ತೆಲಂಗಾಣದಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿ : ಪವನ್ ಕಲ್ಯಾಣ್ 1 ಕೋಟಿ ರೂ. ದೇಣಿಗೆ

KannadaprabhaNewsNetwork | Updated : Sep 12 2024, 07:48 AM IST

ಸಾರಾಂಶ

ತೆಲಂಗಾಣದಲ್ಲಿ ಭಾರೀ ಮಳೆಯಿಂದಾದ ಹಾನಿ ಪರಿಹಾರಕ್ಕಾಗಿ ಸ್ಥಾಪಿಸಲಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಟ ಪವನ್ ಕಲ್ಯಾಣ್ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.  

ಹೈದರಾಬಾದ್‌: ಇತ್ತೀಚೆಗೆ ತೆಲಂಗಾಣದಲ್ಲಿ ಸುರಿದ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಅದರ ಪರಿಹಾರಕ್ಕಾಗಿ ಸ್ಥಾಪಿಸಲಾಗಿರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್‌ ಕಲ್ಯಾಣ್‌ 1 ಕೋಟಿ ರು. ದೇಣಿಗೆ ನೀಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರನ್ನು ಸಿಎಂ ನಿವಾಸದಲ್ಲಿ ಭೇಟಿಯಾದ ಕಲ್ಯಾಣ್‌ 1 ಕೋಟಿ ರು. ಮೌಲ್ಯದ ಚೆಕ್‌ ನೀಡಿದರು.

ಈ ತಿಂಗಳ ಆರಂಭದಲ್ಲಿ ತೆಲಂಗಾಣದಲ್ಲಿ ಸುರಿದ ಭಾರೀ ಮಳೆಗೆ 29 ಮಂದಿ ಬಲಿಯಾಗಿದ್ದರು. ಪ್ರಾಥಮಿಕ ಅಂದಾಜಿನ ಪ್ರಕಾರ ಇದರಿಂದಾಗಿ ರಾಜ್ಯ ಸರ್ಕಾರಕ್ಕೆ 5,438 ಕೋಟಿ ರು. ನಷ್ಟವಾಗಿದೆ.

==

ತಮಿಳು ನಟ ಜಯಂ ರವಿ, ನಟಿ ಆರತಿ ವಿಚ್ಛೇದನ

ಚೆನ್ನೈ: ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ನಟಿಸಿರುವ ನಟ ಜಯಂ ರವಿ ಅವರು ತಮ್ಮ ಪತ್ನಿ ನಟಿ ಆರತಿ ಅವರಿಂದ ಬೇರ್ಪಡುತ್ತಿರುವುದಾಗಿ ತಿಳಿಸಿದ್ದಾರೆ.‘ನಾನು ದೀರ್ಘ ಆಲೋಚನೆ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದು ನಮ್ಮ ವೈಯಕ್ತಿಕ ವಿಷಯವಾಗಿರುವ ಕಾರಣ ಯಾರು ಯಾವುದೇ ಗಾಳಿ ಸುದ್ದಿ, ಸುಳ್ಳು ಸುದ್ದಿ ಹಬ್ಬಿಸಬೇಡಿ. ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಜಯಂ ರವಿ ಮತ್ತು ಆರತಿ ಅವರು 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ರವಿ ಇತ್ತೀಚೆಗೆ ನಟಿ ತ್ರಿಷಾ ಅಭಿನಯದ ಪೊನ್ನಿಯಿನ್‌ ಸೆಲ್ವನ್‌ ಚಿತ್ರದಲ್ಲಿ ಅಭಿನಯಿಸಿದ್ದರು.

==

ದುಷ್ಕೃತ್ಯದ ಮೇಲೆ ನಿಗಾಗೆ ರೈಲುಗಳಿಗೆ ಕ್ಯಾಮರಾ: ರೈಲ್ವೆ ನಿರ್ಧಾರ

ನವದೆಹಲಿ: ಇತ್ತೀಚೆಗೆ ರೈಲ್ವೆ ಹಳಿಗಳ ಮೇಲೆ ಸಿಲಿಂಡರ್‌, ಸಿಮೆಂಟ್ ಬ್ಲಾಕ್‌ನಂಥ ತಡೆಗಳನ್ನು ಇಟ್ಟು ರೈಲು ಹಳಿ ತಪ್ಪಿಸುವ ವಿಧ್ವಂಸಕ ಕೃತ್ಯ ಹೆಚ್ಚುತ್ತಿರುವ ಕಾರಣ, ಇಂಥವುಗಳ ಮೇಲೆ ನಿಗಾ ಇಡಲು ಎಲ್ಲ ರೈಲುಗಳ ಎಂಜಿನ್‌ನ ಮುಂಭಾಗ, ರೈಲು ಎರಡೂ ಬದಿ ಹಾಗೂ ರೈಲಿನ ಹಿಂಭಾಗಕ್ಕೆ ಕ್ಯಾಮೆರಾ ಅಳವಡಿಸಲು ರ್ನಿರಿಸಲಾಗಿದೆ. ರೈಲ್ವೆ ಗೇಟುಗಳಲ್ಲಿ ಕೂಡ ಕ್ಯಾಮರಾ ಹಾಕಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. ಕಳೆದ 2 ದಿನಗಳಲ್ಲಿ ಇಂಥ 2 ಕೃತ್ಯಗಳು ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಡೆದಿದ್ದವು. ಪಾಕ್‌ ಉಗ್ರರು ಈ ಕೃತ್ಯದ ಹಿಂದಿದ್ದಾರೆ ಎನ್ನಲಾಗಿದೆ.

Share this article