಮಹತ್ತಾ ಪ್ರತಿಕ್ರಿಯಿಸಿ, ‘ಶಾಂತಿಯುತವಾಗಿ ಪ್ರತಿಭಟನೆ ನಡೆಯುತ್ತಿತ್ತು. 300-400 ಜನರು ಸೇರಿದ್ದರು. ಆದರೆ ಕೆಲವರು ರ್‍ಯಾಲಿ ಪ್ರವೇಶಿಸಿ ಕಾನೂನು ಸುವ್ಯವಸ್ಥೆಗೆ ತೊಂದರೆ ಕೊಡಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿದ್ದೇವೆ. ಜನಸಮೂಹವನ್ನು ಚದರಿಸಲು ಪೊಲೀಸರು ಸಮಂಜಸ ಬಲ ಪ್ರಯೋಗಿಸಿದರು’ ಎಂದರು.

ಶನಿವಾರಷ್ಟೇ ಅಸ್ಸಾಂ ಸಿಎಂ ಹಿಮಂತ ಶರ್ಮಾ ಅಸ್ಸಾಂನಲ್ಲಿ ವಕ್ಫ್ ತಿದ್ದುಪಡಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆ ನಡೆಯದಿದ್ದಕ್ಕೆ ಮುಸ್ಲಿಂ ಸಮುದಾಯಕ್ಕೆ ಧನ್ಯವಾದ ತಿಳಿಸಿದ್ದರು. ಅಲ್ಲದೇ ಪೊಲೀಸರ ಕ್ರಮಗಳನ್ನು ಶ್ಲಾಘಿಸಿದ್ದರು. ಈ ಬೆನ್ನಲ್ಲೇ ಹಿಂಸಾಚಾರ ನಡೆದಿದೆ.

ಬಂಗಾಳದ ಹಿಂದೂಗಳ ನೋವಿನ ಕಥೆ

ಕೋಲ್ಕತಾ: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದೆರಡು ದಿನದಿಂದ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಮುರ್ಶಿದಾಬಾದ್‌ ಜಿಲ್ಲೆ ಅಕ್ಷರಶಃ ಸ್ಮಶಾನದಂತಾಗಿದೆ. ರಸ್ತೆ ಬದಿ ನಿಲ್ಲಿಸಲಾಗಿದ್ದ ವಾಹನಗಳು ಸುಟ್ಟು ಕರಕಲಾಗಿ ಅಸ್ತಿಪಂಜರದಂತೆ ಕಾಣುತ್ತಿವೆ. ಶಾಪಿಂಗ್‌ ಮಳಿಗೆಗಳನ್ನು ಕೊಳ್ಳೆ ಹೊಡಯಲಾಗಿದೆ. ಈ ವೇಳೆ ದಾಳಿಗೊಳಗಾದ ಹಿಂದೂಗಳು ತಮ್ಮ ನೋವಿನ ಕಥೆ ಬಿಚ್ಚಿಟ್ಟಿದ್ದಾರೆ.

ಉದ್ರಿಕ್ತರು ಬಾಂಬ್‌ ಸಿಡಿಸಿ ಎಲ್ಲಾ ಧ್ವಂಸ ಮಾಡಿದರು

‘ಇದ್ದಕ್ಕಿದ್ದಂತೆ ನೂರಾರು ಜನ ಶಸ್ತ್ರಾಸ್ತ್ರಗಳನ್ನು ಹಿಡಿದು ಅದೆಲ್ಲಿಂದಲೋ ನುಗ್ಗಿ ಬಂದರು. ನಿಮ್ಮ ಸಮುದಾಯದವರು ವಕ್ಫ್‌ ಕಾಯ್ದೆಯ ಮೂಲಕ ಭೂಮಿಯನ್ನು ಕಸಿದುಕೊಳ್ಳುವುದರಲ್ಲಿ ಸಹಕರಿಸುತ್ತಿರುವುದರಿಂದ ಯಾರನ್ನೂ ಈ ಪ್ರದೇಶದಲ್ಲಿ ವಾಸಿಸಲು ಬಿಡುವುದಿಲ್ಲ ಎಂದು ಅವರು ಕೂಗುತ್ತಿದ್ದರು. ನಾವು ಗೋಗರೆದದ್ದರಿಂದ ಏನೂ ಮಾಡದೆ ಬಿಟ್ಟರಾದರೂ, ನಮ್ಮ ಆಸ್ತಿಗಳ ಮೇಲೆ ಬಾಂಬ್‌ ಸಿಡಿಸಿ ಎಲ್ಲವನ್ನೂ ಧ್ವಂಸ ಮಾಡಿದರು’ ಎಂದು ಮುರ್ಶಿದಾಬಾದ್‌ ನಿವಾಸಿಯೊಬ್ಬರು ಕಣ್ಣೀರಿಟ್ಟರು.==

ಔಷಧಾಲಯದೊಳಗೇ ನುಗ್ಗಿ ನಮ್ಮನ್ನು ಥಳಿಸತೊಡಗಿದರು

ಸುಟಿ ಎಂಬಲ್ಲಿ ಔಷಧಾಲಯವೊಂದರ ಮಾಲೀಕ ಮಾತನಾಡಿ, ‘ನಾನಿಲ್ಲಿ 50 ವರ್ಷದಿಂದ ವಾಸಿಸುತ್ತಿದ್ದೇನೆ. ಆದರೆ ಇಂತಹ ಹತ್ಯಾಕಾಂಡವನ್ನು ಎಂದೂ ಕಂಡಿಲ್ಲ. ಉದ್ರಿಕ್ತರ ಗುಂಪೊಂದು ಇದ್ದಕ್ಕಿದ್ದಂತೆ ನಮ್ಮ ಅಂಗಡಿಯೊಳಗೆ ನುಗ್ಗಿ ನನ್ನನ್ನು ಮತ್ತು ಇತರೆ ಕೆಲಸಗಾರರನ್ನು ಥಳಿಸತೊಡಗಿತು. ಕೂಡಲೇ ನಾವು ಅಲ್ಲಿಂದ ಓಡಿದೆವು’ ಎಂದು ತಮ್ಮ ದಾರುಣ ಸ್ಥಿತಿಯನ್ನು ವಿವರಿಸಿದರು.==

ಮನೆಯಿಂದ ಹೊರಗೆಳೆದು ಕೊಚ್ಚಿ ಕೊಂದುಹಾಕಿದರು

ತಮ್ಮ ಪಕ್ಕದ ಮನೆಯಲ್ಲಿ ನಡೆದ ಅಮಾನವೀಯ ಘಟನೆ ಬಗ್ಗೆ ಮಾತನಾಡಿದ ಮಹಿಳೆಯೊಬ್ಬರು, ‘ಅವರನ್ನು ಮನೆಯಿಂದ ಹೊರಗೆ ಎಳೆದುತಂದು ಕೊಚ್ಚಿ ಕೊಂದುಹಾಕಿದರು. ಮುಂದುವರೆದು, ಮನೆಯ ಪೀಠೋಪಕರಣಗಳನ್ನೆಲ್ಲಾ ಮುರಿದುಹಾಕಿ, ಪಾತ್ರೆ-ಪಗಡಿಗಳನ್ನು ಹೊರಗೆಸೆದರು. ನಮಗೆ ಹೊರಗೆ ಹೋಗಲು ಇನ್ನೂ ಭಯವಾಗುತ್ತಿದೆ’ ಎಂದು ತಾವು ಕಂಡ ಭೀಭತ್ಸ ದೃಶ್ಯವನ್ನು ವಿವರಿಸಿದರು.

ಚಹಾ ಆಸ್ವಾದಿಸುವ ಪೋಸ್ಟ್ ಹಾಕಿದ ಸಂಸದ ಪಠಾಣ್‌, ಕೆಲವರಿಂದ ಆಕ್ಷೇಪ

ನವದೆಹಲಿ: ವಕ್ಫ್‌ ಬೋರ್ಡ್‌ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆಯಿಂದಾಗಿ ಪಶ್ಚಿಮ ಬಂಗಾಳವು ಹೊತ್ತಿ ಉರಿಯುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಚಹಾ ಆಸ್ವಾದಿಸುವ ಪೋಸ್ಟ್‌ ಹಾಕಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.ಎರಡು ದಿನಗಳ ಹಿಂದಷ್ಟೇ ಪಠಾಣ್‌ ಅವರು ಇನ್‌ಸ್ಟಾಗ್ರಾಂನಲ್ಲಿ ತಾವು ಚಹಾ ಸೇವಿಸುತ್ತಿರುವ ಮೂರು ಚಿತ್ರಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ''''ನೆಮ್ಮದಿಯ ಮಧ್ಯಾಹ್ನ, ಒಳ್ಳೆಯ ಚಹಾ ಮತ್ತು ಶಾಂತ ವಾತಾವರಣ'''' ಎಂದು ಅಡಿಬರಹ ಹಾಕಿದ್ದರು. ಇದಕ್ಕೆ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನೆರೆಯ ಮುರ್ಷಿದಾಬಾದ್‌ನಲ್ಲಿ ಬಿಗುವಿನ ವಾತಾವರಣ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು, ನಿಮಗೆ ಏನಾದರೂ ನಾಚಿಕೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಯೂಸುಫ್‌ ಪಠಾಣ್‌ ಅವರ ಈ ಪೋಸ್ಟ್‌ ಮುಂದಿಟ್ಟುಕೊಂಡು ಬಿಜೆಪಿ ಕೂಡ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಂಗಾಳದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದ್ದರೆ ಸಂಸದರೂ ಆದ ಯೂಸುಫ್‌ ಪಠಾಣ್‌ ಅವರು ಟೀ ಆಸ್ವಾದಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್‌ ಪೂನವಾಲಾ ಅವರು ಆರೋಪಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೈಸೂರು ಸ್ಯಾಂಡಲ್ ಸೋಪು ಉತ್ಪನ್ನ : ದಾಖಲೆ ಬರೆದ ಕೆಎಸ್‌ಡಿಎಲ್‌
ಮೇಘಾಲಯ ಮೇಲಿಲ್ಲ ಬಾಂಗ್ಲಾ ಸಂಘರ್ಷ ಪರಿಣಾಮ : ವಿಜಯ್‌