ಇಂದಿರಾ ಗಾಂಧಿ ‘3ನೇ ಪುತ್ರ’ ಕಮಲನಾಥ್‌ ಬಿಜೆಪಿಯತ್ತ?

KannadaprabhaNewsNetwork | Updated : Feb 18 2024, 08:05 AM IST

ಸಾರಾಂಶ

ಕಾಂಗ್ರೆಸ್‌ನ ಹಿರಿಯ ನಾಯಕರ ಬಿಜೆಪಿ ಕಡೆಗಿನ ವಲಸೆ ಮುಂದುವರೆಯುತ್ತಿದ್ದು, ಸ್ವತಃ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ತಮ್ಮ ಮೂರನೇ ಪುತ್ರ ಎಂದು ಕರೆಸಿಕೊಂಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.

ಭೋಪಾಲ್‌/ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕರ ಬಿಜೆಪಿ ಕಡೆಗಿನ ವಲಸೆ ಮುಂದುವರೆಯುತ್ತಿದ್ದು, ಸ್ವತಃ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದಲೇ ತಮ್ಮ ಮೂರನೇ ಪುತ್ರ ಎಂದು ಕರೆಸಿಕೊಂಡಿದ್ದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎಂಬ ವದಂತಿ ದೆಹಲಿ ರಾಜಕೀಯ ವಲಯದಲ್ಲಿ ಭಾರೀ ಪ್ರಮಾಣದಲ್ಲಿ ಹಬ್ಬಿದೆ.

ಇದಕ್ಕೆ ಪೂರಕವೆಂಬಂತೆ ಕಮಲ್‌ನಾಥ್‌ ತಮ್ಮ ಪುತ್ರ ಮತ್ತು ಸಂಸದ ನಕುಲ್‌ನಾಥ್‌ ಅವರ ಜೊತೆಗೆ ಶನಿವಾರ ದೆಹಲಿಗೆ ಆಗಮಿಸಿದ್ದಾರೆ.

ಮತ್ತೊಂದೆಡೆ ಛಿಂಡ್ವಾರ ಕ್ಷೇತ್ರದ ಸಂಸದರೂ ಆಗಿರುವ ನಕುಲ್‌ ಮತ್ತು ಕಮಲ್‌ನಾಥ್‌ರ ಹಲವು ಹಿಂಬಾಲಕ ಕಾಂಗ್ರೆಸ್‌ ನಾಯಕರು ತಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳಿಂದ ಕಾಂಗ್ರೆಸ್‌ ಎಂಬ ಪದ ತೆಗೆದು ಹಾಕಿದ್ದಾರೆ.

ಆದರೆ ಪಕ್ಷದ ಹಿರಿಯ ನಾಯಕರಾದ ದಿಗ್ವಿಜಯ್‌ ಸಿಂಗ್‌ ಮತ್ತು ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಜೀತು ಪಟ್ವಾರಿ ಮಾತ್ರ, ಯಾವುದೇ ಕಾರಣಕ್ಕೂ ಕಮಲ್‌ನಾಥ್‌ ಕಾಂಗ್ರೆಸ್‌ ತೊರೆಯಲ್ಲ. ಅವರು ನಾಲ್ಕೂವರೆ ದಶಕಗಳಿಂದಲೂ ಕಾಂಗ್ರೆಸ್‌ನ ಕಟ್ಟಾಳು. 

ಸ್ವತಃ ಇಂದಿರಾ ಅವರಿಂದಲೇ ಹಲವು ಬಾರಿ ನನ್ನ ಮೂರನೇ ಪುತ್ರ ಎಂದು ಮೆಚ್ಚುಗೆಯ ಮಾತುಗಳನ್ನು ಪಡೆದವರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯತ್ತ ಹೆಜ್ಜೆ?
ಇತ್ತೀಚಿನ ವಿಧಾನಸಭಾ ಚುನಾವಣೆ ಸೋಲಿನ ಬಳಿಕ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ತೆಗೆದುಹಾಕಲ್ಪಟ್ಟ ಕಮಲ್‌ನಾಥ್‌ ಬಿಜೆಪಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ. 

ರಾಜ್ಯದಲ್ಲಿ ಪಕ್ಷದ ಇನ್ನೋರ್ವ ನಾಯಕ ದಿಗ್ವಿಜಯ್‌ ಸಿಂಗ್‌ ಜೊತೆಗಿನ ಆಂತರಿಕ ಸಂಘರ್ಷ, ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್‌ ನಿರಾಕರಿಸಿದ್ದು, ರಾಹುಲ್‌ ಗಾಂಧಿ ಜೊತೆಗಿನ ಮುನಿಸು ಮತ್ತು ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಬೇಸತ್ತು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. 

ಮುಂದಿನ 48 ಗಂಟೆಗಳಲ್ಲಿ ಅವರು ತಮ್ಮ ಪುತ್ರ ಮತ್ತು ಇತರೆ ಹಲವು ನಾಯಕರ ಜೊತೆಗೂಡಿ ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ಈ ಸಂಬಂಧ ಶನಿವಾರ ದೆಹಲಿಗೆ ಆಗಮಿಸಿದ ಕಮಲ್‌ನಾಥ್‌ ಅವರನ್ನು ಸುದ್ದಿಗಾರರು ಪ್ರಶ್ನಿಸಿದಾಗ ಕಾಂಗ್ರೆಸ್‌ ಬಿಡುವುದನ್ನು ನಿರಾಕರಿಸುವುದಾಗಲೀ, ಬಿಜೆಪಿ ಸೇರುವುದನ್ನು ತಳ್ಳಿಹಾಕುವುದನ್ನಾಗಿ ಮಾಡದೇ ‘ಅಂಥ ಯಾವುದೇ ಬೆಳವಣಿಗೆಗಳು ಇದ್ದರೆ ಮೊದಲು ನಿಮಗೇ ತಿಳಿಸುತ್ತೇನೆ’ ಎಂದು ಹೇಳಿ ತೆರಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌, ಮಿಲಿಂದ್‌ ದೇವ್ರಾ, ಬಾಬಾ ಸಿದ್ಧಿಕಿ ಕೂಡಾ ಕಾಂಗ್ರೆಸ್‌ ತೊರೆದಿದ್ದರು.

Share this article