ಅಂದರ್ ಕೀ ಬಾತ್‌: ಉದ್ಧವ್‌ - ಬಿಜೆಪಿ ಮತ್ತಷ್ಟು ಹತ್ತಿರ?

KannadaprabhaNewsNetwork |  
Published : Jul 19, 2025, 01:00 AM ISTUpdated : Jul 19, 2025, 04:38 AM IST
Uddhav Thackeray

ಸಾರಾಂಶ

ಶಿವಸೇನೆ (ಯುಬಿಟಿ) ನಾಯಕ ಉದ್ಧವ ಠಾಕ್ರೆ ಹಾಗೂ ಬಿಜೆಪಿ 2 ವರ್ಷಗಳ ಗುದ್ದಾಟದ ನಂತರ ಮತ್ತೆ ಒಂದಾಗುತ್ತಾರಾ ಎಂಬ ಊಹಾಪೋಹಕ್ಕೆ ಶುಕ್ರವಾರ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ.  

ಮುಂಬೈ: ಶಿವಸೇನೆ (ಯುಬಿಟಿ) ನಾಯಕ ಉದ್ಧವ ಠಾಕ್ರೆ ಹಾಗೂ ಬಿಜೆಪಿ 2 ವರ್ಷಗಳ ಗುದ್ದಾಟದ ನಂತರ ಮತ್ತೆ ಒಂದಾಗುತ್ತಾರಾ ಎಂಬ ಊಹಾಪೋಹಕ್ಕೆ ಶುಕ್ರವಾರ ಮತ್ತಷ್ಟು ರೆಕ್ಕೆಪುಕ್ಕ ಬಂದಿವೆ. ಬಿಜೆಪಿ ಜತೆ ಒಂದಾಗ್ತೀರಾ? ಮಾತುಕತೆ ನಡೆದಿದೆಯೇ? ಎಂಬ ಪ್ರಶ್ನೆಗೆ ಅವರು ಯೇ ಅಂದರ್ ಕೀ ಬಾತ್‌ ಹೈ (ಇದು 4 ಗೋಡೆ ನಡುವಿನ ಮಾತು) ಎಂದಿದ್ದಾರೆ.

2 ದಿನದ ಹಿಂದೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಠಾಕ್ರೆ ಅವರಿಗೆ, ‘ನೀವು ಸರ್ಕಾರ ಸೇರಬಹುದು’ ಎಂದು ಕರೆ ನೀಡಿದ್ದರು. ಇದರ ಬೆನ್ನಲ್ಲೇ ಗುರುವಾರ ಉಭಯ ನಾಯಕರು 1 ತಾಸು ಗೌಪ್ಯ ಮಾತುಕತೆ ನಡೆಸಿದ್ದರು.

ಬ್ರಿಟನ್‌ನಲ್ಲಿ ಮತದಾನ ವಯಸ್ಸು 18ರಿಂದ 16ಕ್ಕೆ ಇಳಿಕೆ!

ಲಂಡನ್‌: ಬ್ರಿಟನ್‌ ಸರ್ಕಾರವು ಮತದಾನಕ್ಕೆ ಅರ್ಹತೆ ವರ್ಷವನ್ನು 18ರಿಂದ 16ಕ್ಕೆ ಇಳಿಕೆ ಮಾಡಿದೆ. ಈ ಬಗ್ಗೆ ಬ್ರಿಟನ್‌ ಉಪ ಪ್ರಧಾನಿ ಏಂಜೆಲಾ ರೈನರ್‌ ಎಕ್ಸ್‌ನಲ್ಲಿ ಖಾತ್ರಿಪಡಿಸಿದ್ದಾರೆ. ‘ನಮ್ಮ ಯುವ ಸಮುದಾಯವು ದೇಶದ ಅಭಿವೃದ್ಧಿ ಅಪಾರ ಕೊಡುಗೆ ನೀಡುತ್ತಿದೆ. ಹೀಗಾಗಿ ಅವರಿಗೆ ಮತದಾನವನ್ನು ಅವಕಾಶ ಮಾಡಿಕೊಡಲಾಗಿದೆ. ಅವರು ದೇಶಕ್ಕಾಗಿ ದುಡಿದು, ತೆರಿಗೆ ಕಟ್ಟಿ, ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಮತದಾನಕ್ಕೂ ಅವಕಾಶ ಮಾಡಿಕೊಟ್ಟಿದ್ದೇವೆ. ಇನ್ನು ಮುಂದೆ 16 ಮತ್ತು 17 ವರ್ಷದವರೂ ಸಹ ಮತದಾನ ಮಾಡಬಹುದಾಗಿದೆ’ ಎಂದು ತಿಳಿಸಿದ್ದಾರೆ.

ಶ್ರಾವಣ ನಿಮಿತ್ತ ಕೆಎಫ್‌ಸಿ ಬಂದ್‌ ಮಾಡಿದ ಹಿಂದೂ ಸಂಘಟನೆಗಳು

ಗಾಜಿಯಾಬಾದ್‌: ಶ್ರಾವಣ ಮಾಸದಲ್ಲಿ (ದಕ್ಷಿಣದಲ್ಲಿ ಆಷಾಢವಿದ್ದರೂ ಉತ್ತರದಲ್ಲಿ ಈಗ ಶ್ರಾವಣ) ನಡೆಯುವ ಶಿವಭಕ್ತರ ಕಾವಡ್‌ ಯಾತ್ರೆ ವೇಳೆ ಮಾಂಸ ಮಾರಾಟ ಮಾಡುತ್ತಿದ್ದನ್ನು ಖಂಡಿಸಿ ಹಿಂದೂ ರಕ್ಷಾದಳದ ಸದಸ್ಯರು ಶುಕ್ರವಾರ ಗಾಜಿಯಾಬಾದ್‌ನಲ್ಲಿ ಜನಪ್ರಿಯ ಆಹಾರ ಮಳಿಗೆಗಳಾದ ಕೆಎಫ್‌ಸಿ ಮತ್ತು ನಜೀರ್‌ ಫುಡ್ಸ್‌ ಬಾಗಿಲುಗಳನ್ನು ಬಲವಂತವಾಗಿ ಮುಚ್ಚಿಸಿದ ಘಟನೆ ನಡೆದಿದೆ.ನೂರಕ್ಕೂ ಹೆಚ್ಚು ಕಾರ್ಯಕರ್ತರು ಕೆಎಫ್‌ಸಿ ಮುಂಭಾಗ ‘ಜೈ ಶ್ರೀರಾಮ್, ಹರ ಹರ ಮಹಾದೇವ’ ಘೋಷಣೆಗಳನ್ನು ಕೂಗಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕಾವಡ್‌ ಯಾತ್ರೆ ಸಂದರ್ಭದಲ್ಲಿ ಮಾಂಸಹಾರಿ ಖಾದ್ಯಗಳನ್ನು ಮಾರದಂತೆ ಒತ್ತಾಯಿಸಿ, ಕೆಎಫ್‌ಸಿಯ ಬಾಗಿಲನ್ನು ಮುಚ್ಚುತ್ತಿರುವ ವಿಡಿಯೋ ವೈರಲ್ ಆಗಿದೆ.ಪೊಲೀಸರ ಸಮ್ಮುಖದಲ್ಲಿಯೇ ಘಟನೆ ನಡೆದಿದ್ದರೂ ಅವರು ಮೂಕ ಪ್ರೇಕ್ಷಕರಾಗಿದ್ದರು. ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೋಟ್‌ ಕೇಸ್‌ ದಾಖಲು ಮಾಡಿಕೊಂಡು ಘಟನೆಗೆ ಕಾರಣರಾದವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಮಹಾರಾಷ್ಟ್ರದ ಇಸ್ಲಾಂಪುರ ‘ಈಶ್ವರಪುರ’ವಾಗಿ ಮರುನಾಮಕರಣ

ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರವನ್ನು ಈಶ್ವರಪುರ ಎಂದು ಮರುನಾಮಕರಣ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಶುಕ್ರವಾರ ಘೋಷಿಸಿದೆ.ವಿಧಾನಸಭೆಯ ಮಳೆಗಾಲದ ಅಧಿವೇಶನದ ಕೊನೆಯ ದಿನ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರವು ಸಂಪುಟದ ನಿರ್ಧಾರವನ್ನು ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಲಿದೆ ಎಂದು ಸಚಿವ ಛಗನ್ ಭುಜಬಲ್‌ ತಿಳಿಸಿದ್ದಾರೆ.ಸಂಭಾಜಿ ಭಿಡೆ ನೇತೃತ್ವದ ಹಿಂದುತ್ವ ಸಂಘಟನೆ ಶಿವ ಪ್ರತಿಷ್ಠಾನ ಇಸ್ಲಾಂಪುರವನ್ನು ಈಶ್ವರಪುರ ಎಂದು ಮರುನಾಮಕರಣ ಮಾಡಬೇಕೆಂದು ಮನವಿ ಸಲ್ಲಿಸಿತ್ತು. ಈ ಬೇಡಿಕೆ 1986ರಿಂದಲೂ ಜಾರಿಯಲ್ಲಿತ್ತು. ಇದೀಗ ಸರ್ಕಾರ ಹೆಸರು ಬದಲಾವಣೆಯ ಘೋಷಣೆ ಮಾಡಿದೆ.

ಕಲಾಪ ವೇಳೆ ಮಹಾ ವಿಧಾನಭವನಕ್ಕೆ ಜನರ ಭೇಟಿಗೆ ನಿಷೇಧ

ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನ ಮಂಡಲ ಅಧಿವೇಶನದ ವೇಳೆ ವಿಧಾನ ಭವನಕ್ಕೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ ಎಂದು ಮಹಾರಾಷ್ಟ್ರ ಸ್ಪೀಕರ್‌ ರಾಹುಲ್‌ ನರ್ವೇಕಾರ್‌ ಆದೇಶ ಹೊರಡಿಸಿದ್ದಾರೆ.ಗುರುವಾರ ಎನ್‌ಸಿಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವ್ಹಾಡ್‌ ಮತ್ತು ಬಿಜೆಪಿ ಶಾಸಕ ಗೋಪಿಚಂದ್‌ ಪದಾಲ್ಕರ್‌ ಅವರ ಬೆಂಬಲಿಗರು ವಿಧಾನಸೌಧದ ಹಾಲ್‌ ಒಳಗೆ ನುಗ್ಗಿ ಗಲಾಟೆ ಮಾಡಿದ್ದರು. ಇದರ ಮರುದಿನವೇ ಸ್ಪೀಕರ್‌ ಈ ಆದೇಶ ಹೊರಡಿಸಿದ್ದಾರೆ.

‘ಮಂತ್ರಿಗಳು, ಶಾಸಕರು, ಅವರ ಅಧಿಕೃತ ಕಾರ್ಯದರ್ಶಿಗಳು, ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಕಲಾಪದ ವೇಳೆ ಇನ್ನಾರಿಗೂ ವಿಧಾನಭವನಕ್ಕೆ ಪ್ರವೇಶವಿರುವುದಿಲ್ಲ. ಒಂದು ವೇಳೆ ಉಲ್ಲಂಘಿಸಿದರೆ, ಆಯಾ ಶಾಸಕರು ಜವಾಬ್ದಾರಿ ಆಗುತ್ತಾರೆ’ ಎಂದು ಸ್ಪೀಕರ್‌ ಆದೇಶ ಹೊರಡಿಸಿದ್ದಾರೆ.

ಲಾಸ್‌ ಏಂಜಲೀಸ್‌ನಲ್ಲಿ ಸ್ಫೋಟ: 3 ಸಾವು

ಲಾಸ್ ಏಂಜಲೀಸ್: ಇಲ್ಲಿನ ಕೌಂಟಿ ಶೆರಿಫ್ ಇಲಾಖೆಯ ತರಬೇತಿ ಕೇಂದ್ರದಲ್ಲಿ ಗುರುವಾರ ಮಾರಕ ಸ್ಫೋಟ ಸಂಭವಿಸಿದ್ದು, 3 ಜನ ಸಾವನ್ನಪ್ಪಿದ್ದಾರೆ.ಇದು ಬಾಂಬ್ ನಿಷ್ಕ್ರಿಯ ದಳದ ವಾಹನದ ಪಕ್ಕದಲ್ಲಿ ಸಂಭವಿಸಿದೆ. ಸ್ಫೋಟವು ಹತ್ತಿರದ ಹಲವಾರು ವಾಹನಗಳ ಕಿಟಕಿಗಳನ್ನು ಸ್ಫೋಟಿಸುವಷ್ಟು ಪ್ರಬಲವಾಗಿತ್ತು. ಇದು ಸ್ಫೋಟದ ತೀವ್ರತೆಯನ್ನು ಸೂಚಿಸುತ್ತದೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅಧಿಕಾರಿಗಳು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.ತುರ್ತು ಪ್ರತಿಕ್ರಿಯೆ ನೀಡುವವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

PREV
Read more Articles on

Latest Stories

ಹೆಚ್‌ಆರ್‌ ಹೆಡ್‌ ಜತೆ ಸಿಕ್ಕಿಬಿದ್ದ ‘ಆಸ್ಟ್ರಾನಾಮರ್‌’ ಸಿಇಒ!
ಇಂಡಿಯಾ ಕೂಟದಿಂದ ಆಪ್‌ ಔಟ್‌ : ಸಂಜಯ ಸಿಂಗ್‌
ಫಿರ್‌ ಏಕ್‌ ಬಾರ್‌ ಎನ್‌ಡಿಎ ಸರ್ಕಾರ್ : ಮೋದಿ ಉದ್ಘೋಷ