ನವದೆಹಲಿ: ಸಮಾಜದಲ್ಲಿನ ಅಸಮಾನತೆ ನಿವಾರಣೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ದೇಶವ್ಯಾಪಿ ಜಾತಿಗಣತಿ ನಡೆಸುವ ಕಾಂಗ್ರೆಸ್ ಭರವಸೆಯನ್ನು ಅವರದ್ದೇ ಪಕ್ಷದ ನಾಯಕ ಆನಂದ್ ಶರ್ಮಾ ವಿರೋಧಿಸಿದ್ದಾರೆ. ಈ ಎರಡೂ ಸಮಸ್ಯೆ ನಿವಾರಣೆಗೆ ಜಾತಿಗಣತಿ ರಾಮಬಾಣವಾಗದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿರುವ ಶರ್ಮಾ, ‘ಕಾಂಗ್ರೆಸ್ ಎಂದಿಗೂ ಐಡೆಂಟಿಟಿ ಪಾಲಿಟಿಕ್ಸ್ ಅನ್ನು ಪ್ರೋತ್ಸಾಹಿಸಿಯೂ ಇಲ್ಲ, ಅದರ ಜೊತೆ ಗುರುತಿಸಿಕೊಂಡಿಯೂ ಇಲ್ಲ. ಆದರೆ ಇದೀಗ ಪಕ್ಷ ತನ್ನ ಸಿದ್ದಾಂತದಿಂದ ದೂರ ಸರಿಯುತ್ತಿರುವುದು ಕಳವಳಕಾರಿ ಬೆಳವಣಿಗೆ’ ಎಂದಿದ್ದಾರೆ.
ಜೊತೆಗೆ, ‘1931ರ ಬಳಿಕ ದೇಶದಲ್ಲಿ ಜಾತಿ ಗಣತಿ ನಡೆಸಿಲ್ಲ. ಎಸ್‌ಸಿ, ಎಸ್ಟಿ ಹೊರತುಪಡಿಸಿ ಉಳಿದ ಜಾತಿಗಳನ್ನು ಪ್ರಸ್ತಾಪಿಸುವ ಅಂಶಗಳಿಲ್ಲ. ಇದು ಉದ್ದೇಶಪೂರ್ವಕ ನಿಲುವಾಗಿತ್ತು.
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕದ ಅಲ್ಲಾ ಜನಗಣತಿ ಆಯುಕ್ತರೂ, ಜನಗಣತಿ ವೇಳೆ ಜಾತಿಗಣತಿ ಏಕೆ ಮಾಡಬಾರದು ಎಂಬುದಕ್ಕೆ ಸ್ಪಷ್ಟ ಕಾರಣಗಳನ್ನು ನೀಡುತ್ತಲೇ ಬಂದಿದ್ದಾರೆ.
ನನ್ನ ಅಭಿಪ್ರಾಯದಲ್ಲಿ ಜಾತಿಗಣತಿ ಸಮಾಜದಲ್ಲಿನ ಅಸಮಾನತೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಗೆ ರಾಮಬಾಣವಲ್ಲ. ಇದರ ಹೊರತಾಗಿಯೂ ಜಾತಿ ಗಣತಿಯ ನಿರ್ಧಾರವು ರಾಷ್ಟ್ರೀಯ ಮಟ್ಟದಲ್ಲಿ ದೀರ್ಘಕಾಲೀನ ಪರಿಣಾಮಗಳನ್ನು ಹೊಂದಿರಲಿದೆ.
ಹೀಗಾಗಿ ಪಕ್ಷವು ಎಲ್ಲರನ್ನೂ ಒಳಗೊಂಡ ದೇಶವನ್ನು ಕಟ್ಟುವ ಮತ್ತು ಸೌಹಾರ್ಧಯುತ ಸಮಾಜ ಕಟ್ಟುವ ತನ್ನ ಹಿಂದಿನ ನಿಲುವುಗಳಿಗೆ ಮರಳಬೇಕು. ಜೊತೆಗೆ ತೀವ್ರಗಾಮಿ ಪ್ರಾಂತೀಯ ಮತ್ತು ಜಾತಿ ಆಧರಿತ ಸಂಘಟನೆಗಳಿಂದ ದೂರ ಇರಬೇಕು’ ಎಂದು ಮನವಿ ಮಾಡಿದ್ದಾರೆ.